ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರದಲ್ಲಿ ಕ್ಷೀರ ಕ್ರಾಂತಿ

ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ದಾಪುಗಾಲು; ಸಮೃದ್ಧಿಯತ್ತ ಹೈನುಗಾರಿಕೆ
Last Updated 1 ಜೂನ್ 2018, 11:02 IST
ಅಕ್ಷರ ಗಾತ್ರ

ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ ಅಪಾರ ಸಂಖ್ಯೆಯ ರೈತ ಕುಟುಂಬಗಳಿಗೆ ಹೈನುಗಾರಿಕೆ ವರವಾಗಿ ಪರಿಣಮಿಸಿದೆ. ಜಲಸಂಪನ್ಮೂಲದ ಲಭ್ಯತೆ ಹೆಚ್ಚಿದಂತೆ; ಹೊಳೆ ದಂಡೆಯ ಗ್ರಾಮಗಳು, ಕೃಷ್ಣೆಯ ಕೃಪೆ ದೊರೆತ ಹಳ್ಳಿಗಳಲ್ಲಿ ಇದೀಗ ಹಾಲಿನ ಹೊಳೆ ಹರಿಯಲಾರಂಭಿಸಿದೆ.

ವರ್ಷದಿಂದ ವರ್ಷಕ್ಕೆ ‘ಕ್ಷೀರೋದ್ಯಮದ’ ಪ್ರಗತಿ ದಾಪುಗಾಲಿನಲ್ಲಿ ಸಾಗಿದೆ. ಹೈನುಗಾರಿಕೆ ನಡೆಸಲು ಒಲವು ತೋರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ಈ ಭಾಗದ ರೈತ ಕುಟುಂಬಗಳು ಆರ್ಥಿಕವಾಗಿ ಸದೃಢವಾಗುತ್ತಿವೆ.

1986ರ ನವೆಂಬರ್‌ 20ರಂದು ಆರಂಭಗೊಂಡಿದ್ದ ಅವಿಭಜಿತ ವಿಜಯಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮೂರು ದಶಕದ ಅವಧಿಯಲ್ಲಿ ಲಾಭಕ್ಕಿಂತ ನಷ್ಟ ಕಂಡಿದ್ದೇ ಹೆಚ್ಚು. 2011ರಿಂದೀಚೆಗೆ ಒಕ್ಕೂಟವೂ ಸತತ ಲಾಭ ಗಳಿಕೆಯಲ್ಲಿ ಮುಂದಿದ್ದು, ‘ಕ್ಷೀರೋದ್ಯಮ’ದಲ್ಲಿ ಪ್ರಗತಿದಾಯಕ ಬೆಳವಣಿಗೆ ಗೋಚರಿಸಿದೆ.

ಜಮಖಂಡಿಯಲ್ಲಿ ಹೆಚ್ಚು ಸಂಗ್ರಹ: ಅವಿಭಜಿತ ವಿಜಯಪುರ ಜಿಲ್ಲೆಯ ಹಾಲು ಒಕ್ಕೂಟ ಪ್ರಸ್ತುತ 1.91 ಲಕ್ಷ ಲೀಟರ್‌ ಹಾಲನ್ನು ಸಂಗ್ರಹಿಸುತ್ತಿದೆ. ಇದರಲ್ಲಿ ಜಮಖಂಡಿ, ಮುಧೋಳ, ಮಹಾಲಿಂಗಾಪುರದ ಪಾಲು 1.28 ಲಕ್ಷ ಲೀಟರ್‌ನಷ್ಟಿದೆ. ಈ ಹಂಗಾಮಿನಲ್ಲಿ 2.5 ಲಕ್ಷ ಲೀಟರ್‌ ಹಾಲು ಸಂಗ್ರಹಿಸುವ ಗುರಿಯನ್ನು ಒಕ್ಕೂಟ ಹೊಂದಿದೆ.

ಹಿಂದಿನ ವರ್ಷದಲ್ಲಿ ಈ ಅವಧಿಯಲ್ಲಿ 1.60 ಲಕ್ಷ ಲೀಟರ್‌ ಹಾಲು ಸಂಗ್ರಹಣೆ ನಡೆಸಿತ್ತು. ಈ ಬಾರಿ ಆರಂಭದಲ್ಲೇ 31000 ಲೀಟರ್‌ ಹಾಲು ಸಂಗ್ರಹಣೆ ಹೆಚ್ಚಿದೆ. ಇದು ಹಂಗಾಮು ಮುಗಿಯುವ ಹೊತ್ತಿಗೆ ದುಪ್ಪಟ್ಟುಗೊಳ್ಳಲಿದೆ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಮಖಂಡಿ ಭಾಗದಲ್ಲಿ ಕೃಷ್ಣಾ ಹೊಳೆ ಹರಿಯುವುದು. ನೀರಾವರಿ ಸೌಲಭ್ಯವಾಗಿರುವುದರ ಜತೆಗೆ ಕಬ್ಬಿನ ಬೆಳೆಗೆ ಗೊಬ್ಬರಕ್ಕಾಗಿ ಹೈನುಗಾರಿಕೆ ನಡೆಸುವವರು ಇದ್ದಾರೆ. ಕಬ್ಬಿನ ಬೆಳೆಯ ಪ್ರದೇಶದಲ್ಲಿ ವಿಫುಲವಾಗಿ ಕಬ್ಬಿನ ವಾಡಿ ದೊರಕುವುದರಿಂದ ಎಂಟು ತಿಂಗಳು ಜಾನುವಾರು ಮೇವಿಗೆ ಪರಿತಪಿಸಬೇಕಿಲ್ಲ. ಇದರ ಪರಿಣಾಮ ಇಲ್ಲಿ ಹೈನುಗಾರಿಕೆ ಸಮೃದ್ಧವಾಗಿ ನಡೆದಿದೆ’ ಎಂದು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ.ಎಸ್‌.ಡಿ.ದೀಕ್ಷಿತ್‌ ಮಾಹಿತಿ ನೀಡಿದರು.

‘ಇದರ ಜತೆಗೆ ಖಾಸಗಿ ಡೇರಿಗಳ ಪೈಪೋಟಿ ಇಳಿಮುಖಗೊಂಡಿದೆ. ಒಂದು ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತಿರುವುದು ಹೈನೋದ್ಯಮಕ್ಕೆ ಪೂರಕವಾಗಿದೆ’ ಎಂದು ಹೇಳಿದರು.

ರಾಷ್ಟ್ರೀಯ ಹೈನು ಯೋಜನೆ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಒಕ್ಕೂಟದ ವ್ಯಾಪ್ತಿಯಲ್ಲಿ ‘ರಾಷ್ಟ್ರೀಯ ಹೈನು ಯೋಜನೆ’ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ₹ 9 ಕೋಟಿ ಅನುದಾನ ದೊರೆತಿದೆ. ₹ 4.5 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದರೆ, ಉಳಿದ ₹ 4.5 ಕೋಟಿ ಅನುದಾನವನ್ನು ಒಕ್ಕೂಟ ಭರಿಸಿದೆ.

ಗ್ರಾಮಗಳಲ್ಲಿ ಹೊಸ ಹಾಲು ಉತ್ಪಾದಕರ ಸಹಕಾರ ಸಂಘ ರಚನೆಗೆ ಈ ಅನುದಾನ ಬಳಸಿಕೊಳ್ಳಬಹುದಾಗಿದೆ. ಸ್ಥಾಪನೆಯಾದ ಹೊಸ ಸಂಘಕ್ಕೆ ₹ 2 ಲಕ್ಷ ಮೊತ್ತದ ಹಾಲು ಸಂಗ್ರಹಣ ಉಪಕರಣ, ಯಂತ್ರೋಪಕರಣ ಸೇರಿದಂತೆ ಇನ್ನಿತರೆ ಪರಿಕರ ನೀಡಲಾಗುತ್ತಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಯೋಜನೆಯಡಿ ಬಲ್ಕ್ ಮಿಲ್ಕ್‌ ಕೂಲರ್‌ ಘಟಕಗಳನ್ನು ಸ್ಥಾಪಿಸಲಾಗಿದೆ.

ಇದರಿಂದ ಉತ್ತೇಜಿತರಾಗಿ ಅನೇಕ ಹಳ್ಳಿಗಳ ರೈತರು ಸ್ವಯಂ ಪ್ರೇರಿತರಾಗಿ ಸಂಘಗಳ ರಚನೆಗೆ ಮುಂದಾಗಿದ್ದರಿಂದ 106 ಹೊಸ ಸಹಕಾರ ಸಂಘ ಸ್ಥಾಪನೆಗೊಂಡಿವೆ. ಇದರ ಪರಿಣಾಮ ಹಾಲು ಉತ್ಪಾದನೆಯೂ ಹೆಚ್ಚಳಗೊಂಡಿದೆ. ಈ ಯೋಜನೆ 2019ರ ಮಾರ್ಚ್‌ವರೆಗೂ ಅಸ್ತಿತ್ವದಲ್ಲಿರಲಿದ್ದು, ಆಸಕ್ತರು ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ ತಿಳಿಸಿದರು.

ಸೊಲ್ಲಾಪುರದಲ್ಲಿ ‘ನಂದಿನಿ ಪಾರ್ಲರ್‌’

ಸೊಲ್ಲಾಪುರದ ಮಾರುಕಟ್ಟೆಗೆ ಒಕ್ಕೂಟ ನಿತ್ಯ 6,700 ಲೀಟರ್‌ ಪ್ಯಾಕಿಂಗ್‌ ಎಮ್ಮೆ ಹಾಲು ಪೂರೈಸಿದರೆ, ಮೀರಜ್‌, ಸಾಂಗ್ಲಿ ಮಾರುಕಟ್ಟೆಗೆ ಟ್ಯಾಂಕರ್‌ಗಳಲ್ಲಿ 8,000 ಲೀಟರ್‌ ಹಾಲು ಪೂರೈಸುತ್ತಿದೆ.

ಇದೇ ಮೊದಲ ಬಾರಿಗೆ ಹೊರ ರಾಜ್ಯದಲ್ಲಿ ‘ನಂದಿನಿ ಪಾರ್ಲರ್‌’ ತೆರೆಯಲಾಗಿದೆ. ಸೊಲ್ಲಾಪುರದಲ್ಲಿ ಈಗಾಗಲೇ ಎರಡು ಪಾರ್ಲರ್‌ ಕಾರ್ಯಾಚರಿಸುತ್ತಿದ್ದು, ನಂದಿನಿ ಉತ್ಪನ್ನಗಳಾದ ಪೇಡಾ, ಕೊಲ್ಹಾರದ ಕಪ್‌ ಮೊಸರಿಗೆ ಭಾರಿ ಬೇಡಿಕೆಯಿದೆ ಎಂದು ಡಿ.ಅಶೋಕ ಹೇಳಿದರು.

ವಿಜಯಪುರ ನಗರದಲ್ಲಿ ಈಗಾಗಲೇ ನಾಲ್ಕು ಪಾರ್ಲರ್‌ಗಳು ಕಾರ್ಯಾಚರಿಸುತ್ತಿದ್ದು, ಭರ್ಜರಿ ವಹಿವಾಟು ನಡೆಸಿವೆ. ಇದೀಗ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಗಾಂಧಿ ವೃತ್ತ, ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಎಪಿಎಂಸಿ ಯಾರ್ಡ್‌, ಗೋದಾವರಿ ಹೋಟೆಲ್‌ ಬಳಿ ಆರಂಭಿಸಲಾಗುವುದು ಎಂದು ತಿಳಿಸಿದರು.

**
ನಿಗದಿತ ಬೆಲೆ, ಪ್ರೋತ್ಸಾಹಧನ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿರುವುದರಿಂದ ಹೈನೋದ್ಯಮದತ್ತ ಚಿತ್ತ ಹರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕ್ಷೀರ ಕ್ರಾಂತಿಗೆ ಇದು ಪೂರಕವಾಗಿದೆ
ಡಿ.ಅಶೋಕ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT