ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಸಂಘರ್ಷಕ್ಕೆ ಆಸ್ಪದವಾಗದಿರಲಿ’

Last Updated 22 ನವೆಂಬರ್ 2019, 12:27 IST
ಅಕ್ಷರ ಗಾತ್ರ

ಹೊಸಪೇಟೆ: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಲಘುವಾಗಿ ಮಾತನಾಡಬಾರದು. ನಮ್ಮಿಬ್ಬರ ನಡುವಿನ ಟೀಕೆ, ಟಿಪ್ಪಣಿಗಳಿಂದ ಜಾತಿ ಸಂಘರ್ಷಕ್ಕೆ ಆಸ್ಪದ ಆಗಬಾರದು’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲ್ಲೂಕಿನ ಕಾರಿಗನೂರಿನಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಪರ ಮತಯಾಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ವರ್ಸಸ್‌ ಶ್ರೀರಾಮುಲು ಮಾತನಾಡುವುದರಿಂದ ಜಾತಿ ಸಂಘರ್ಷ ಆಗಬಾರದು. ನಾನು ಪೆದ್ದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬುದ್ಧಿವಂತರಾಗಿ ಸಿದ್ದರಾಮಯ್ಯನವರು ಏನು ಮಾಡಿದ್ದಾರೆ?’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಹಿರಿಯರು. ಅವರು ನಮಗೆ ಮಾದರಿಯಾಗಬೇಕು. ನನ್ನಂತಹ ವ್ಯಕ್ತಿ ಬಗ್ಗೆ ಟೀಕೆ ಮಾಡಿ ಸಣ್ಣವರು ಆಗಬಾರದು. ಶ್ರೀರಾಮುಲು ಸ್ವಾಭಿಮಾನದ ವ್ಯಕ್ತಿ. ನನಗೆ ಪಕ್ಷ ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ನಿಮಗೆ ಏನೂ ಜವಾಬ್ದಾರಿ ಕೊಟ್ಟಿದ್ದಾರೆ?’ ಎಂದು ಕೇಳಿದರು.

‘ದಲಿತ, ಹಿಂದುಳಿದ ಸಮುದಾಯದ ನಾಯಕರನ್ನು ತುಳಿದು ಮೇಲೆ ಬರಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ ಶಕ್ತಿ ಉಳಿದಿಲ್ಲ. ನಾಲಿಗೆ ಮೇಲೆ ಹಿಡಿತವಿಲ್ಲದೆ ಏನೇನೋ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಕೊಡಲಿ ಹಿಡಿದುಕೊಂಡು ಬಡಿದಾಡಲಿ’:

‘ಸಿದ್ದರಾಮಯ್ಯ ಹಾಗೂ ಬಿ. ಶ್ರೀರಾಮುಲು ಅವರು ಪರಸ್ಪರ ಕೊಡಲಿ ಹಿಡಿದುಕೊಂಡು ಬಡಿದಾಡಲಿ. ಆದರೆ, ಅವರ ಹೇಳಿಕೆಗಳಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರದಿರಲಿ’ ಎಂದು ಶಾಸಕ ರಾಜುಗೌಡ ನಾಯಕ ಹೇಳಿದರು.

ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರಿಬ್ಬರೂ ಜಗಳವಾಡಲಿ. ಆದರೆ, ಜಾತಿ ಬರಬಾರದು. ಶ್ರೀರಾಮುಲು ಅವರನ್ನು ವಾಲ್ಮೀಕಿ ಸಮಾಜ ಹಾಗೂ ಸಿದ್ದರಾಮಯ್ಯನವರು ಕುರುಬ ಸಮಾಜದ ಮುಖಂಡರು ಗೌರವಿಸುತ್ತಾರೆ. ಇವರಿಬ್ಬರೂ ಏನೇನೋ ಹೇಳಿಕೆ ಕೊಟ್ಟರೆ ಹಳ್ಳಿಗಳಲ್ಲಿ ಎರಡೂ ಜಾತಿಯವರು ಪರಸ್ಪರ ಸಂಘರ್ಷಕ್ಕೆ ಇಳಿಯಬಹುದು. ಅದಕ್ಕೆ ಆಸ್ಪದ ಮಾಡಿಕೊಡಬಾರದು. ಈ ಕುರಿತು ಇಬ್ಬರಲ್ಲೂ ಮನವಿ ಮಾಡುವೆ’ ಎಂದರು.

‘ಇಬ್ಬರೂ ಮುಖಂಡರು ತತ್ವ, ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಮಾತನಾಡಲಿ. ಆದರೆ, ವೈಯಕ್ತಿಕವಾದ ಹೇಳಿಕೆಗಳನ್ನು ಕೊಡಬಾರದು. ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಿದಂತಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT