ವೀರರಿಗೆ ಸಿಗದ ನಿವೇಶನ; ಪತ್ನಿಯರಿಗೆ ತಪ್ಪಿಲ್ಲ ಸರ್ಕಾರಿ ಕಚೇರಿಗೆ ಸುತ್ತುವ ಕಾಯಕ

7
ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೆ 17 ವರ್ಷಗಳಿಂದ ಸಿಗದ ನ್ಯಾಯ

ವೀರರಿಗೆ ಸಿಗದ ನಿವೇಶನ; ಪತ್ನಿಯರಿಗೆ ತಪ್ಪಿಲ್ಲ ಸರ್ಕಾರಿ ಕಚೇರಿಗೆ ಸುತ್ತುವ ಕಾಯಕ

Published:
Updated:

ಮೈಸೂರು: ಸೈನಿಕರ ದಿನವನ್ನು ಜ. 7ರಂದು ಆಚರಿಸಲಾಗುತ್ತದೆ. ಅಂದು ಸೈನಿಕರ ಸೇವೆ ಸ್ಮರಿಸಲಾಗುತ್ತದೆ. ಆದರೆ ಅವರ ಕಲ್ಯಾಣದ ಕಡೆ ಗಮನ ಹರಿಸುವುದು ಕಡಿಮೆ. ಸೌಲಭ್ಯ ಪಡೆದುಕೊಳ್ಳಲು ಸರ್ಕಾರಿ ಕಚೇರಿಗಳ ಕಂಬ ಸುತ್ತುವುದು ಮಾತ್ರ ತಪ್ಪುವುದಿಲ್ಲ.

ಈ ಸೈನಿಕರು ಯುದ್ಧದಲ್ಲಿ ಮಡಿದು 17 ವರ್ಷಗಳೇ ಆಗಿದ್ದರೂ, ಅವರ ಪತ್ನಿಯರಿಗೆ ಸಿಗಬೇಕಿರುವ ನಿವೇಶನ ಇದುವರೆಗೂ ಸಿಕ್ಕಿಲ್ಲ.

ಯೋಧರಾದ ಸುಬೇದಾರ್‌ ರಮೇಶ್ ಖಂಡಪ್ಪ ಪೊಲೀಸ್‌ ಪಾಟೀಲ್‌, ಲೆಫ್ಟಿನೆಂಟ್ ಕರ್ನಲ್ ಸಿ.ಎನ್‌.ನಂಜಪ್ಪ ಯುದ್ಧದಲ್ಲಿ ಮಡಿದವರು. ಇವರ ಪತ್ನಿಯರಾದ ಲಕ್ಷ್ಮಿ ಪಾಟೀಲ್‌, ಪಿ.ಪಿ.ಕವಿತಾ ಅವರಿಗೆ ಬೆಂಗಳೂರಿನ ಬಿನ್ನಮಂಗಲ 2ನೇ ಹಂತದ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಸರ್ಕಾರ ಆದೇಶಿಸಿದೆ. ಇವರ ಜತೆಗೆ ಕವಿತಾ, ಆಶಾ, ಉಷಾ ಎಂಬುವವರಿಗೂ ನಿವೇಶನ ನೀಡಬೇಕಿದೆ. ಆದರೆ, ಇದುವರೆಗೆ ನಿವೇಶನ ಸಿಕ್ಕಿಲ್ಲ. ಪ್ರತಿನಿತ್ಯ ಕಚೇರಿ ಬಾಗಿಲು ಮುಂದೆ ನಿಲ್ಲುವಂತೆ ಆಗಿದೆ.

2001 ಡಿ. 31ರಂದು ಪಂಜಾಬ್‌ನಲ್ಲಿ ಉಗ್ರವಾದಿಗಳ ಜತೆಗಿನ ಗುಂಡಿನ ಚಕಮಕಿಯಲ್ಲಿ ರಮೇಶ್‌ ಖಂಡಪ್ಪ ನಿಧನರಾಗಿದ್ದರು. ಇತರ ಸೈನಿಕರೂ ದೇಶಕ್ಕಾಗಿ ಹೋರಾಡಿ ಮೃತಪಟ್ಟಿದ್ದರು. ಇವರೆಲ್ಲರೂ 22 ವರ್ಷ ಸೇನೆಯಲ್ಲಿ ದುಡಿದವರು. ನಿಧನದ ಬಳಿಕ ಅಂದಿನ ರಾಜ್ಯಪಾಲರು ನಿವೇಶನ ನೀಡುವಂತೆ ಆದೇಶಿಸಿದ್ದರು. ಅದರಂತೆ ಸರ್ಕಾರಿ ಆದೇಶವೂ ಹೊರಬಿದ್ದಿದ್ದು, ಬಿನ್ನ
ಮಂಗಲದಲ್ಲಿ ನಿವೇಶನಗಳನ್ನು ಗುರುತಿಸಲಾಗಿತ್ತು. ಆದರೆ, ಆ ನಿವೇಶನಗಳು ಇವರಿಗೆ ಸಿಗಲೇ ಇಲ್ಲ.

ಮೈಸೂರಿಗೆ ಸ್ಥಳಾಂತರ: ಕೋರ್ಟ್‌ ಆದೇಶದ ನಂತರ ಮೈಸೂರಿನಲ್ಲಿ ನಿವೇಶನ ನೀಡುವುದಾಗಿ 2018 ಜುಲೈ 24ರಂದು ಯೋಧರ ಪತ್ನಿಯರಿಗೆ ಸರ್ಕಾರ ಪತ್ರ ಬರೆದಿದೆ. ಈ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ (ಮುಡಾ) ಪತ್ರ ರವಾನೆಯಾಗಿದೆ. ‘ಮುಡಾ’ ಸಭೆಯಲ್ಲೂ ಚರ್ಚೆಯಾಗಿದೆ. ಆದರೆ, ನಿವೇಶನ ಮಾತ್ರ ಸಿಕ್ಕಿಲ್ಲ. 17 ವರ್ಷಗಳಿಂದ ನಿವೇಶನ ಪಡೆದುಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ.

ಮೇಲಾಧಿಕಾರಿಗಳಿಂದಲೇ ಅನ್ಯಾಯ

ಸೈನಿಕರ ಪತ್ನಿಯರಿಗೆ ನೀಡಲೆಂದು ನಿಗದಿಯಾಗಿದ್ದ ನಿವೇಶನಗಳನ್ನು ಸೈನ್ಯದ ಮೇಲಧಿಕಾರಿಗಳೇ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನುವುದು ಪತ್ನಿಯರ ಆರೋಪ. ‘ಬಿನ್ನಮಂಗಲದಲ್ಲಿ ಚದರ ಅಡಿಗೆ ₹ 1,500ಕ್ಕೂ ಹೆಚ್ಚು ಮೌಲ್ಯವಿದ್ದು ಅದನ್ನು ನಮಗೆ ಸಿಗದಂತೆ ನೋಡಿಕೊಳ್ಳಲಾಗಿದೆ. ಸೈನಿಕರ ಹುದ್ದೆಗೆ ಅನುಸಾರವಾಗಿ 30X40 ಹಾಗೂ 60X40 ನಿವೇಶನಗಳನ್ನು ನೀಡಲಾಗಿತ್ತು. ಅವನ್ನು ಸೇನೆಯ ಮೇಲಧಿಕಾರಿಗಳೇ ಅಕ್ರಮವಾಗಿ ಪಡೆದುಕೊಂಡಿದ್ದಾರೆ’ ಎಂದು ಫಲಾನುಭವಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ನ್ಯಾಯ ಸಿಗದಿದ್ದಾಗ ಹೈಕೋರ್ಟ್ ಮೊರೆ ಹೋಗಿದ್ದು, ನಿವೇಶನ ನೀಡುವಂತೆ ನ್ಯಾಯಾಲಯ 2018ರ ಜ.1ರಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.

**

ನಮಗೆ ನಿವೇಶನ ಕೊಡುವ ಮೂಲಕ ಸರ್ಕಾರವು ಸೈನಿಕರ ದಿನವನ್ನು ಆಚರಿಸಲಿ. ವೇದಿಕೆ ಮೇಲೆ ಸೈನಿಕರ ಕುಟುಂಬದವರನ್ನು ಕೂರಿಸಿ ಹಾಸ್ಯ ಮಾಡುವಂತೆ ಆಗದಿರಲಿ
– ಹುತಾತ್ಮ ಯೋಧರೊಬ್ಬರ ಪತ್ನಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !