ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದೇಶ ಒಂದು ಪಡಿತರ: ಜನವರಿ 1ರಿಂದ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಜಾರಿ

ಅನ್ಯರಾಜ್ಯದವರಿಗೆ ₹3 ದರದಲ್ಲಿ ಅಕ್ಕಿ
Last Updated 1 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ‘ಒನ್‌ ನೇಷನ್‌, ಒನ್‌ ರೇಷನ್‌ ಕಾರ್ಡ್‌’ ಯೋಜನೆ ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಲ್ಲಿ ಜನವರಿ1ರಿಂದ ಜಾರಿಯಾಗಲಿದೆ.

ಎಂಟೂ ರಾಜ್ಯಗಳ ಬಿಪಿಎಲ್‌ ಪಡಿತರ ಚೀಟಿದಾರರು, ‘ಅಂತರರಾಜ್ಯ ಪೋರ್ಟೆಬಿಲಿಟಿ’ ಮೂಲಕ ಈ ರಾಜ್ಯಗಳಲ್ಲಿರುವ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ರಾಜ್ಯದ ರೇಷನ್ ಕಾರ್ಡ್ ಬಳಸಿ ಆಹಾರಧಾನ್ಯವನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು.

ಆದರೆ, ಪ್ರತಿ ಫಲಾನುಭವಿ ಹೊರ ರಾಜ್ಯದಲ್ಲಿ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ. ಅಕ್ಕಿಯನ್ನು ಕೆ.ಜಿಗೆ ತಲಾ ₹ 3ರಂತೆ ಹಣ ಪಾವತಿಸಿ ಖರೀದಿಸಬೇಕು. ಅಂದರೆ, ಕರ್ನಾಟಕದಲ್ಲಿ ಬಿಪಿಎಲ್ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 7 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಹೊರರಾಜ್ಯದಲ್ಲಿ ಈ ಫಲಾನುಭವಿ, ಕೇಂದ್ರ ಏಕರೂಪವಾಗಿ ನಿಗದಿಪಡಿಸಿದ 5 ಕೆ.ಜಿ ಅಕ್ಕಿಯನ್ನು ಹಣ ಕೊಟ್ಟು ಖರೀದಿಸಬೇಕು ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ಎಂಟು ರಾಜ್ಯಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರ ಇ- ಕೆವೈಸಿ (ಆಧಾರ್ ಆಧಾರಿತ ಬಯೋಮೆಟ್ರಿಕ್) ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ರೂಪಿಸಿರುವ ‘ಐಎಂಪಿಡಿಎಸ್’ (ಇಂಟಿಗ್ರೇಟೆಡ್‌ ಮ್ಯಾನೇಜ್‌ಮೆಂಟ್ ಆಫ್ ಪಿಡಿಎಸ್) ಎಂಬ ಆನ್‌ಲೈನ್ ಡಾಟಾಬೇಸ್‌ ವ್ಯವಸ್ಥೆಯ ಮೂಲಕ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಮುಂದಿನ ಡಿಸೆಂಬರ್ ಅಂತ್ಯದ ವೇಳೆಗೆ ಇಡೀ ದೇಶದಲ್ಲಿ ಅಂತರರಾಜ್ಯ ಪೋರ್ಟೆಬಿಲಿಟಿ ಜಾರಿಯಾಗಲಿದೆ ಎಂದೂ ಮೂಲಗಳು ಹೇಳಿವೆ.

ಈ ಯೋಜನೆ ಕಾರ್ಯಗತಗೊಳಿಸುವ ಭಾಗವಾಗಿ, ಕೇರಳ–ಕರ್ನಾಟಕದ ಗಡಿಯಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ) ಅಂತರರಾಜ್ಯ ಪೋರ್ಟಿಬಿಲಿಟಿಯನ್ನು ಪ್ರಾಯೋಗಿಕವಾಗಿ ಮಾಡಲಾಗಿದ್ದು, ಯಶಸ್ವಿಯಾಗಿದೆ. ಎರಡೂ ರಾಜ್ಯಗಳ 3-4 ಕಾರ್ಡ್‌ದಾರರು ತಮ್ಮ ರಾಜ್ಯದ ಗಡಿದಾಟಿ ಬಂದು, ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆದಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದೇ ಜೂನ್ ಅಂತ್ಯದಿಂದ ಆಗಸ್ಟ್ 16ರವರೆಗೆ 1.56 ಕೋಟಿ (ಶೇ 27) ಸದಸ್ಯರ ಇ- ಕೆವೈಸಿ ಪಡೆಯಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಗೆ ಅಗತ್ಯ ಪ್ರಮಾಣ ಪತ್ರ ಪಡೆಯಲು ಗ್ರಾಮ ಪಂಚಾಯಿತಿಗಳಲ್ಲಿ ಜನರು ಮುಗಿಬಿದ್ದ ಕಾರಣ ಇ- ಕೆವೈಸಿ ಪಡೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ತಿಂಗಳಿನಿಂದ ಮತ್ತೆ ಆರಂಭಿಸಲಾಗಿದೆ.

2 ರಾಜ್ಯಗಳಲ್ಲಿ 1,900 ಹೆಸರು!

ಹೊರ ರಾಜ್ಯಗಳ ಪಡಿತರ ಚೀಟಿಯಲ್ಲಿ ಹೆಸರು ಇರುವ 1,900 ಸದಸ್ಯರು ರಾಜ್ಯದಲ್ಲೂ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವುದು ಪತ್ತೆಯಾಗಿದೆ. ಫಲಾನುಭವಿಗಳ ಇ - ಕೆವೈಸಿ ಪಡೆಯುವುದರಿಂದ ಈ ಹೆಸರು ಪತ್ತೆಯಾಗಿದೆ. ‘ಒನ್ ನೇಷನ್ ಒನ್ ರೇಷನ್ ಕಾರ್ಡ್‌’ ಯೋಜನೆಯಲ್ಲಿ ಎರಡು ಕಾರ್ಡ್‌ಗಳಲ್ಲಿ ಹೆಸರು ಹೊಂದಲು ಅವಕಾಶ ಇಲ್ಲ. ಫಲಾನುಭವಿ ಇ- ಕೆವೈಸಿ ನೀಡುವ ರಾಜ್ಯದ ಪಡಿತರ ಚೀಟಿಯಲ್ಲಿ ಮಾತ್ರ ಹೆಸರು ಇರಲಿದೆ. ಪಡಿತರಚೀಟಿ ಪಡೆಯಲು ಇ- ಕೆವೈಸಿ ಕಡ್ಡಾಯವಾಗಿರುವುದರಿಂದ, ಬೋಗಸ್ ವ್ಯಕ್ತಿಗಳ ಹೆಸರು ಕಾರ್ಡ್‌ನಲ್ಲಿ ಸೇರಿಸಲು ಅಥವಾ ನಕಲಿ ಕಾರ್ಡ್ ಮಾಡಲು ಇನ್ನು ಮುಂದೆ ಸಾಧ್ಯ ಇಲ್ಲ.

* 1.20 ಕೋಟಿ - ರಾಜ್ಯದಲ್ಲಿರುವ ಬಿಪಿಎಲ್‌ಕಾರ್ಡ್‌ಗಳು

* 19,920 - ನ್ಯಾಯಬೆಲೆ ಅಂಗಡಿಗಳ ಸಂಖ್ಯೆ

* 4.26 ಕೋಟಿ - ಒಟ್ಟು ಬಿಪಿಎಲ್‌ ಸದಸ್ಯರು

* 1.56 ಕೋಟಿ - ಈವರೆಗೆ ಇ–ಕೆವೈಸಿ ನೀಡಿದವರು

ಇ–ಕೆವೈಸಿ ನೀಡಲು ಗಡುವು

ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ರಾಜ್ಯದಲ್ಲೂ ಪಡಿತರಚೀಟಿಯಲ್ಲಿರುವ ಎಲ್ಲ ಸದಸ್ಯರ ಇ- ಕೆವೈಸಿ ಪಡೆಯುವ ಪ್ರಕ್ರಿಯೆಗೆ ಮತ್ತೆ ಚಾಲನೆ‌ ನೀಡಲಾಗಿದೆ. ಡಿಸೆಂಬರ್, ಜನವರಿ ಮತ್ತು ಮಾರ್ಚ್ತಿಂಗಳ ಮೊದಲ 10 ದಿನ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾತ್ರ ಪಡೆಯಲಾಗುವುದು. 10ನೇ ತಾರೀಕಿನಿಂದ ಪಡಿತರಧಾನ್ಯ ವಿತರಣೆ ನಡೆಯಲಿದೆ.

* ಯೋಜನೆಗೆ ಜಾರಿಗೆ ಬರಲಿರುವ ರಾಜ್ಯಗಳು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT