ಶನಿವಾರ, ಸೆಪ್ಟೆಂಬರ್ 21, 2019
21 °C
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಪ್ರತಿಕ್ರಿಯೆ

ಪಂಥಾಹ್ವಾನ ನೀಡಿಲ್ಲ; ಸ್ನೇಹ ಸಂವಾದಕ್ಕೆ ಕರೆದಿದ್ದೇನೆ: ವಿಶ್ವೇಶತೀರ್ಥ ಶ್ರೀ

Published:
Updated:
Prajavani

ಉಡುಪಿ: ವೀರಶೈವ–ಲಿಂಗಾಯತ ಧರ್ಮದ ವಿವಾದ ಕುರಿತು ಸಾಣೆಹಳ್ಳಿ ಶ್ರೀಗಳಿಗಾಗಲಿ, ಜಾಮದಾರ್ ಅವರಿಗಾಗಲಿ ಪಂಥಾಹ್ವಾನ ನೀಡಿಲ್ಲ. ಸ್ನೇಹ ಸಂವಾದ ನಡೆಸುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

‘ವಿವಾದ ಸಂಬಂಧ ಜಾಮದಾರರು ಚರ್ಚಿಸುವುದಾಗಿ ಹೇಳಿಕೆಕೊಟ್ಟು ಬಳಿಕ ಹಿಂದೆ ಸರಿದಿದ್ದರಿಂದ ‘ಧೈರ್ಯವಿದ್ದರೆ’ ಚರ್ಚೆಗೆ ಬರಲಿ ಎಂಬ ಪದ ಬಳಸಿದ್ದೇನೆ. ಚರ್ಚೆಯಿಂದ ಹಿಂದೆ ಸರಿಯುವುದು ಬೇಡ ಎಂಬುದು ನನ್ನ ಉದ್ದೇಶ. ಸಾಣೆಹಳ್ಳಿ ಶ್ರೀಗಳು ಲಿಂಗಾಯತ ಮತವು ಹಿಂದೂಧರ್ಮದಲ್ಲಿ ಸೇರಿಲ್ಲ ಎಂದು ಏಕೆ ಹಠ ಹಿಡಿದಿದ್ದಾರೆ ಎಂಬುದನ್ನು ತಿಳಿಸಬೇಕು’ ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ.

ಹಿಂದೂ ಎಂಬ ಶಬ್ದ ಧರ್ಮವಾಚಕವಲ್ಲ; ಅದು ದೇಶವಾಚಕ. ಆಚಾರ್ಯರು, ಬುದ್ಧ, ಬಸವಾದಿ ಶರಣರು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮಗಳೇ ಆಗಿವೆ. ದೇವರನ್ನು ಒಪ್ಪಲಿ, ಒಪ್ಪದಿರಲಿ, ಜಾತಿಬೇಧ ಒಪ್ಪಲಿ, ಒಪ್ಪದಿರಲಿ, ವೇದ ಒಪ್ಪಲಿ, ಒಪ್ಪದಿರಲಿ, ಹಿಂದೂ ದೇಶದಲ್ಲಿ ಹುಟ್ಟಿದ ಎಲ್ಲ ಧರ್ಮಗಳು ಹಿಂದೂ ಧರ್ಮ ಎಂದು ಪೇಜಾವರ ಶ್ರೀಗಳು ಪ್ರತಿಪಾದಿಸಿದ್ದಾರೆ.

ಜಾತಿ ವ್ಯವಸ್ಥೆ ಒಪ್ಪದ ಮತ ಪಂಥಗಳು ಹಿಂದೂ ಧರ್ಮದ ಭಾಗವಾಗಿವೆ. ಹಿಂದೂ ಧರ್ಮದಲ್ಲಾದ ಕ್ರಾಂತಿಯ ಫಲವಾಗಿ ಲಿಂಗಾಯತ ಧರ್ಮ ಹುಟ್ಟಿದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಕೂಡ ಹಿಂದೂ ಧರ್ಮದ ಭಾಗ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ವ್ಯತ್ಯಾಸಗಳನ್ನು ಮುಂದಿಟ್ಟು ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎನ್ನುವುದಾದರೆ, ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳೆಲ್ಲವೂ ಸ್ವತಂತ್ರ ಧರ್ಮಗಳೆನಿಸಿ ಅವ್ಯವಸ್ಥೆ ನಿರ್ಮಾಣವಾಗಬಹುದು. ಲಿಂಗಾಯತ ಧರ್ಮ ಅನೇಕ ಜಾತಿಗಳನ್ನು ಒಳಗೊಂಡಿರುವ ಸ್ವತಂತ್ರ ಧರ್ಮವೆಂದು ಒಪ್ಪಿಕೊಳ್ಳುತ್ತೇನೆ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

Post Comments (+)