ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಮಾಡಿ, ಸಂಭ್ರಮಿಸಿ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

* ಚುನಾವಣಾ ಕರ್ತವ್ಯದಲ್ಲಿ ನಿಮ್ಮ ದಿನಚರಿ ಹೇಗಿದೆ?
ಚುನಾವಣೆ ಇದ್ದರೂ, ಇಲ್ಲದಿದ್ದರೂ ನಮಗೆ ಇಂಥದ್ದೇ ನಿರ್ದಿಷ್ಟ ದಿನಚರಿ ಅಂತೇನೂ ಇರೋದಿಲ್ಲ. ದಿನದ 24 ಗಂಟೆಯೂ ಕೆಲಸ ಮಾಡಬೇಕಾಗುತ್ತದೆ. ಯಾವಾಗ ಎಲ್ಲಿಂದ ದೂರು ಬರುತ್ತೋ ಹೇಳಲಾಗದು. ಬೆಳಿಗ್ಗೆಯಿಂದಲೇ ನಮ್ಮ ಕೆಲಸ ಶುರುವಾಗುತ್ತದೆ. ನಗರದ ವ್ಯಾಪ್ತಿಯಲ್ಲಿ ರಾತ್ರಿ ಏನೆಲ್ಲ ಘಟನೆಗಳು ಸಂಭವಿಸಿವೆ ಹಾಗೂ ನಮ್ಮ ಸಿಬ್ಬಂದಿ ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂಬ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿ ಮಾಹಿತಿ ನೀಡುತ್ತಾರೆ. ಆ ಮಾಹಿತಿ ಆಧರಿಸಿ ಸಂಬಂಧಪಟ್ಟ ಡಿಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ಮಾರ್ಗದರ್ಶನ ನೀಡುತ್ತೇನೆ.

ಬೆಳಿಗ್ಗೆ 6.30ಕ್ಕೆ ಏಳುತ್ತೇನೆ. ಮಲಗುವುದು ರಾತ್ರಿ 11.30ರ ಮೇಲೆಯೇ. ಇದು ಚುನಾವಣಾ ಕಾಲವಾಗಿರುವುದರಿಂದ ಇಂತಿಷ್ಟೇ ಸಮಯಕ್ಕೆ ಎದ್ದೇಳುತ್ತೇನೆ ಹಾಗೂ ಮಲಗುತ್ತೇನೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಲಸದ ಒತ್ತಡವೂ ತುಸು ಜಾಸ್ತಿಯೇ ಇದೆ.

* ಊಟ–ತಿಂಡಿಯ ವ್ಯವಸ್ಥೆ ಹೇಗೆ ನಿರ್ವಹಣೆ ಮಾಡಿಕೊಳ್ಳುವಿರಿ?
ಪೊಲೀಸ್ ಅಧಿಕಾರಿಯಾಗಿರುವುದರಿಂದ ನಾನು ದೈಹಿಕವಾಗಿ ಫಿಟ್ ಆಗಿರಬೇಕು. ಅದಕ್ಕೆ ಆಹಾರ ಸೇವನೆಯೂ ಮುಖ್ಯ. ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ ಮಾಡಿಕೊಳ್ಳುವೆ. ಹೆಚ್ಚಾಗಿ ಹೊರಗಡೆ ಊಟ ಮಾಡುವುದಿಲ್ಲ. ಮನೆ ಊಟಕ್ಕೆ ಹೆಚ್ಚು ಆದ್ಯತೆ ನೀಡುವೆ. ಕೆಲಸದ ನಿಮಿತ್ತ ಹೊರಗಡೆ ಇದ್ದಾಗ ಕೆಲವೊಮ್ಮೆ ನಾನು ಹಾಗೂ ನಮ್ಮ ಅಧಿಕಾರಿಗಳ ಜತೆಗೆ ಹೊರಗಡೆ ತಿನ್ನುತ್ತೇನೆ. ಅದು ತೀರಾ ಕಡಿಮೆ.

*ಚುನಾವಣಾ ಸಂಬಂಧ ಒತ್ತಡ ಹೇಗೆ ನಿರ್ವಹಿಸುತ್ತೀರಿ?
ಐದು ವರ್ಷಕ್ಕೊಮ್ಮೆ ಬರುವ ಬಹುದೊಡ್ಡ ಜವಾಬ್ದಾರಿ ಚುನಾವಣಾ ನಿರ್ವಹಣೆ. ಅದನ್ನು ಸುಸೂತ್ರವಾಗಿ ನಡೆಸಿಕೊಡುವ ಹೊಣೆ ನಮ್ಮದು. ಅರೆ ಮಿಲಿಟರಿ ಪಡೆ, ಸ್ಥಳೀಯ ಪಡೆಗಳು ಸೇರಿದಂತೆ ಸಾಕಷ್ಟು ಮಂದಿ ಚುನಾವಣೆಗಾಗಿ ಹಗಲಿರುಳು ದುಡಿಯುತ್ತಾರೆ. ಅವರನ್ನೆಲ್ಲ ನಿರ್ವಹಣೆ ಮಾಡಬೇಕಾಗುತ್ತದೆ. ಹೀಗಾಗಿ, ಸಹಜವಾಗಿ ಒತ್ತಡ ಇರುತ್ತೆ. ಅದನ್ನು ನಿಭಾಯಿಸಲು ನಿತ್ಯ ವಾಕಿಂಗ್ ಮಾಡುತ್ತೇನೆ. ಜತೆಗೆ ವ್ಯಾಯಾಮ ಹಾಗೂ ಯೋಗವನ್ನೂ ಮಾಡುವೆ. ಇದರಿಂದ ಒತ್ತಡ ನಿವಾರಣೆಯಾಗಿ ಮಾನಸಿಕವಾಗಿ ನೆಮ್ಮದಿಯಾಗಿ ಕೆಲಸಕ್ಕೆ ಹೋಗುತ್ತೇನೆ.

ನನ್ನ ವ್ಯಾಪ್ತಿಗೆ ಬರುವ ಪ್ರತಿಯೊಂದು ವಿಚಾರಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಪರಿಹಾರವನ್ನು ಕಂಡುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಚುನಾವಣೆ ಇದ್ದರೂ ಇಲ್ಲದಿದ್ದರೂ ಇದೊಂದು ನಿರಂತರ ಪ್ರಕ್ರಿಯೆ. ರೌಡಿಗಳ ನಿಯಂತ್ರಣ, ಪೊಲೀಸ್ ಇಲಾಖೆಯ ದೈನಂದಿನ ಕಾರ್ಯ, ಗಣ್ಯರಿಗೆ ಭದ್ರತೆ ನೀಡುವ ಕಾರ್ಯವೂ ನಮ್ಮ ಮೇಲಿರುತ್ತದೆ. ಚುನಾವಣಾ ಕೆಲಸ ಹಾಗೂ ಪೊಲೀಸ್ ಕೆಲಸ ಕಾರ್ಯಗಳನ್ನು ಒಟ್ಟೊಟ್ಟಿಗೆ ಮಾಡಿಕೊಂಡು ಹೋಗುತ್ತಿದ್ದೇನೆ. ಚುನಾವಣೆಯ ಕೆಲಸದ ಜೊತೆಗೆ ಪೊಲೀಸ್‌ ಕೆಲಸ ಕಾರ್ಯಗಳನ್ನು ಒಟ್ಟಿಗೆ ನಿಭಾಯಿಸುತ್ತಿದ್ದೇನೆ. 

* ಚುನಾವಣೆ ಆಯೋಗ ಹಾಗೂ ಪೊಲೀಸ್ ಇಲಾಖೆಯ ನಡುವಿನ ಸಮನ್ವಯತೆ ಬಗ್ಗೆ ಹೇಳಿ?
ಚುನಾವಣೆ ಆಯೋಗ ಹಾಗೂ ಪೊಲೀಸ್ ಇಲಾಖೆಯ ನಡುವಿನ ಸಮನ್ವಯತೆ ಉತ್ತಮವಾಗಿದೆ. ಆಯೋಗದ ಸಿಬ್ಬಂದಿ ಹಾಗೂ ಪೊಲೀಸರು ಸಮಾನ ಮನಸ್ಥಿತಿಯಿಂದ ಕೆಲಸ ಮಾಡುತ್ತಿದ್ದೇವೆ. ಯಾವುದೇ ತೊಂದರೆಗಳಿಲ್ಲದೆ ಸುಸೂತ್ರವಾಗಿ ಚುನಾವಣೆಯನ್ನು ಯಶಸ್ವಿಗೊಳಿಸುವ ವಿಶ್ವಾಸವಿದೆ.

* ಎಷ್ಟು ಚುನಾವಣಾ ಕರ್ತವ್ಯ ನಿರ್ವಹಿಸಿದ್ದೀರಿ?
1994 ಹಾಗೂ 1999ರ ವಿಧಾನಸಭೆ ಚುನಾವಣೆಗಳನ್ನು ನಾನು ನೇರವಾಗಿ ಕಾರ್ಯನಿರ್ವಹಿಸಿದ್ದೇನೆ. ಆಗ ತೀರಾ ಹತ್ತಿರದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕೆಲಸ ಮಾಡಿದ್ದೇನೆ. ಆದಾದ ಬಳಿಕ ನಾನು ಚುನಾವಣೆಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ನೇರವಾಗಿ ಆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ.

* ಕುಟುಂಬಕ್ಕೆ ಸಮಯ ಹೇಗೆ ನೀಡುತ್ತೀರಿ?
ಪತ್ನಿ ಅರ್ಚನಾ ಸುನೀಲ್ ಕುಮಾರ್. ಅವರೂ ಪೊಲೀಸ್ ಅಧಿಕಾರಿಯಾಗಿದ್ದವರು. ಹೀಗಾಗಿ, ನನ್ನ ಕೆಲಸದ ಬಗ್ಗೆ ಅವರಿಗೆ ಸಂಪೂರ್ಣವಾಗಿ ಗೊತ್ತಿದೆ. ಅವರು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವುದರಿಂದ ಆ ಚಿಂತೆ ನನ್ನನ್ನು ಕಾಡದು. ಮಗ ಅವಿಷ್ಕಾರ್ ಹಾಗೂ ಅರ್ಚನಾ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟಿದ್ದಾರೆ. ಅವರಿಗೆ ನಾನು ಲೆಕ್ಕಕ್ಕೇ ಇಲ್ಲ. ಎಲ್ಲಿಗಾದರೂ ಹೋಗಬೇಕೆಂದರೆ ಅವರಿಬ್ಬರೇ ಹೋಗುತ್ತಾರೆ. ನನ್ನನ್ನು  ಕರೆಯುವುದಿಲ್ಲ. ತೀರಾ ಅನಿವಾರ್ಯ ಇದ್ದಾಗ ಮಾತ್ರ ನಾನೂ ಅವರ ಜತೆ ಹೋಗುವೆ.

* ಇಲಾಖೆಯಿಂದ ಮತದಾನ ಜಾಗೃತಿ ಮಾಡುತ್ತಿರುವಿರಾ?
ಚುನಾವಣಾ ಆಯೋಗದ ಜತೆಗೂಡಿ ಕೆಲಸ ಮಾಡುತ್ತಿರುವುದ ರಿಂದ ಆಯೋಗ ಜಾರಿ ಮಾಡುವ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಇಲಾಖೆಯ ಪಾತ್ರವೂ ಇದೆ. ನಮ್ಮ ಸಿಬ್ಬಂದಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಮೇ 9ರಂದು ಚುನಾವಣೆ ಆಯೋಗವು ರ‍್ಯಾಲಿ ಮಾಡುತ್ತಿದೆ. ಅದರಲ್ಲೂ ನಾವು ಜತೆಗೂಡುತ್ತಿದ್ದೇವೆ. ಇಲಾಖೆ ವತಿಯಿಂದ ಯಾವುದೇ ಜಾಗೃತಿ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಆಯೋಜಿಸಿಲ್ಲ. ಆಯೋಜಿಸುವುದೂ ಇಲ್ಲ.

* ಭದ್ರತೆ ಸಂಬಂಧಪಟ್ಟಂತೆ ಯಾವೆಲ್ಲ ಕ್ರಮಕೈಗೊಂಡಿದ್ದೀರಿ ?
ಚುನಾವಣೆಗಾಗಿ 10,500 ಪೊಲೀಸರು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ. ಈ ಪೈಕಿ ಬಹುತೇಕರು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ 44 ಅರೆ ಸೇನಾ ಪಡೆಗಳು ( ಒಂದು ಪಡೆಯಲ್ಲಿ 110–120 ಮಂದಿ ಇರುತ್ತಾರೆ), ಕೆಎಸ್‌ಆರ್‌ಪಿ ತುಕಡಿಗಳು ಚುನಾವಣೆಗೆ ಸಜ್ಜಾಗಿವೆ.  2,500 ಗೃಹರಕ್ಷಕ ದಳ ಸಿಬ್ಬಂದಿಯೂ ಇದ್ದಾರೆ.

* ಚುನಾವಣಾ ಸಂದರ್ಭದ ಸವಾಲುಗಳೇನು?
ಚುನಾವಣೆ ಸಂಬಂಧ ಪಟ್ಟಂತೆ ಇದುವರೆಗೆ ನನಗೆ ಯಾವುದೇ ರೀತಿಯ ರಿಸ್ಕ್‌ಗಳು ಎದುರಾಗಿಲ್ಲ. ನಾನು ಎದುರಿಸಿದ ಎಲ್ಲ ಚುನಾವಣೆಗಳು ಸುಸೂತ್ರವಾಗಿ ನಡೆದಿವೆ. ಚುನಾವಣೆ ವೇಳೆ ಗುಂಪು ಗಲಭೆಗಳು ಸರ್ವೇ ಸಾಮಾನ್ಯ. ಪೊಲೀಸ್ ಅಧಿಕಾರಿಯಾಗಿ ಇಂಥ ಸಂದರ್ಭಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಅನುಭವನದಿಂದ ಪಾಠ ಕಲಿತಿದ್ದೇನೆ. ನಗರ ವ್ಯಾಪ್ತಿಯಲ್ಲಿ ಇದುವರೆಗೆ ನಗದು, ಸೀರೆ, ಶರ್ಟ್‌ಗಳು ಸೇರಿ ₹ 26 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ.

ಸಿಬ್ಬಂದಿಗೆ ಏನೇನು ವ್ಯವಸ್ಥೆ ಕಲ್ಪಿಸಿದ್ದೀರಿ?
ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಪೊಲೀಸರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಸಮಯಕ್ಕೆ ಸರಿಯಾಗಿ ಅವರಿಗೆ ಊಟ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಕೆಲ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುತ್ತದೆ. ಅಂತಹ ಕಡೆ ಸಂಚಾರಿ ಶೌಚಾಲಯಕ್ಕೆ ವ್ಯವಸ್ಥೆ ಮಾಡಿದ್ದೇವೆ. ಮತದಾರರಷ್ಟೇ ಚುನಾವಣೆ ಸಿಬ್ಬಂದಿಯೂ ಮುಖ್ಯ. ಹೀಗಾಗಿ ಅವರಿಗೆ ಬೇಕಾದ ಸೌಲತ್ತುಗಳನ್ನು ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದ್ದೇವೆ.

ಚುನಾವಣಾ ಸಂದರ್ಭದಲ್ಲಿ ಜನರಿಗೇನು ಹೇಳಬಯಸುವಿರಿ?

ವಿಧಾನಸಭೆ ಚುನಾವಣೆ ಎಂಬುದು ಐದು ವರ್ಷಕ್ಕೊಮ್ಮೆ ಬರುವ ಜನತಂತ್ರದ ಹಬ್ಬ. ಮತದಾನದ ದಿನವಾದ ಮೇ 12 ರಂದು ರಜೆ ನೀಡಲಾಗಿರುತ್ತದೆ. ಎಲ್ಲರೂ ತಪ್ಪದೇ ಮತ ಚಲಾಯಿಸಿ. ಮತದಾನ ಎಲ್ಲರ ಜವಾಬ್ದಾರಿ.

ಸಂವಿಧಾನವು ನಮಗೆ ನೀಡಿರುವ ಆ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು. ರಜೆ ಇದೆ ಎಂಬ ಕಾರಣಕ್ಕೆ ಮಜಾ ಮಾಡುತ್ತಲೇ ಕಾಲಹರಣ ಮಾಡಬೇಡಿ. ಮತ ಹಾಕಿ ಮಜಾ ಮಾಡಿ, ಇಲ್ಲವೇ ಮಜಾ ಮಾಡಿ ಮತ ಹಾಕಿ. ಒಟ್ಟಾರೆ ಆಲಸ್ಯ ತೊರೆದು ಮತ ಹಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT