ಬುಧವಾರ, ಜನವರಿ 22, 2020
18 °C

'ಆಪರೇಷನ್ ಕಮಲ' ಮಾಡಿಲ್ಲ, ಮಾಡಲ್ಲ: ನಳಿನ್ ಕುಮಾರ್ ಕಟೀಲ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಮ್ಮ ಪಕ್ಷ ಹಿಂದೆಯೂ ಆಪರೇಷನ್‌ ಕಮಲ ಮಾಡಿಲ್ಲ; ಮುಂದೆಯೂ ಮಾಡುವುದಿಲ್ಲ. ತಮ್ಮ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗದಿದ್ದರೆ ನಾವೇನು ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ನಗರದಲ್ಲಿ ಆಯೋಜನೆಯಾಗಿರುವ ಸಾಂಸ್ಥಿಕ ಚುನಾವಣಾ ವೀಕ್ಷಕರ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಬಿಜೆಪಿ ಎರಡನೇ ಹಂತದಲ್ಲಿ ಆಪರೇಷನ್‌ ಕಮಲ ಮಾಡುತ್ತದೆಯೇ ಎಂದು ಮಾಧ್ಯಮದವರ ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

‘ನಮ್ಮದು ರಾಜಕೀಯ ಪಕ್ಷ. ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲ ಕಾರ್ಯಕರ್ತರು ಹಾಗೂ ನಾಯಕರನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ನಿಂದ ಯಾರೇ ಬಂದರೂ ಅವರನ್ನು ನಾವು ಬೇಡ ಎನ್ನುವುದಿಲ್ಲ. ದಿನೇಶ ಗುಂಡೂರಾವ್ ಮೊದಲು ತಮ್ಮ ಪಕ್ಷದ ಶಾಸಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಲಿ. ಆ ಪಕ್ಷದ ಶಾಸಕರೇ ದುಃಖಿತರಾಗಿ ಬಂದರೆ ನಾವೇನು ಮಾಡಬೇಕು’ ಎಂದರು.

‘ಉಪಚುನಾವಣೆಗೆ ಪ್ರಚಾರಕ್ಕೆ ಹೋದಲೆಲ್ಲ ನಮ್ಮ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನರಲ್ಲಿಯೂ ಬಿಜೆಪಿ ಅಲೆಯಿದ್ದು; ಎಲ್ಲ 15 ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. ನಮ್ಮ ಸರ್ಕಾರ ಈಗಲೂ ಸ್ಥಿರವಾಗಿದೆ. ಫಲಿತಾಂಶದ ಬಳಿಕವೂ ಸ್ಥಿರವಾಗಿ ಇರುತ್ತದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದರ ಬಗ್ಗೆ ಪಕ್ಷದ ಹಿರಿಯರು ನಿರ್ಧರಿಸುತ್ತಾರೆ’ ಎಂದು ತಿಳಿಸಿದರು. ಕಾರ್ಯಕರ್ತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ.

ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೂ ನ್ಯಾಯ ಕೊಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಶಾಸಕರಲ್ಲಿ ಯಾರಲ್ಲಿಯೂ ಅಸಮಾಧಾನವಿಲ್ಲ ಎಂದರು.

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ‘ಕೂಸು ಹುಟ್ಟುವ ಮುನ್ನವೇ ಕಾಂಗ್ರೆಸ್‌ ಕುಲಾವಿ ಹೊಲಿಸಿದೆ. ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮೊದಲೇ ಯಾರು ಸಿ.ಎಂ. ಆಗಬೇಕೆಂದು ಅವರಲ್ಲಿ ಚರ್ಚೆ ನಡೆಯುತ್ತಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಸಿ.ಎಂ. ಆಗುತ್ತೇನೆ ಎಂದು ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ’ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಜನ ಕೇಕೆ ಹೊಡೆಯುವ ರೀತಿ ಮಾತನಾಡಿದರೆ, ವೋಟು ಬರುವುದಿಲ್ಲ. ಅವರಿಗೆ ಜನರ ನಾಡಿಮಿಡಿತವೇ ಗೊತ್ತಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಸಾಹಸ ಮಾಡಬೇಕಾಗುತ್ತದೆ ಎಂದರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು