ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹಾರಿಸಿ ಶಿಕ್ಷಕಿ ಕೊಲೆ: ಆರೋಪಿಯೂ ಆತ್ಮಹತ್ಯೆಗೆ ಶರಣು

ವಿದ್ಯಾರ್ಥಿ, ಕಾರ್ಮಿಕನಿಗೂ ಗಾಯ
Last Updated 14 ಜೂನ್ 2019, 11:30 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಸಮೀಪದ ಬಾಳೆಲೆಯಲ್ಲಿ ಶುಕ್ರವಾರ ಶಿಕ್ಷಕಿಯ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಕೊಲೆ ಮಾಡಿ ತಾನೂ ಅದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಾಳೆಲೆ ನಿವಾಸಿ, ಗೋಣಿಕೊಪ್ಪಲು ಲಯನ್ಸ್ ಶಾಲೆಯ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಕೊಲೆಯಾದವರು. ಆರೋಪಿ ಮಾಚಿಮಾಡ ಜಗದೀಶ್ (55) ಶಿಕ್ಷಕಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಿಗ್ಗೆ 8ರ ಸುಮಾರಿಗೆ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕೃತ್ಯಕ್ಕಾಗಿ ಕಾಫಿ ತೋಟದಲ್ಲಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿ, ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಆಶಾ ಕಾವೇರಮ್ಮ ಗುಂಡೇಟಿಗೆ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ. ಈ ಸ್ಥಳದಿಂದ 20 ಅಡಿ ದೂರದ ಕಾಫಿ ತೋಟದಲ್ಲಿ ಆರೋಪಿಯೂ ಗುಂಡು ಹಾರಿಸಿಕೊಂಡಿದ್ದಾನೆ.

ಘಟನಾ ನಡೆದ ಮಾರ್ಗದಲ್ಲಿಯೇ ಕಾಲೇಜಿಗೆ ತೆರಳುತ್ತಿದ್ದ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೈ.ಕೆ.ದಿನೇಶ್ ಹಾಗೂ ತೋಟ ಕಾರ್ಮಿಕ ಪಿ.ಬಿ.ಪೆಮ್ಮಿ ಅವರ ಮೇಲೂ ಗುಂಡಿನ ದಾಳಿ ನಡೆದಿದೆ. ಇಬ್ಬರೂ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿಕ್ಷಕಿಯನ್ನು ಹತ್ಯೆ ಮಾಡಲು ಆಕೆಯ ಮನೆ ಸಮೀಪವೇ ಬೆಳಿಗ್ಗೆನಿಂದಲೇ ಕಾದು ಕುಳಿತಿದ್ದ. ಶಿಕ್ಷಕಿ ಮನೆಯಿಂದ ಹೊರಬಂದ ತಕ್ಷಣವೇ ಮೊದಲ ಬಾರಿಗೆ ಗುಂಡು ಹಾರಿಸಿದ್ದಾನೆ. ಆದರೆ, ಅದು ತಪ್ಪಿದೆ. ಮತ್ತೆ ಬೆನ್ನಟ್ಟಿ ಮನೆಯಿಂದ 100 ಮೀಟರ್‌ ದೂರದ ಮುಖ್ಯರಸ್ತೆಯ ಬದಿಯಲ್ಲಿ ಮತ್ತೆರಡು ಸುತ್ತಿನ ಗುಂಡು ಹಾರಿಸಿ, ಕೊಲೆ ಮಾಡಿದ್ದಾನೆ.

ಹಲವು ವರ್ಷಗಳಿಂದ ಶಿಕ್ಷಕಿ ಆಶಾ ಕಾವೇರಮ್ಮ ಹಾಗೂ ಜಗದೀಶ್‌ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು.

ಶಿಕ್ಷಕಿಯ ಸ್ನೇಹ ಸಂಪಾದಿಸಲು ಜಗದೀಶ್, ಬ್ಲ್ಯಾಕ್‌ಮೇಲ್ ತಂತ್ರವನ್ನು ಅನುಸರಿಸಿದ್ದ. ಗೋಣಿಕೊಪ್ಪಲು ವೃತ್ತಿಪರ ಫೋಟೊಗ್ರಾಪರ್‌ ಒಬ್ಬರಲ್ಲಿ ಆಕೆಯ ಫೋಟೊವನ್ನು ಬಳಸಿ, ನೀಲಿಚಿತ್ರ ತಾರೆಯ ಫೋಟೊದೊಂದಿಗೆ ಹೊಂದಾಣಿಕೆ ಮಾಡಿ ಬ್ಲ್ಯಾಕ್‌ಮೇಲ್‌ ತಂತ್ರ ಅನುಸರಿಸಿದ್ದ. ಈ ಸಂಬಂಧ ದೂರು ದಾಖಲಾಗಿತ್ತು. ಆ ಪ್ರಕರಣದಲ್ಲಿ ಜಗದೀಶ್ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.

ಇದನ್ನೇ ಜಿದ್ದಾಗಿ ತೆಗೆದುಕೊಂಡಿದ್ದ ಜಗದೀಶ್, ಜೈಲಿನಿಂದ ಬಂದ ನಂತರ ‘ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಸಿದ್ದ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು. ಹೆದರಿ ಮನೆಯ ಸುತ್ತ ಶಿಕ್ಷಕಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿಕೊಂಡಿದ್ದರು. ಆಶಾ ಕಾವೇರಮ್ಮ 15 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಬಾಳೆಲೆ ನೆಲೆಸಿದ್ದರು. ಇಬ್ಬರುಹೆಣ್ಣು ಮಕ್ಕಳಿದ್ದಾರೆ.

ವಿದ್ಯಾರ್ಥಿಗಳ ಕಂಬನಿ:

ತಮ್ಮ ಪ್ರೀತಿಯ ಶಿಕ್ಷಕಿ ಮೃತಪಟ್ಟ ಸುದ್ದಿಯನ್ನು ತಿಳಿಯುತ್ತಿದ್ದಂತೆ ಗೋಣಿಕೊಪ್ಪಲು ಆಸ್ಪತ್ರೆ ಬಳಿಗೆ ಬಂದ ವಿದ್ಯಾರ್ಥಿಗಳು ಕಂಬನಿ ಸುರಿಸಿದರು.

‘ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸೂಕ್ತ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪನ್ನೇಕರ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT