‘ವಿಶ್ವವಿದ್ಯಾಲಯಗಳಿಗೆ ನಿಶ್ಚಿತ ಠೇವಣಿ ಅಗತ್ಯವಿಲ್ಲ’

7
ವಿಟಿಯು 20ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ರಾಜ್ಯಪಾಲ

‘ವಿಶ್ವವಿದ್ಯಾಲಯಗಳಿಗೆ ನಿಶ್ಚಿತ ಠೇವಣಿ ಅಗತ್ಯವಿಲ್ಲ’

Published:
Updated:
ಬೆಳಗಾವಿಯ ವಿಟಿಯುನಲ್ಲಿ ಶುಕ್ರವಾರ ನಡೆದ 20ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನಿವೃತ್ತ ಕುಲಪತಿಗಳಾದ ಕೆ.ಬಾಲವೀರ ರೆಡ್ಡಿ, ಎಸ್‌. ರಾಜಶೇಖರಯ್ಯ, ಎಚ್‌.ಪಿ. ಖಿಂಚ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವರಾದ ಸತೀಶ ಅಣ್ಣಿಗೇರಿ, ಎಚ್‌.ಎನ್‌. ಜಗನ್ನಾಥರೆಡ್ಡಿ, ಕುಲಪತಿ ಪ್ರೊ.ಕರಿಸಿದ್ದಪ್ಪ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ರಾಜ್ಯಪಾಲ ವಜೂಭಾಯಿ ಆರ್. ವಾಲಾ, ಹಿರಿಯ ವಿಜ್ಞಾನಿ ವಿ.ಕೆ. ಅತ್ರೆ ಇದ್ದಾರೆ

ಬೆಳಗಾವಿ: ‘ವಿಶ್ವವಿದ್ಯಾಲಯಗಳು ನಿಶ್ಚಿತ ಠೇವಣಿ (ಎಫ್‌ಡಿ) ಇಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳ ಜ್ಞಾನ ವೃದ್ಧಿಯೇ ಈ ಸಂಸ್ಥೆಗಳ ನಿಜವಾದ ಖಜಾನೆಯಾಗಬೇಕು’ ಎಂದು ರಾಜ್ಯಪಾಲ ವಜುಭಾಯಿ ಆರ್. ವಾಲಾ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಶುಕ್ರವಾರ ನಡೆದ 20ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘1998ರಿಂದ 2016ರ ಅವಧಿಯಲ್ಲಿ ತೆರಿಗೆ ವಿನಾಯಿತಿ ಸಿಗದಿರುವುದರಿಂದ, ವಿಟಿಯು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದ ₹ 441 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು. ₹ 127 ಕೋಟಿ ದಂಡ ಪಾವತಿಸುವಂತೆ ನೋಟಿಸ್‌ ನೀಡಿತ್ತು. ತೆರಿಗೆ ವಿನಾಯಿತಿ ಕೋರಿ ರಾಜ್ಯ ಸರ್ಕಾರದಿಂದ ಸಲ್ಲಿಸಿದ್ದ ಮನವಿಗೆ ಕೇಂದ್ರ ಸ್ಪಂದಿಸಿದೆ. ಇದರಿಂದಾಗಿ, ಮುಟ್ಟುಗೋಲು ಹಾಕಿಕೊಂಡಿದ್ದ ಹಣ ದೊರೆಯಲಿದೆ. ಈ ಬಗ್ಗೆ ಈಚೆಗಷ್ಟೇ ಅಧಿಕೃತ ಮಾಹಿತಿ ಬಂದಿದೆ’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದ್ದನ್ನು ಉಲ್ಲೇಖಿಸಿದ ರಾಜ್ಯಪಾಲರು, ‘ಆ ಹಣವನ್ನು ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಬಳಸಿಕೊಳ್ಳಬೇಕು. ದೇಶ ಸಶಕ್ತಗೊಳಿಸುವ ಪದವೀಧರರನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು.

ಆತ್ಮಾವಲೋಕನ ಮಾಡಿಕೊಳ್ಳಿ:

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ‘ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿನ ಬೋಧನಾ ಸಿಬ್ಬಂದಿಗೆ ಒಳ್ಳೆಯ ಸಂಬಳ, ಸವಲತ್ತು ಕೊಡುತ್ತಿದ್ದೇವೆ. ಆದರೆ, ಫಲಿತಾಂಶದಲ್ಲಿ ಸುಧಾರಣೆ ಕಾಣುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ವೇತನ ಕೊಡುತ್ತಾರೆ. ಅಲ್ಲಿ ಕೆಲಸ ಮಾಡುವವರಿಗೆ ಮನೆಯೂ ಇರುವುದಿಲ್ಲ. ಆದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬರುತ್ತಿರುವುದು ಏಕೆ ಎನ್ನುವ ಬಗ್ಗೆ ಸರ್ಕಾರದಿಂದ ವೇತನ ಪಡೆಯುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಹೆಚ್ಚುತ್ತಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಕಡಿಮೆಯಾಗಲು ಕಾರಣವೇನು? ಪದವಿ ಪಡೆದವರಿಗೆಲ್ಲರಿಗೂ ಕೆಲಸ ಸಿಗುತ್ತಿಲ್ಲ. ಹೀಗಾಗಿ, ಕೈಗಾರಿಕೆಗಳಿಗೆ ಬೇಕಾಗುವ ಮಾನವ ಸಂಪನ್ಮೂಲ ರೂಪಿಸಬೇಕು. ಇದಕ್ಕಾಗಿ ಸಂಬಂಧಿಸಿದ ಕ್ಷೇತ್ರದವರೊಂದಿಗೆ ಸಮಾಲೋಚಿಸಬೇಕು. ಬೋಧಕರಿಗೆ ಕಾಲಕಾಲಕ್ಕೆ ತರಬೇತಿ ಕೊಡಿಸಬೇಕು. ಹಿಂದುಳಿದವರು, ದಲಿತರಿಗೆ ಉನ್ನತ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಹಿರಿಯ ವಿಜ್ಞಾನಿ ವಿ.ಕೆ. ಅತ್ರೆ ಮಾತನಾಡಿ, ‘2050ಕ್ಕೆ ಎಂಜಿನಿಯರಿಂಗ್ ಶಿಕ್ಷಣ ಹೇಗಿರಬೇಕು ಎನ್ನುವುದನ್ನು ಈಗಿನಿಂದಲೇ ಯೋಚಿಸಬೇಕು’ ಎಂದು ಸಲಹೆ ನೀಡಿದರು.

ವಿವಿಯ ನಿವೃತ್ತ ಕುಲಪತಿ, ಕುಲಸಚಿವರು, ಹಣಕಾಸು ಅಧಿಕಾರಿಗಳು, ವಿಶೇಷಾಧಿಕಾರಿಗಳು, ಕಾರ್ಯಕಾರಿ ಪರಿಷತ್, ವಿದ್ಯಾವಿಷಯಕ ಪರಿಷತ್‌ ಸದಸ್ಯರು, ಡೀನ್‌ಗಳು, ಅತಿಥಿ ಉಪ‍ನ್ಯಾಸಕರನ್ನು ಸತ್ಕರಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !