ರೆಡ್ಡಿಗಿಲ್ಲ ಮಧ್ಯಂತರ ನಿರೀಕ್ಷಣಾ ಜಾಮೀನು

7
ಇ.ಡಿ ಡೀಲ್: ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ

ರೆಡ್ಡಿಗಿಲ್ಲ ಮಧ್ಯಂತರ ನಿರೀಕ್ಷಣಾ ಜಾಮೀನು

Published:
Updated:

ಬೆಂಗಳೂರು: ಸಿಸಿಬಿ ಪೊಲೀಸರು ಬಂಧಿಸಬಹುದೆಂಬ ಭೀತಿಯಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಇವತ್ತೇ ನಿರೀಕ್ಷಣಾ ಜಾಮೀನು ನೀಡಬೇಕು ಎಂಬ ಕೋರಿಕೆಯನ್ನು ಮಾನ್ಯ ಮಾಡಲು ನಗರದ 61ನೇ ಸಿಟಿ ಸಿವಿಲ್ ನ್ಯಾಯಾಲಯ ನಿರಾಕರಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಕಕ್ಷಿದಾರರನ್ನು ಬಂಧಿಸುತ್ತಾರೆ ಎನ್ನಲು ಮಧ್ಯಂತರ ಅರ್ಜಿಯಲ್ಲಿ ಮೇಲ್ನೋಟಕ್ಕೆ ಯಾವುದೇ ಸಮರ್ಪಕ ಕಾರಣಗಳಿಲ್ಲ’ ಎಂದು ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಅಭಿಪ್ರಾಯಪಟ್ಟಿದ್ದು, ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಅರ್ಜಿ ವಿಚಾರಣೆ ವೇಳೆ ರೆಡ್ಡಿ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು, ನಿರೀಕ್ಷಣಾ ಜಾಮೀನು ಜೊತೆಯಲ್ಲೇ ಮಧ್ಯಂತರ ಆದೇಶಕ್ಕಾಗಿ ಅರ್ಜಿ ಸಲ್ಲಿಸಿ ವಾದ ಮಂಡಿಸಿದರು.

‘ಅಧಿಕಾರಿಗಳು ಸ್ವತಂತ್ರವಾಗಿ ಮತ್ತು ವಿವೇಚನೆಯಿಂದ ಈ ಪ್ರಕರಣದ ತನಿಖೆ ನಡೆಸುತ್ತಿಲ್ಲ. ನಮ್ಮ ಕಕ್ಷಿದಾರರನ್ನು ಬಂಧಿಸಬೇಕೊ ಬೇಡವೋ ಎಂಬ ಬಗ್ಗೆ ಮುಖ್ಯಮಂತ್ರಿಗಳ ಸಲಹೆ ಕೇಳುತ್ತಾರೆ. ಹಾಗಾಗಿ ತನಿಖೆ ಪಾರದರ್ಶಕವಾಗಿಲ್ಲ’ ಎಂದು ಅವರು ಆರೋಪಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ, ಭಾನುವಾರ (ನ.11) ವಿಚಾರಣೆಗೆ ಬರುವಂತೆ ನೋಟಿಸ್‌ ಕಳುಹಿಸಿದ್ದಾರೆ’ ಎಂದರು.

‘ಕಕ್ಷಿದಾರರು ವಿಚಾರಣೆಗೆ ಹಾಜರಾದರೆ, ಅವರನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ, ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಪೊಲೀಸರ ಮುಂದೆ ವಿಚಾರಣೆಗೆ ಎದುರಿಸಲಿದ್ದಾರೆ’ ಎಂದು ವಿವರಿಸಿದರು.

ಇದಕ್ಕೆ ನ್ಯಾಯಾಧೀಶ ವಿದ್ಯಾಧರ್ ಶಿರಹಟ್ಟಿ, ‘ನೀವು ವಿಚಾರಣೆಗೆ ಹೋದರೆ ತಾನೇ ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯ. ವಿಚಾರಣೆಗೇ ಹೋಗದೆ, ಬಂಧಿಸುತ್ತಾರೆ ಎಂದು ನಿಮ್ಮಷ್ಟಕ್ಕೆ ನೀವೇ ಅಂದುಕೊಂಡರೆ ಹೇಗೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಹನುಮಂತರಾಯ, ‘ಮಧ್ಯಂತರ ಅರ್ಜಿಯನ್ನು ಹಿಂಪಡೆಯುತ್ತೇವೆ. ಮುಖ್ಯ ಅರ್ಜಿಯನ್ನು ಮನ್ನಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ’ ಎಂದು ಕೋರಿದರು.

ಇದನ್ನು ಮಾನ್ಯ ಮಾಡದ ನ್ಯಾಯಾಧೀಶರು, ಜಾಮೀನಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಿದರು ಮತ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದರು. 

**

ವಿಚಾರಣೆಗೆ ಗೈರು‌?

‘ಇ.ಡಿ ಡೀಲ್’ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರ ವಿಚಾರಣೆಗೆ ಜನಾರ್ದನ ರೆಡ್ಡಿ ಗೈರಾಗುವ ಸಾಧ್ಯತೆ ಇದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಮುಂದೂಡಿದೆ. ಅದೇ ಕಾರಣ ನೀಡಿ ರೆಡ್ಡಿಯವರು ವಿಚಾರಣೆಯಿಂದ ದೂರ ಉಳಿಯಲಿದ್ದಾರೆ ಎಂದು ಗೊತ್ತಾಗಿದೆ.

**

2 ಪ್ರತ್ಯೇಕ ಅರ್ಜಿ

‘ದೇವರ ಜೀವನಹಳ್ಳಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಮತ್ತು ಪ್ರಕರಣದ ತನಿಖಾಧಿಕಾರಿಗಳಾದ ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಎಸ್.ಗಿರೀಶ್ ಮತ್ತು ಎಸಿಪಿ ಡಾ.ಎಚ್.ಎನ್. ವೆಂಕಟೇಶ್ ಪ್ರಸನ್ನ ಅವರನ್ನು ಬದಲಿಸಬೇಕು’ ಎಂದು ಕೋರಿ ಜನಾರ್ದನ ರೆಡ್ಡಿ ಶುಕ್ರವಾರ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಇನ್ನೂ ವಿಚಾರಣೆಗೆ ಬರಬೇಕಿದೆ.

**

ರೆಡ್ಡಿ ವಾದವೇನು?:

* ಆಂಬಿಡೆಂಟ್ ಕಂಪನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಸಂಸ್ಥೆಯಲ್ಲಿ ನಾನು ಪಾಲುದಾರನಲ್ಲ. ಬಂಡವಾಳ ಹೂಡಿಕೆ ಮಾಡಿಲ್ಲ. ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ. ಹೀಗಿದ್ದರೂ ನನ್ನನ್ನು ಪ್ರಕರಣದಲ್ಲಿ ಅನಗತ್ಯವಾಗಿ ಹಾಗೂ ದುರುದ್ದೇಶಪೂರ್ವಕವಾಗಿ ಸಿಲುಕಿಸಲಾಗುತ್ತಿದೆ.

* ನನ್ನನ್ನು ಬಂಧಿಸುವುದಾಗಿ ಪೊಲೀಸರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

* ಇದೊಂದು ರಾಜಕೀಯ ದುರುದ್ದೇಶದಿಂದ ಕೂಡಿದ ತನಿಖೆ.

* ಪ್ರಕರಣದ ತನಿಖಾಧಿಕಾರಿಗಳು ತನಿಖೆಯಲ್ಲಿ ಪಾರದರ್ಶಕತೆ ಹಾಗೂ ಗೋಪ್ಯತೆ ಕಾಯ್ದುಕೊಂಡಿಲ್ಲ.

* ತಾಜ್‌ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಸಿದ ತನಿಖೆಯ ವಿಡಿಯೊ ಮತ್ತು ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

* ಆಂಬಿಡೆಂಡ್ ಕಂಪನಿ ಹಣ ವಂಚಿಸಿದೆ ಎಂದು ಆರೋಪಿಸಿ ಸರ್ಫರಾಜ್ ನೀಡಿದ್ದ ದೂರಿನ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು, ಆರೋಪಿಗಳ ಹೇಳಿಕೆ ಆಧರಿಸಿ ನನ್ನ ವಿರುದ್ಧ ಬೇರೊಂದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

* ಕಾನೂನು ಪ್ರಕಾರ ಯಾವುದೇ ಪ್ರಕರಣದ ವಿಚಾರಣೆ ವೇಳೆ ಮತ್ತೊಂದು ಆರೋಪ ಕೇಳಿಬಂದರೆ, ಆ ಕುರಿತು ತನಿಖಾಧಿಕಾರಿ ಪ್ರತ್ಯೇಕ ದೂರು ದಾಖಲಿಸಬೇಕು.

* ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಡಾ.ಎಚ್.ಎನ್. ವೆಂಕಟೇಶ್ ಪ್ರಸನ್ನ ಹಾಗೂ ಡಿಸಿಪಿ ಎಸ್.ಗಿರೀಶ್ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ.

* ಪ್ರಕರಣದ ನಾಲ್ಕನೇ ಆರೋಪಿಯಾದ ಬಳ್ಳಾರಿಯ ರಾಜಮಹಲ್ ಜ್ಯೂವೆಲರ್ಸ್ ಮಾಲೀಕ ರಮೇಶ್ ಅವರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

* ಈ ತನಿಖಾಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಸಾಧ್ಯತೆ ಇಲ್ಲವಾಗಿದೆ. ಅವರನ್ನು ಬದಲಿಸಲು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಬೇಕು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !