ಬುಧವಾರ, ಫೆಬ್ರವರಿ 19, 2020
23 °C

ಆಧ್ಯಾತ್ಮಿಕ ಪ್ರವಾಸದಲ್ಲಿ ನಿತ್ಯಾನಂದ: ಸಿಐಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮೀಜಿ ಸದ್ಯ ತಲೆ ಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ’ ಎಂದು ಸಿಐಡಿ ಹೈಕೋರ್ಟ್‌ಗೆ ತಿಳಿಸಿದೆ.

‘ನಿತ್ಯಾನಂದ ಸ್ವಾಮೀಜಿಗೆ 2010ರಲ್ಲಿ ನೀಡಿರುವ ಜಾಮೀನು ರದ್ದುಪಡಿಸಬೇಕು’ ಎಂದು ಕೋರಿ ಪ್ರಕರಣದ ಮೂಲ ದೂರುದಾರ ಕೆ. ಲೆನಿನ್ ಸಲ್ಲಿಸಿರುವ ಅರ್ಜಿಯನ್ನು ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ವಿ.ಎಸ್.ಹೆಗಡೆ ಪ್ರಕರಣಕ್ಕೆ ಸಂಬಂಧಸಿದ ತನಿಖಾ ವರದಿ ಸಲ್ಲಿಸಿ, ‘ಸದ್ಯ ವಿಚಾರಣೆ ನ್ಯಾಯಾಲಯದಲ್ಲಿ ಲೆನಿನ್‌ ಅವರ ಪಾಟಿಸವಾಲು ನಡೆಯುತ್ತಿದೆ. ಹೀಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳುವತನಕ ಸ್ವಾಮೀಜಿ ಹಾಜರಾತಿ ಅಗತ್ಯವಿಲ್ಲ. ಅವರಿಗೆ ಸಮನ್ಸ್ ಜಾರಿಯಾದ ನಂತರ ವಿಚಾರಣೆ ನಡೆಸುವುದು ಸೂಕ್ತ’ ಎಂದು ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪುನ್ನು ಕಾಯ್ದಿರಿಸಿದೆ.

ಇದಕ್ಕೂ ಮುನ್ನ, ‘ತನಿಖಾಧಿಕಾರಿ, ನೋಟಿಸ್‌ ಅನ್ನು ಸ್ವಾಮೀಜಿ ಬದಲಿಗೆ ಕುಮಾರಿ ಅಚಲಾನಂದ ಅವರಿಗೆ ಜಾರಿಗೊಳಿಸಿದ್ದಾರೆ’ ಎಂಬ ವಿವರಣೆಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಲೆನಿನ್‌ ಪರ ವಕೀಲರು, ’ನಿತ್ಯಾನಂದ ಸ್ವಾಮೀಜಿ ಕೊನೆಯ ಬಾರಿಗೆ ವಿಚಾರಣಾ ನ್ಯಾಯಾಲಯದ ಮುಂದೆ 2018ರ ಜೂನ್ 5ರಂದು ಹಾಜರಾಗಿದ್ದರು. ಆನಂತರ ಹಾಜರಾಗಿಲ್ಲ. ಅವಧಿ ಮುಗಿದ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು