ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15,000 ಪ್ರಸೂತಿ ತಜ್ಞರ ಸಮಾವೇಶ

Last Updated 8 ಜನವರಿ 2019, 19:45 IST
ಅಕ್ಷರ ಗಾತ್ರ

‘ಮಹಿಳೆಯರ ಆರೋಗ್ಯ ದೇಶದ ಆರೋಗ್ಯ’ ಘೋಷಣೆ ಅಡಿಯಲ್ಲಿ ಅರಮನೆ ಮೈದಾನದಲ್ಲಿ ಬುಧವಾರದಿಂದ ಅಖಿಲ ಭಾರತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಮಾವೇಶ ನಡೆಯಲಿದೆ.

ಭಾರತ ಸೇರಿದಂತೆ ವಿವಿಧ ದೇಶಗಳಿಂದ ಬಂದಿರುವ15 ಸಾವಿರ ಸ್ತ್ರೀ ರೋಗ ತಜ್ಞರು ಒಂದೆಡೆ ಸೇರಲಿದ್ದಾರೆ. 10ಕ್ಕೂ ಹೆಚ್ಚು ಸೆಮಿನಾರ್‌ ಹಾಲ್‌ಗಳಲ್ಲಿ ಸಮಾವೇಶ ಜರುಗಲಿದೆ. ಒಂದೊಂದು ವಿಷಯದ ಕುರಿತು ಒಂದೊಂದು ತಾಸು ಚರ್ಚೆ ನಡೆಯಲಿದೆ. ಮುಖ್ಯ ವಿಷಯಗಳಾಗಿದ್ದರೆ ಎರಡು ತಾಸು.

ಗಾಯತ್ರಿ ವಿಹಾರದಲ್ಲಿಒಟ್ಟಿಗೆ 3,500 ಮಂದಿ ಕೂರಬಹುದಾದ ಸೆಮಿನಾರ್‌ ಹಾಲ್‌ ಸಿದ್ಧಗೊಂಡಿದೆ. ಒಟ್ಟು ಐದು ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 40 ವರ್ಷ ಮೇಲ್ಪಟ್ಟ ತಜ್ಞ ವೈದ್ಯರುಗಳು 250 ಪ್ರಮುಖ ವಿಷಯಗಳನ್ನು ಮಂಡಿಸಲಿದ್ದಾರೆ.

ಇಲ್ಲಿ ಎರಡು ಗಿನ್ನೆಸ್‌ ದಾಖಲೆಗಳನ್ನು ನಿರ್ಮಿಸಲು ವೈದ್ಯರು ಸಜ್ಜಾಗಿದ್ದಾರೆ. ನ್ಯಾಪ್‌ಕಿನ್‌ಗಳನ್ನು ಬಳಸಿ ದೊಡ್ಡದಾದ ಗರ್ಭಾಶಯವನ್ನು ನಿರ್ಮಿಸಲಿದ್ದಾರೆ. ಮಾತ್ರೆಗಳ ಶೀಟ್‌ಗಳಲ್ಲಿ ಭಾರತದ ಅತಿದೊಡ್ಡ ಮ್ಯಾಪ್‌ ನಿರ್ಮಿಸುವುದಕ್ಕೆ ವೇದಿಕೆ ಕಲ್ಪಿಸಲಾಗಿದೆ.

ಎರಡೂ ಗಿನ್ನೆಸ್‌ ದಾಖಲೆಗಳನ್ನು ಜನವರಿ 10ರಂದು ಮಾಡಲಾಗುತ್ತದೆ. ಇದಕ್ಕಾಗಿ ಗಿನ್ನೆಸ್‌ ದಾಖಲೆಗಳನ್ನು ಪರಿಶೀಲಿಸುವ ತಂಡ ಕೂಡ ಬಂದಿದೆ.

ಈ ಕಾರ್ಯಕ್ರಮವನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಸ್ಥೆ (ಫಾಗ್ಸಿ) ಆಯೋಜಿಸಿದೆ. ಈ ಸಂಸ್ಥೆಯ ಅಡಿಯಲ್ಲಿ 33,500 ವೈದ್ಯರು ಗುರುತಿಸಿಕೊಂಡಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಅನೇಕ ರಾಷ್ಟ್ರಗಳ ವೈದ್ಯರೂ ಇದ್ದಾರೆ.

ಮುಂಬೈ, ಚೆನ್ನೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಮಾವೇಶ ನಡೆಯುತ್ತದೆ. 2003ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದಿತ್ತು. ಈಗ ಎರಡನೇ ಬಾರಿ ನಗರದಲ್ಲಿ ನಡೆಯುತ್ತಿದೆ.

ಪ್ರಸೂತಿ ಹಾಗೂ ಸ್ತ್ರೀ ರೋಗದ ಜಗತ್ತಿನಲ್ಲಿ ಆದ ಹೊಸ ಬದಲಾವಣೆಗಳನ್ನು ಇಲ್ಲಿ ಮುಖ್ಯವಾಗಿ ಚರ್ಚಿಸಲಾಗುತ್ತದೆ. ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನಿಂದ ಶಸ್ತ್ರಚಿಕಿತ್ಸೆವರೆಗೂ ಆಗಿರುವ ನೂತನ ಬದಲಾವಣೆಗಳ ಕುರಿತು ಚರ್ಚಿಸಲಾಗುತ್ತದೆ.

ಈ ಸಮಾವೇಶವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಆಯೋಜಿಸಲಾಗಿದೆ. ‘AICOG 2019’ ಆ್ಯಪ್‌ ಕೂಡ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಗೂಗಲ್‌ ಮ್ಯಾಪ್‌ ಕೂಡ ಸಿಗಲಿದೆ. ಪ್ರತಿ ದಿನ ನಡೆಯುವ ಚರ್ಚೆಗಳ ಸ್ಥಳ ಹಾಗೂ ಸಮಯದ ಮಾಹಿತಿ ಸಿಗಲಿದೆ. ಯಾರೆಲ್ಲಾ ಚರ್ಚೆಯಲ್ಲಿ ಭಾಗವಹಿಸುತ್ತಾರೆ ಎಂಬ ಮಾಹಿತಿ ಕೂಡ ಲಭ್ಯ.

ಮೂಢನಂಬಿಕೆ ಹೋಗಲಾಡಿಸುವ ಗುರಿ

‘ಈ ಸಮಾವೇಶದ ಮುಖ್ಯ ಉದ್ದೇಶ ಯುವ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವುದು. ವೈದ್ಯರು ಹಾಗೂ ಯುವಜನರ ನಡುವೆ ಇರುವ ಅಂತರವನ್ನು ಕಡಿಮೆಮಾಡುವುದು.ಹಳ್ಳಿಗಳಲ್ಲಿರುವ ವೈದ್ಯರಲ್ಲೂ ಸಾಕಷ್ಟು ಅಪನಂಬಿಕೆಗಳಿರುತ್ತವೆ. ಈ ಸಮಾವೇಶದಲ್ಲಿ ಯುವಕ ಯುವತಿಯರಿಗೆ ಹೊಸ ತಂತ್ರಜ್ಞಾನ ಹಾಗೂ ವೈದ್ಯ ಕ್ಷೇತ್ರದಲ್ಲಿ ಆದ ಬದಲಾವಣೆಗಳ ಕುರಿತುತರಬೇತಿ ನೀಡಲಾಗುತ್ತದೆ. ಅವರು ಹಳ್ಳಿಗಳಲ್ಲಿರುವ ವೈದ್ಯರಿಗೆ ಅದನ್ನು ತಲುಪಿಸಲಿದ್ದಾರೆ‘ ಎಂದು ಡಾ.ಹೇಮಾ ದಿವಾಕರ್‌ ಹೇಳಿದರು.

‘ಗರ್ಭ ಧರಿಸುವುದರ ಕುರಿತು ಯಾರು ನಿರ್ಧರಿಸಬೇಕು’ ಎಂಬ ವಿಷಯದ ಕುರಿತು ಕೂಡ ಚರ್ಚೆ ನಡೆಯಲಿದೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭ ಧರಿಸಿದರೆ ಆಗುವ ತೊಂದರೆಗಳನ್ನೂ ಇಲ್ಲಿ ಹೇಳಿಕೊಡಲಿದ್ದಾರೆ. ಯುವಕ, ಯುವತಿಯರಿಗಾಗಿ ಫ್ಯಾಷನ್‌ ಶೋ ಕೂಡ ನಡೆಯಲಿದೆ.

ಗೂಗಲ್‌ ಸೇರಿದಂತೆ ಇಂಟರ್‌ನೆಟ್‌ನಲ್ಲಿ ನೋಡಿದ್ದೆಲ್ಲಾ ಸತ್ಯ ಅಲ್ಲ. ವೈದ್ಯಕೀಯ ಜ್ಞಾನವನ್ನು ಇಂಟರ್‌ನೆಟ್‌ನಿಂದ ಪಡೆದುಕೊಳ್ಳುವುದು ತಪ್ಪು ಎಂಬ ಮಾಹಿತಿಯನ್ನು ವೈದ್ಯರು ಯುವಕ, ಯುವತಿಯರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಉದ್ಘಾಟನೆಯಲ್ಲಿ ರವಿಶಂಕರ್‌ ಗುರೂಜಿ

ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್‌ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌, ಲೇಖಕಿ ಊರ್ವಶಿ ಬುಟಾಲಿಯಾ, ನಟಿ ಡಯಾನ ಹೇಡನ್‌ ಹಾಗೂ ವೈದ್ಯರಾದ ಹೇಮಾ ದಿವಾಕರ್‌, ಶೀಲಾ ವಿ.ಮನೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬುಧವಾರ ಸಂಜೆ 5.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT