ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯುವಕರಿಂದ ಆನ್‌ಲೈನ್ ಪಾಠ

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆದ್ಯತೆ
Last Updated 25 ಮೇ 2020, 3:29 IST
ಅಕ್ಷರ ಗಾತ್ರ

ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಲ್ಲಿನ ಕೆಲವು ಯುವಕರು ಆನ್‌ಲೈನ್‌ನಲ್ಲಿ ಉಚಿತವಾಗಿ ಪುನರ್ಮನನ ತರಗತಿಗಳನ್ನು ತೆಗೆದುಕೊಂಡು ನೆರವಾಗುತ್ತಿದ್ದಾರೆ.

‘ಬೆಳಗಾವಿ ಫೇಸ್‌ಬುಕ್‌ ಪೇಜ್‌’ ಅಡ್ಮಿನ್ ಆಗಿರುವ ಖಾಸಗಿ ಕಂಪನಿ ನೌಕರ ಕಿರಣ ಮಾಳನ್ನವರ ವಾರದಿಂದ ಕಾರ್ಯಕ್ರಮ ಸಂಯೋಜಿಸುತ್ತಿದ್ದಾರೆ. ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಗೋಗಟೆ ತಾಂತ್ರಿಕ ಕಾಲೇಜಿನ ಉಪನ್ಯಾಸಕ ಹರೀಶ ಬೆಂಡಿಗೇರಿ, ಎಂಜಿನಿಯರಿಂಗ್‌ ವಿದ್ಯಾರ್ಥಿನಿ ವಿಭಾ ಎಂ.ವಿ., ಸೌರಭ ಪಾಟೀಲ, ಸಚಿನ ಪಾಟೀಲ, ಬ್ಯಾಂಕ್‌ ನೌಕರ ಸಂತೋಷ್ ಕುಮಾರ್ ಸಂಪಗಾವಿ ಹಾಗೂ ಕಿರಣ ಮಾಳನ್ನವರ ಮಕ್ಕಳಿಗೆ ತಮ್ಮ ಜ್ಞಾನ ಧಾರೆ ಎರೆಯುತ್ತಿದ್ದಾರೆ. ಸಮಯ ದಾನ ಮಾಡುವುದರೊಂದಿಗೆ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸುತ್ತಿದ್ದಾರೆ; ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ವಿಜ್ಞಾನ, ಗಣಿತ, ಇಂಗ್ಲಿಷ್ ಹಾಗೂ ಸಮಾಜವಿಜ್ಞಾನದ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಇದಕ್ಕಾಗಿ ‘ಝೂಮ್‌’ ಆ್ಯಪ್‌ ಅನ್ನು ಬಳಸಿಕೊಳ್ಳಲಾಗುತ್ತಿದೆ.

ಆತಂಕ ನಿವಾರಣೆಗೆ:

‘ಕನ್ನಡ ಮಾಧ್ಯಮದಲ್ಲಿ ಓದುವ ಬಹುತೇಕ ಮಕ್ಕಳು ಬಡ ಮತ್ತು ಮಧ್ಯಮ ವರ್ಗದವರಾಗಿರುತ್ತಾರೆ. ಕೋವಿಡ್–19 ಭೀತಿ ಹಾಗೂ ಲಾಕ್‌ಡೌನ್ ಸಮಸ್ಯೆಯಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಅವರಿಗ ಉಚಿತವಾಗಿ ಕ್ಲಾಸ್ ನಡೆಸಿ ನೆರವಾಗುತ್ತಿದ್ದೇವೆ. ಇದೊಂದು ಅಳಿಲು ಸೇವೆ ಎಂದು ಭಾವಿಸಿದ್ದೇವೆ. ಸದ್ಯಕ್ಕೆ ಬೆಳಗಾವಿ ನಗರ, ರಾಮದುರ್ಗ, ಖಾನಾಪುರ ಮೊದಲಾದ ಕಡೆಗಳ 25 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಈ ಆ್ಯಪ್‌ನಲ್ಲಿ ಏಕಕಾಲಕ್ಕೆ ನೂರು ಮಕ್ಕಳಿಗೆ ಪಾಠ ಹೇಳಿಕೊಡಬಹುದಾಗಿದೆ’ ಎಂದು ಕಿರಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆ ಬಗ್ಗೆ ನಮ್ಮ ಪುಟದಲ್ಲಿ ಪೋಸ್ಟ್‌ ಹಾಕಿದ್ದೆ. ಹಲವರು ಪಾಠ ಮಾಡಲು ಹಾಗೂ ಜಾಯಿನ್ ಆಗಲು ಮುಂದೆ ಬಂದಿದ್ದಾರೆ. ಹೆಚ್ಚು ಅಂಕಗಳು ಬರಬಹುದಾದ ಸಾಧ್ಯತೆ ಇರುವ ಮಹತ್ವದ ಪಾಠಗಳನ್ನು ಒಂದು ಗಂಟೆ ತಿಳಿಸುತ್ತಿದ್ದೇವೆ. ಸರಳವಾದ ಕನ್ನಡದಲ್ಲಿ ಅವರಿಗೆ ಅರ್ಥವಾಗುವಂತೆ ತಿಳಿಸಲು ಯತ್ನಿಸುತ್ತಿದ್ದೇವೆ. ಮಕ್ಕಳು ಪ್ರಶ್ನೆ ಕೇಳಿ, ಸಂದೇಹ ಪರಿಹರಿಸಿಕೊಳ್ಳುತ್ತಾರೆ. ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮರುದಿನದ ವಿಷಯದ ಕುರಿತು ಮಕ್ಕಳಿಗೆ ತಿಳಿಸುತ್ತೇನೆ ಹಾಗೂ ಲಿಂಕ್ ಕೂಡ ಕಳುಹಿಸುತ್ತೇನೆ. ಪಾಲ್ಗೊಳ್ಳುವ ಬಗ್ಗೆ ಸಲಹೆ ನೀಡುತ್ತೇನೆ. ಪಾಠ ಮುಗಿದ ನಂತರ ನಾವೇ ನೋಟ್ಸ್ ಸಿದ್ಧಪಡಿಸಿ ಗ್ರೂಪಲ್ಲಿ ಹಂಚಿಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಈ ಪೇಜ್‌ನ ಸದಸ್ಯರು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ 40 ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಪದಾರ್ಥಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಹೋದ ವರ್ಷ ಪ್ರವಾಹದಿಂದ ಸಂತ್ರಸ್ತರಾದ ಹಾಗೂ ಎಚ್‌ಐವಿ ಬಾಧಿತ ಆರು ಕುಟುಂಬಗಳನ್ನು ದತ್ತು ಪಡೆದು ಆರು ತಿಂಗಳವರೆಗೆ ದಿನಸಿ ಪೂರೈಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT