ಗುರುವಾರ , ಏಪ್ರಿಲ್ 2, 2020
19 °C
ಕಳಪೆ ಬೀಜ: ರೈತರಿಗೆ ಪರಿಹಾರ ಕೊಡಿಸಿದ ಗ್ರಾಹಕರ ವೇದಿಕೆ

ಕಳಪೆ ಬೀಜ ಪೂರೈಕೆ: ₹11.25 ಲಕ್ಷ ನಷ್ಟ ಭರಿಸಲು ಬೀಜ ನಿಗಮಕ್ಕೆ ಸೂಚನೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಳಪೆ ಗುಣಮಟ್ಟದ ಭತ್ತದ ಬಿತ್ತನೆ ಬೀಜದಿಂದ ಆರ್ಥಿಕ ನಷ್ಟ ಅನುಭವಿಸಿದ ತಾಲ್ಲೂಕಿನ ಶಿರಮಗೊಂಡನಹಳ್ಳಿಯ 12 ರೈತರಿಗೆ ಕರ್ನಾಟಕ ರಾಜ್ಯ ಬೀಜ ನಿಗಮವು ಒಟ್ಟು ₹ 11.25 ಲಕ್ಷ ಹಾಗೂ ಈ ಮೊತ್ತಕ್ಕೆ ಶೇ 9 ಬಡ್ಡಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸೋಮವಾರ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ನೇತೃತ್ವದ ಪೀಠವು, ‘ಮಾನಸಿಕ ಹಿಂಸೆ ಕೊಟ್ಟಿರುವುದಕ್ಕೆ ತಲಾ ₹ 10 ಸಾವಿರ ಹಾಗೂ ದಾವೆಗೆ ಮಾಡಿರುವ ವೆಚ್ಚ ಭರಿಸಲು ತಲಾ ₹ 5,000 ಅನ್ನು ಪ್ರತಿವಾದಿಗಳಾದ ರಾಜ್ಯ ಬೀಜ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿ ಹಾಗೂ ದಾವಣಗೆರೆ ಕಚೇರಿಯು ರೈತರಿಗೆ 45 ದಿನಗಳ ಒಳಗೆ ಪಾವತಿಸಬೇಕು’ ಎಂದು ನಿರ್ದೇಶನ ನೀಡಿದೆ.

ಪ್ರಕರಣದ ವಿವರ: ಶಿರಮಗೊಂಡನಹಳ್ಳಿಯ ರೈತರು 2018ರ ಡಿಸೆಂಬರ್‌ನಲ್ಲಿ ಸೋನಾ (BPT5204) Dec-17-0-04-0-331 ತಳಿಯ ಭತ್ತದ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಸಿ, ನಾಟಿ ಮಾಡಿದ್ದರು. ಇಳುವರಿ ತೀರಾ ಕಡಿಮೆ ಬಂದಿದ್ದರಿಂದ ಆತಂಕಗೊಂಡ ರೈತರು, ಕೃಷಿ ಇಲಾಖೆಗೆ ದೂರು ನೀಡಿದ್ದರು. ‘ನಿಗಮ ಪೂರೈಸಿದ ಬೀಜವು ಶೇ 16–17ರಷ್ಟು ದೋಷ
ಪೂರಿತವಾಗಿದೆ’ ಎಂದು ಬೆಳೆ ಪರೀಕ್ಷಿಸಿದ್ದ ಕೃಷಿ ಸಹಾಯಕ ನಿರ್ದೇಶಕರು ವರದಿ ನೀಡಿದ್ದರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳೂ ಇದೇ ಅಭಿಪ್ರಾಯಪಟ್ಟಿದ್ದರು.

ಹೀಗಾಗಿ ಗ್ರಾಮದ 12 ರೈತರು 2019ರ ಜುಲೈ 15ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು. ‘ನಿಗಮ ಪೂರೈಸಿದ ಕಳಪೆ ಬೀಜದಿಂದಾಗಿ
ಶೇ 50ರಷ್ಟು ಇಳುವರಿ ಕಡಿಮೆ ಬಂದಿದೆ. ಪ್ರತಿ ಎಕರೆಗೆ ₹ 45 ಸಾವಿರ ಪರಿಹಾರ ಕೊಡಿಸಬೇಕು’ ಎಂದು ವಕೀಲ ಬಸವರಾಜ ಎಸ್‌. ಅವರು ರೈತರ ಪರ ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿಯಾಗಿ ನಿಗಮವು, ‘ನಾವು ಪೂರೈಸುವ ಬೀಜದಲ್ಲಿ ಶೇ 80ರಷ್ಟು ಮೊಳಕೆಯೊಡೆಯುವ ಸಾಮರ್ಥ್ಯವಿದೆ. ಇಳುವರಿ ಕಡಿಮೆ ಬರಲು ಬೀಜದ ಗುಣಮಟ್ಟ ಕಾರಣವಲ್ಲ. ರೈತರು ಸಕಾಲಕ್ಕೆ ರಸಗೊಬ್ಬರ, ನೀರು, ಕೀಟನಾಶಕಗಳನ್ನು ಬಳಸದೇ ಇರು
ವುದು ಹಾಗೂ ಕೀಟಬಾಧೆಯಿಂದ ಇಳುವರಿ ಕುಂಠಿತವಾಗಿದೆ. ಅಲ್ಲದೇ ರೈತ ಸಂಪರ್ಕ ಕೇಂದ್ರದಿಂದ ಬೀಜ ಖರೀದಿಸಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ’ ಎಂದು ವಾದಿಸಿತ್ತು.

‘ಕೃಷಿ ಇಲಾಖೆ ವರದಿಯು ಬೀಜ ದೋಷಪೂರಿತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಸಿದ್ದರೂ ಅದಕ್ಕೆ ಬೀಜ ಪೂರೈಸಿದ ನಿಗಮವೇ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ರೈತರಿಗೆ ನಷ್ಟವನ್ನು ಭರಿಸಿಕೊಡಬೇಕು’ ಎಂದು ಗ್ರಾಹಕರ ವೇದಿಕೆಯು ಆದೇಶದಲ್ಲಿ ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು