ಕಾಂಗ್ರೆಸ್‌ ಸಚಿವರ ವಿಶ್ವಾಸ ಗಳಿಸಲು ಪರಮೇಶ್ವರ ಯತ್ನ

7

ಕಾಂಗ್ರೆಸ್‌ ಸಚಿವರ ವಿಶ್ವಾಸ ಗಳಿಸಲು ಪರಮೇಶ್ವರ ಯತ್ನ

Published:
Updated:

ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಉ‍‍ಪಾಹಾರ ಕೂಟದ ನೆಪದಲ್ಲಿ ಕಾಂಗ್ರೆಸ್‌ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದರು.

ಸದಾಶಿವನಗರದಲ್ಲಿರುವ ಅವರ ಬಿಡಿಎ ಕ್ವಾಟ್ರಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಉಪಾಹಾರ ಕೂಟದಲ್ಲಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳ ಸಮಾಲೋಚನೆ ನಡೆಸಿದರು.

ಪರಮೇಶ್ವರ ಅವರು ಉಳಿದ ಸಚಿವರ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಆರ್‌.ವಿ.ದೇಶಪಾಂಡೆ, ಎಚ್‌.ಎನ್‌. ಶಿವಶಂಕರ ರೆಡ್ಡಿ, ಯು.ಟಿ.ಖಾದರ್‌, ಜಯಮಾಲಾ, ರಮೇಶ ಜಾರಕಿಹೋಳಿ ಭಾಗಹಿಸಿರಲಿಲ್ಲ. ಕಾಂಗ್ರೆಸ್‌ ಶಾಸಕರ ಉಪಾಹಾರ ಕೂಟವನ್ನು ಶನಿವಾರ ಆಯೋಜಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಂದುವರೆಸುವುದು ಹಾಗೂ ಲೋಕಸಭಾ ಚುನಾವಣೆ ತಯಾರಿ ಸಂಬಂಧ ಚರ್ಚಿಸಿದರು. ಮೇಯರ್ ಆಯ್ಕೆ ವಿಚಾರ ಕುರಿತು ಸಮಾಲೋಚಿಸಿದರು. ಜಾರಕಿಹೊಳಿ ಕುಟುಂಬ ಹಾಗೂ ಲಕ್ಷ್ಮಿ ಹೆಬ್ಬಾಳಕರ ನಡುವಿನ ವಿವಾದದ ಬಗ್ಗೆಯೂ ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

‘ಈಗಷ್ಟೇ ಸರ್ಕಾರ ನೂರು ದಿನ ಪೂರೈಸಿದ್ದು, ಬೆಳಗಾವಿಯಲ್ಲಿ ಕಿತ್ತಾಟ ನಡೆಸಿರುವುದು ಸರಿಯಲ್ಲ. ಲಕ್ಷ್ಮಿ ಹೆಬ್ಬಾಳಕರ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಪ್ರತಿಷ್ಠೆ ಕಾರಣಕ್ಕೆ ಸಣ್ಣ ವಿಷಯವನ್ನು ದೊಡ್ಡದು ಮಾಡಿಕೊಂಡಿದ್ದಾರೆ.‌ ಹೈಕಮಾಂಡ್ ವರೆಗೂ ಈ ವಿಷಯ ತಲುಪಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿ, ‘ಮಾಧ್ಯಮಗಳ ಮುಂದೆ ರಮೇಶ್ ಜಾರಕಿಹೊಳಿ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ನಾನು ಲಕ್ಷ್ಮಿ ಹೆಬ್ಬಾಳಕರ ಬೆನ್ನಿಗೆ ನಿಂತಿದ್ದೇನೆ ಎಂಬುದು ಸರಿಯಲ್ಲ. ನಾನು ಯಾರ ಪರವಾಗಿಯೂ ಇಲ್ಲ’ ಎಂದರು.

‘ಸ್ಥಳೀಯ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಗೆಲುವು ಪಡೆದಿದೆ.‌ ಕೆಲವೆಡೆ ಅತಂತ್ರ ಸ್ಥಿತಿ ಇದೆ. ಹೀಗಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅಲ್ಲಿಯೂ ನಾವೇ ಅಧಿಕಾರ ರಚಿಸಲು ನಿರ್ಧರಿಸಿದ್ದೇವೆ’ ಎಂದು ಪರಮೇಶ್ವರ ಸೂಚಿಸಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ, ಎಲ್ಲ ಜಿಲ್ಲಾ ಸಚಿವರು ತಮ್ಮ‌ ಕ್ಷೇತ್ರಗಳಿಗೆ ತೆರಳುವಂತೆಯೂ ಸೂಚನೆ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದೆ. ಈ ಬಗ್ಗೆ ಹೆಚ್ಚು ಗಮನ ನೀಡಿ, ಸಮಸ್ಯೆ ಆಲಿಸಲು ಜಿಲ್ಲೆಗಳಿಗೆ ತೆರಳುವಂತೆ ಹೇಳಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !