ಬಿಎಸ್‌ವೈ ಕುಟುಂಬಕ್ಕೆ ಅಧಿಕಾರ ಹಸ್ತಾಂತರ ಆಗಲ್ಲ: ಸಿ.ಟಿ.ರವಿ

ಭಾನುವಾರ, ಏಪ್ರಿಲ್ 21, 2019
27 °C
’ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ’

ಬಿಎಸ್‌ವೈ ಕುಟುಂಬಕ್ಕೆ ಅಧಿಕಾರ ಹಸ್ತಾಂತರ ಆಗಲ್ಲ: ಸಿ.ಟಿ.ರವಿ

Published:
Updated:
Prajavani

ದಾವಣಗೆರೆ: ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ಇದೆ. ಬಿಜೆಪಿಯಲ್ಲಿ ಇಲ್ಲ. ಒಂದು ಕುಟುಂಬದವರು ಒಬ್ಬರಿಗಿಂತ ಹೆಚ್ಚು ಮಂದಿ ಜನಪ್ರತಿನಿಧಿಗಳಾಗಬಹುದು. ಆದರೆ ಅವರಿಗೆ ಪಕ್ಷದ ಅಧಿಕಾರ ಹಸ್ತಾಂತರ ಆಗಲ್ಲ. ಹಾಗಾಗಿ ಬಿ.ಎಸ್‌. ಯಡಿಯೂರಪ್ಪರಿಂದ ಅವರ ಮಕ್ಕಳಿಗೆ ಅಧಿಕಾರ ಹಸ್ತಾಂತರ ಆಗುವುದಿಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಸ್ಪಷ್ಟಪಡಿಸಿದರು.

ದೇವೇಗೌಡರ ಮಗ ಎಂಬುದನ್ನು ಬಿಟ್ಟು ಕುಮಾರಸ್ವಾಮಿಗೆ ಬೇರೇನು ಅರ್ಹತೆ ಇದೆ. ಅವರೇನು ಹೋರಾಟದಿಂದ ಬಂದವರೇ? ಈಗ ಅವರ ಗೌಡರ ಮೊಮ್ಮಕ್ಕಳು ಬಂದಿದ್ದಾರೆ. ಅದೇ ರೀತಿ ಕಾಂಗ್ರೆಸ್‌ ಕೂಡ ನೆಹರೂ ಅವರಿಂದ ರಾಹುಲ್‌ಗಾಂಧಿ, ಪ್ರಿಯಾಂಕ ಗಾಂಧಿ ವರೆಗೆ ವಂಶವಾಹಿ ಅಧಿಕಾರ ಹೊಂದುತ್ತಾ ಬಂದಿದೆ. ಬಿಜೆಪಿಯಲ್ಲಿ ಯಾವತ್ತೂ ಈ ರೀತಿ ಆಗಲ್ಲ. ಅಮಿತ್‌ಶಾ ನಂತರ ಅವರ ಮಕ್ಕಳಿಗೆ ಅಧಿಕಾರ ಹೋಗಲ್ಲ. ಮೋದಿ ನಂತರ ಯಾರು ಎಂಬುದು ಇನ್ನೂ ಗೊತ್ತಿಲ್ಲ. ಶ್ಯಾಂಪ್ರಸಾದ್‌ ಮುಖರ್ಜಿ, ವಾಜಪೇಯಿ, ಅಡ್ವಾಣಿ ನಂತರ ಅವರ ಕುಟುಂಬಕ್ಕೆ  ಪಕ್ಷದ ಅಧಿಕಾರ ಹೋಗಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿ ವಿವರಿಸಿದರು.

ಈ ಚುನಾವಣೆಯ ನಂತರ ಯಡಿಯೂರಪ್ಪ ಅಧ್ಯಕ್ಷರಾಗಿರುತ್ತಾರಾ ಎಂಬ ಪ್ರಶ್ನೆಗೆ, ‘ಸದ್ಯ ಅವರೇ ಅಧ್ಯಕ್ಷರು. ಚುನಾವಣೆಯ ನಂತರ ಪಕ್ಷ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಇದು ಅಧಿಕಾರ ಅಲ್ಲ, ಜವಾಬ್ದಾರಿ ಆಗಿರುವುದರಿಂದ ತಕ್ಷಣ ನಿರ್ಧಾರ ಕೈಗೊಳ್ಳುವ ಅಧಿಕಾರ ಪಕ್ಷಕ್ಕೆ ಇರುತ್ತದೆ’ ಎಂದು ಉತ್ತರಿಸಿದರು.

ರಾಜಕಾರಣಕ್ಕಾಗಿ ರಾಸಲೀಲೆ ಆಡಿಯೊ: ನೇರವಾಗಿ ಎದುರಿಸಲಾರದವರು ಇಂಥ ವಾಮಮಾರ್ಗ ಹಿಡಿಯುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಇವೆಲ್ಲ ಬರುತ್ತವೆ. ಇದರ ತನಿಖೆಯಾದ ಮೇಲೆ ಸತ್ಯಾಸತ್ಯ ಗೊತ್ತಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿಯ ರಾಸಲೀಲೆ ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದರು.

ಒಂದು ಟಿ.ವಿ. ಇದನ್ನೇ ತೋರಿಸುತ್ತಿದೆ. ಅವರಿಗೆ ಇದರ ಟಿಆರ್‌ಪಿ ಮೈಸೂರಿಗಷ್ಟೇ ಸೀಮಿತ. ಅದಕ್ಕಿಂತ ಅವರ ನಾಯಕರದ್ದೇ ತೋರಿಸಿದ್ದರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಟಿಆರ್‌ಪಿ ಸಿಗುತ್ತಿತ್ತು. ಅಲ್ಲದೇ ಈಗ ಬಂದಿರುವುದು ಅನಧಿಕೃತ. ಅವರದ್ದು ಅಧಿಕೃತ ಎಂದು ವ್ಯಂಗ್ಯವಾಡಿದರು.

ಚಪ್ಪಲಿಯಲ್ಲಿ ಹೊಡೆದಂತೆ ಮಾತು: ‘ರಾಜಕೀಯವಾಗಿ ನಾನು ಮಾತನಾಡುವಾಗ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆದಂತಾಗುತ್ತದೆ. ಅದು ಬಿಟ್ಟು ಅವರು ಹೇಳಿದಂತೆ ನಾನು ಆ ಮಾತುಗಳನ್ನು ಆಡಿಲ್ಲ. ಉಂಡ ಮನೆಗೆ ದ್ರೋಹ ಬಗೆಯುವವರನ್ನು ಏನನ್ನುತ್ತಾರೆ ಎಂದು ಹಾಸನದಲ್ಲಿ ಕೇಳಿದಾಗ ಅಲ್ಲಿನ ಜನ ಹೇಳಿದ ಮಾತದು. ಅದನ್ನು ಪುನರುಚ್ಚರಿಸಿದ್ದೆ ಅಷ್ಟೇ’ ಎಂದು ಸಮಜಾಯಿಷಿ ನೀಡಿದರು.

‘ನನ್ನ ತಾಯಿ ನನಗೆ ಸಂಸ್ಕಾರ ಕಲಿಸಿದ್ದಾರೆ. ಆರ್‌ಎಸ್‌ಎಸ್‌ ನನಗೆ ಸಾರ್ವಜನಿಕ ಸಭ್ಯತೆ ಕಲಿಸಿದೆ. ಜಯಮಾಲಾರಿಂದ ಅದನ್ನು ಕಲಿಯಬೇಕಿಲ್ಲ. ರೈತ ಹೋರಾಟಗಾರ್ತಿ ಜಯಶ್ರೀ ಅವರಿಗೆ ಎಲ್ಲಿ ಮಲಗಿದ್ದಿ ಎಂದು ಮುಖ್ಯಮಂತ್ರಿ ಕೇಳಿದಾಗ, ಈಗ ಅಂಬರೀಶ್‌ ಅವರ ಪತ್ನಿಯನ್ನು ಕಾಡುತ್ತಿರುವ ಬಗೆಯನ್ನು ನೋಡಿದಾಗ ಇವರಿಗೆ ಮಹಿಳಾ ಕಾಳಜಿ ಬಂದಿಲ್ಲವೇ? ನಿಜವಾದ ಕಾಳಜಿ ಇದ್ದರೆ ರಾಜೀನಾಮೆ ನೀಡಿ ಆಮೇಲೆ ಮಾತನಾಡಲಿ‘ ಎಂದು ಪ್ರತ್ಯುತ್ತರ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !