ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ವರುಣ; ಮನೆಗಳಿಗೆ ನುಗ್ಗಿದ ನೀರು, ಕುಸಿದ ಗೋಡೆ

Last Updated 5 ಜೂನ್ 2018, 7:02 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಸೋಮವಾರ ಸುರಿದ ಅಬ್ಬರದ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿತು. ಕೆಲ ಮನೆಗಳ ಗೋಡೆಗಳು ಕುಸಿದಿದ್ದು, ಒಂದೆರಡು ಮನೆಗಳ ಚಾವಣಿ ಹೆಂಚುಗಳು ಹಾರಿಹೋಗಿ ಹಾನಿಯಾಗಿದೆ.

ಪಟ್ಟಣದ ಬಾಬು ಕೆಂಚಪ್ಪ ಪಾಗಾದ, ಅಡಿವೆಪ್ಪ ಬಸಪ್ಪ ವಾಲಿ ಎಂಬುವವರ ಮನೆ ಗೋಡೆಗಳು ಮಳೆಯಿಂದ ಕುಸಿದಿವೆ. 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿಟ್ಟಿದ್ದ ದವಸ-ಧಾನ್ಯ ಸೇರಿದಂತೆ ಗೃಹೋಪ
ಯೋಗಿ ವಸ್ತುಗಳೆಲ್ಲ ಹಾಳಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಗಾಂಧಿ ನಗರದಲ್ಲಿ ಪಕ್ಕದ ಸಂಪಗಾವಿ ರಸ್ತೆ ಪಕ್ಕದ ಚರಂಡಿ ನೀರು ಉಕ್ಕಿ ಹೆದ್ದಾರಿ ಪಕ್ಕದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಸಿತು. ಪೇಟೆಓಣಿ, ಕಮ್ಯಾರ ಓಣಿ ಸೇರಿದಂತೆ ಹಲವು ಕಡೆಗಳಲ್ಲಿ ಚರಂಡಿ ತುಂಬಿ ಮನೆಗಳಿಗೆ ನುಗ್ಗಿತು. ಮನೆಯೊಳಗೆ ನೀರು ನುಗ್ಗುತ್ತಿದ್ದಂತೆ ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಪಟ್ಟರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಅಲ್ಲಿನ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿ ರಾಜು ಕೊಂಡಿಕೊಪ್ಪ ಮಾಹಿತಿ ಪಡೆದರು. ಸೋಮವಾರ ಸಂತೆಯಲ್ಲಿ ವ್ಯಾಪಾರಿಗಳು ತೊಂದರೆ ಎದುರಿಸಿದರು. ಮಳೆಯಿಂದ ಹರಿದು ಬರುತ್ತಿದ್ದ ಪ್ರವಾಹದಿಂದ ಮಾರಾಟಕ್ಕಿಟ್ಟಿದ್ದ ತರಕಾರಿ ಮತ್ತಿತರ ಪದಾರ್ಥಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರು.

ಜಮೀನಿಗೆ ನುಗ್ಗಿದ ನೀರು: ಪಟ್ಟಣದ ವಿದ್ಯಾನಗರದ ಸಮೀಪದಲ್ಲಿರುವ ಜಮೀನೊಂದಕ್ಕೆ ಏಕಾಏಕಿ ನುಗ್ಗಿದ ಮಳೆನೀರಿನಿಂದ ಸುಮಾರು ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾ ಬೆಳೆ ಹಾನಿಯಾಗಿದೆ. ತುಂಬುಕೆರೆಗೆ ಹರಿಯುವ ನೀರಿನ ಚರಂಡಿಯಲ್ಲಿ ಮಣ್ಣು ತುಂಬಿಕೊಂಡು ನೀರು ಹರಿಯದ್ದರಿಂದ ಏಕಾಏಕಿ ಪಕ್ಕದಲ್ಲಿದ್ದ ಜಮೀನಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ನೀರಿನಿಂದ ಹಾನಿ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಬೇಕು. ಕೆರೆಗೆ ನೀರು ಹರಿಯುವಂತೆ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಜಮೀನಿನ ರೈತ ಮಹಾಂತೇಶ ದುಂಡಪ್ಪ ಗಣಾಚಾರಿ ಆಗ್ರಹಿಸಿದ್ದಾರೆ.

ಬೊಮ್ಮನಾಳ ಗ್ರಾಮದಲ್ಲಿ ಮನೆಗಳಿಗೆ ಹಾನಿ (ರಾಯಬಾಗ ವರದಿ): ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ತಾಲ್ಲೂಕಿನ ಬೊಮ್ಮನಾಳ, ನಿಡಗುಂದಿ ಮತ್ತು ಬ್ಯಾಕೂಡ ಗ್ರಾಮಗಳಲ್ಲಿ  ಮಳೆಯಿಂದಾಗಿ ಹಲವಾರು ಮರಗಳು ಹಾಗೂ ರಾಯಬಾಗ– ಹಾರೂಗೇರಿ ಮುಖ್ಯ ರಸ್ತೆ ಮೇಲೆ ಉರುಳಿದವು. ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತಯವಾಯಿತು. ಬೊಮ್ಮನಾಳ ಗ್ರಾಮದಲ್ಲಿ 7–8 ಮನೆಗಳ ಪತ್ರಾಸ ಹಾರಿಹೋಗಿವೆ. ರಾಯಬಾಗ ರೈಲ್ವೆ ನಿಲ್ದಾಣದ ಬಳಿಯ ಮನೆಯೊಂದರ ಚಾವಣಿ ಹಾರಿದ್ದು ಸ್ಥಳದಲ್ಲಿದ್ದ ಎಮ್ಮೆ ಒಂದು ಸತ್ತಿದೆ ಎಂದು ಜ್ಯೋತಿ ಮಾನೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT