ವರಿಷ್ಠರು ವಾರ್ನಿಂಗ್ ಮಾಡುವ ಅಗತ್ಯವಿಲ್ಲ: ಸತೀಶ ಜಾರಕಿಹೊಳಿ

7

ವರಿಷ್ಠರು ವಾರ್ನಿಂಗ್ ಮಾಡುವ ಅಗತ್ಯವಿಲ್ಲ: ಸತೀಶ ಜಾರಕಿಹೊಳಿ

Published:
Updated:

ಬೆಳಗಾವಿ: ‘ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ, ನನಗೂ ಸಂಬಂಧವಿಲ್ಲ. ಮೊದಲಿನಿಂದಲೂ ಇದರಲ್ಲಿ ನನ್ನ ಪಾತ್ರವಿಲ್ಲ. ಹೀಗಾಗಿ ವರಿಷ್ಠರು ನನಗೆ ಎಚ್ಚರಿಕೆ ಕೊಡುವ ಅಗತ್ಯವಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

‘ಎಲ್ಲ ಪಕ್ಷಗಳಂತೆಯೇ ಕಾಂಗ್ರೆಸ್‌ನಲ್ಲೂ ಅಸಮಾಧಾನ ಇರುವುದು ನಿಜ. ಇದನ್ನು ವರಿಷ್ಠರು ಬಗೆಹರಿಸಬೇಕು’ ಎಂದು ಗುರುವಾರ ಪತ್ರಕರ್ತರಿಗೆ ಅವರು ತಿಳಿಸಿದರು.

‘ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಆಪರೇಷನ್‌ ಕಮಲ ಚರ್ಚೆ ನಡೆಯುತ್ತಲೇ ಇದೆ. ಆದರೆ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಸದ್ಯದ ವಾತಾವರಣದಲ್ಲಿ ನಮ್ಮವರಾರೂ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯ ರಾಜಕಾರಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ನಮ್ಮ ಅಸಮಾಧಾನವಿದೆ. ಇದರಿಂದಾಗಿ ಇಲ್ಲಿ ಸಮಸ್ಯೆ ಉಲ್ಬಣವಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರನ್ನು ಎರಡು ಬಾರಿ ಭೇಟಿಯಾಗಿ ಚರ್ಚಿಸಿದ್ದೇನೆ. ಶೀಘ್ರವೇ ಮತ್ತೊಮ್ಮೆ ಭೇಟಿಯಾಗಲಿದ್ದೇನೆ. ವರಿಷ್ಠರು ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಶಿವಕುಮಾರ್ ನನ್ನನ್ನು ಭೇಟಿಯಾಗಿಲ್ಲ. ಅವರೊಂದಿಗೆ ಮಾತುಕತೆ ನಡೆದಿಲ್ಲ’ ಎಂದರು.

‘ಅತೃಪ್ತರ ನೇತೃತ್ವವನ್ನು ಯಾರು ವಹಿಸಿದ್ದಾರೆ? ಸೆ.16ರಂದು ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಎಲ್ಲವನ್ನೂ ಮಾಧ್ಯಮದವರಾದ ನೀವೇ ಚರ್ಚಿಸುತ್ತಿದ್ದೀರಲ್ಲಾ?’ ಎಂದು ಕೇಳಿದರು.

ಸಚಿವ ರಮೇಶ ಜಾರಕಿಹೊಳಿ ಅತೃಪ್ತರ ಗುಂಪಿನ ನೇತೃತ್ವ ವಹಿಸಿದ್ದಾರೆಯೇ ಎನ್ನುವ ಪ್ರಶ್ನೆಗೆ, ‘ಅವರನ್ನೇ ಕೇಳಿ. ನಾನಂತೂ ಆ ಗುಂಪಿನಲ್ಲಿಲ್ಲ’ ಎಂದಷ್ಟೇ ಉತ್ತರಿಸಿದರು.

‘ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕು ಎನ್ನುವ ಬೇಡಿಕೆ ಎರಡು ದಶಕಗಳಿಂದಲೂ ಇದೆ. ವಿಭಜನೆ ಮಾಡುವುದಕ್ಕೆ ನನ್ನ ಬೆಂಬಲವೂ ಇದೆ. ವಿಧಾನಮಂಡಳ ಅಧಿವೇಶನದಲ್ಲೂ ಈ ಕುರಿತು ಚರ್ಚಿಸಿದ್ದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಸ್ತಾಪಿಸಿದ್ದರು. ಇದು ಮಹತ್ವದ ವಿಚಾರ ಆಗಿರುವುದರಿಂದ, ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಮಾಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿಯೊಬ್ಬರೇ ಏಕಾಏಕಿ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

‘ಈ ತಿಂಗಳ ಕೊನೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ವರಿಷ್ಠರು ತಿಳಿಸಿದ್ದಾರೆ. ನಾನೇನು ಆಕಾಂಕ್ಷಿ ಅಲ್ಲ. ನಮ್ಮ ಬೆಂಬಲಿಗರಿಗೆ ಸ್ಥಾನ ದೊರೆಯುವ ವಿಶ್ವಾಸವಿದೆ’ ಎಂದು ಹೇಳಿದರು.

‘ಸಾವಿರ ಕೋಟಿ ಕೊಟ್ಟರೂ ಹೋಗೋಲ್ಲ’

ಅಥಣಿ (ಬೆಳಗಾವಿ): ‘ಸಾವಿರ ಕೋಟಿ ರೂಪಾಯಿ ಕೊಟ್ಟರೂ ಬಿಜೆಪಿಗೆ ಸೇರುವುದಿಲ್ಲ’ ಎಂದು ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

‘ನಾನು ರಮೇಶ ಜಾರಕಿಹೊಳಿ ಬೆಂಬಲಿಗ. ಕಾಂಗ್ರೆಸ್‌ ಬಿಡುವ ಕುರಿತು ನಿರ್ಧಾರ ಮಾಡಿಲ್ಲ. ಅಂತಹ ಅಗತ್ಯ ಇಲ್ಲ’ ಎಂದರು.

‘ಬಿಜೆಪಿ ಅತಿ ಭ್ರಷ್ಟ ಪಕ್ಷ. ಆ ಪಕ್ಷಕ್ಕೆ ಹೋದರೆ ಭ್ರಷ್ಟಾಚಾರ ಮುಕ್ತ ಕ್ಷೇತ್ರ ಮಾಡಬೇಕು ಎನ್ನುವ ನನ್ನ ಕನಸು ಕಮರುತ್ತದೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಬಿಜೆಪಿ ಸೇರುವುದಿಲ್ಲ. ಜನರ ಕೆಲಸ ಮಾಡಿ ಅವರ ವಿಶ್ವಾಸ ಉಳಿಸಿಕೊಳ್ಳುವುದಕ್ಕೆ ಆದ್ಯತೆ ಕೊಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !