ಶನಿವಾರ, ಡಿಸೆಂಬರ್ 14, 2019
21 °C
ಏಳು ಅಂತಸ್ತಿನ ಕಟ್ಟಡ ವಿರೋಧಿಸಿ ಮಾನವ ಸರಪಣಿ

ಕಬ್ಬನ್‌ ಉದ್ಯಾನ ಉಳಿಸಲು ಕೈ ಜೋಡಿಸಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಜನ ರಜಾದಿನದ ಸುಖ ನಿದ್ರೆಯಲ್ಲಿ ಜಾರಿದ್ದರೆ, ಅವರು ಎಚ್ಚೆತ್ತಿದ್ದರು. ಹೊತ್ತರಳುವ ಮುನ್ನವೇ ನಗರದ ವಿವಿಧ ಭಾಗಗಳಿಂದ ಕಬ್ಬನ್ ಉದ್ಯಾನಕ್ಕೆ ಬಂದಿದ್ದ ಅವರು ಪರಸ್ಪರ ಕೈ ಹಿಡಿದು ಮಾನವ ಸರಪಣಿ ರಚಿಸಿ ಒಗ್ಗಟ್ಟಿನ ಮಂತ್ರ ಜಪಿಸಿದರು. ಅವರ ಬಾಯಲ್ಲಿ ಒಂದೇ ಘೋಷವಾಕ್ಯ; ‘ಯಾವುದೇ ಕಾರಣಕ್ಕೂ ಕಬ್ಬನ್‌ ಉದ್ಯಾನಕ್ಕೆ ಕುತ್ತು ಉಂಟಾಗುವುದಕ್ಕೆ ಅವಕಾಶ ನೀಡುವುದಿಲ್ಲ’.

ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ನೇತೃತ್ವದಲ್ಲಿ ಭಾನುವಾರ ನಡೆದ ಈ ಪ್ರತಿಭಟನೆ ಕಬ್ಬನ್‌ ಉದ್ಯಾನದಲ್ಲಿ ಹೈಕೋರ್ಟ್‌ ಏಳು ಅಂತಸ್ತಿನ ಕಟ್ಟಡ ನಿರ್ಮಿಸುವ ಪ್ರಸ್ತಾಪದ ಬಗ್ಗೆ ಜನರಿಗಿರುವ ಆಕ್ರೋಶಕ್ಕೆ ಕನ್ನಡಿ ಹಿಡಿಯಿತು.

‘ನಗರವು ಉದ್ಯಾನನಗರಿ ಎಂಬ ಹಿರಿಮೆಯನ್ನು ಕಳೆದುಕೊಳ್ಳುತ್ತಿದೆ. ಉದ್ಯಾನಗಳಲ್ಲೂ ನಿರ್ಮಾಣ ಚಟುವಟಿಕೆಗೆ ಅವಕಾಶ ಕಲ್ಪಿಸಿದರೆ ನವದೆಹಲಿಯಂತೆ ಇಲ್ಲೂ ಆಮ್ಲಜನಕ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಪುಟಾಣಿಗಳಿಂದ ಹಿಡಿದು ಇಳಿವಯಸ್ಸಿನ ನಾಗರಿಕರವರೆಗೆ ವಿವಿಧ ವಯೋಮಾನದ ನೂರಾರು ಮಂದಿ ಹಸಿರು ಉಳಿಸುವ ಕೂಗಿಗೆ ದನಿಯಾದರು. ಕೆಡವಲು ಉದ್ದೇಶಿಸಿರುವ ಕೆಜಿಐಡಿ ಕಚೇರಿ ಕಟ್ಟಡ ಬಳಿ ಆರಂಭವಾದ ಮಾನವ ಸರಪಣಿ ನಂತರ ಬೆಳೆಯುತ್ತಾ ಸಾಗಿತು. ಮುಂಜಾನೆಯ ವಾಯುವಿಹಾರಕ್ಕೆ ಬಂದವರು, ಸೈಕ್ಲಿಂಗ್‌ ಪಟುಗಳು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ನಿವೃತ್ತ ಅಧಿಕಾರಿಗಳು ಮಾನವ ಸರಪಣಿಗೆ ಕೈ ಜೋಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌, ‘ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಉದ್ಯಾನಗಳಲ್ಲೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದೇ ಆದರೆ, ಮುಂದಿನ ಪೀಳಿಗೆಯವರಿಗೆ ಉದ್ಯಾನಗಳೇ ಉಳಿಯುವುದಿಲ್ಲ’ ಎಂದರು.

ಪ್ರಥಮ ಪಿ.ಯು. ವಿದ್ಯಾರ್ಥಿ ಧ್ರುವ್‌, ‘ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ನಡೆಸುವ ದಾಳಿಯಿಂದ ಮನುಕುಲಕ್ಕೆ ಅಪಾಯ. ನಾನು ಬಾಲ್ಯದ ಅನೇಕ ದಿನಗಳನ್ನು ಈ ಉದ್ಯಾನದಲ್ಲಿ ಕಳೆದಿದ್ದೇನೆ. ಇಲ್ಲಿ ಇನ್ನಷ್ಟು ನಿರ್ಮಾಣ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು’ ಎಂದರು.

ಸೇಂಟ್‌ ಮೇರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ, ‘ಪಾಠಗಳಲ್ಲಿ ನಮಗೆ ಪರಿಸರ ಸಂರಕ್ಷಣೆ ಬಗ್ಗೆ ಕಲಿಸಲಾಗುತ್ತದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಇಲ್ಲಿ ಹಸಿರಿನ ಹನನಕ್ಕೆ ಸಿದ್ಧತೆ ನಡೆಯುತ್ತಿದೆ. ಸರ್ಕಾರ ಈ ಉದ್ಯಾನವನ್ನು ಉಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

 

24ರಂದು ಮತ್ತೆ ಪ್ರತಿಭಟನೆ

ಕಬ್ಬನ್‌ ಉದ್ಯಾನದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುವ ಪ್ರಸ್ತಾಪವನ್ನು ಸಂಪೂರ್ಣ ಕೈಬಿಡುವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘ ಪಣ ತೊಟ್ಟಿದೆ. ‘ಇದೇ 24ರಂದು ಕಬ್ಬನ್ ಉದ್ಯಾನದ ಸೆಂಟ್ರಲ್‌ ಲೈಬ್ರರಿ ಬಳಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಕಬ್ಬನ್ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌. ಉಮೇಶ್‌ ತಿಳಿಸಿದರು. 

 

ಪ್ರತಿಭಟನೆಗೆ ನಮ್ಮ ಬೆಂಬಲವೇಕೆ?

ಮಾನವ ಸರಪಳಿಯಲ್ಲಿ ಕೈಜೋಡಿಸಿದ ಸಾರ್ವಜನಿಕರು ತಾವೇಕೆ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂಬ ಕುರಿತು ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

‘ಹಸಿರು ಉಳಿಸಬೇಕಾದ ತುರ್ತು ಇದೆ’

ಬೆಂಗಳೂರಿನಲ್ಲಿ ನಗರೀಕರಣದ ಭರಾಟೆಯ ನಡುವೆಯೂ ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್‌ನಂತಹ ಕಡೆ ಒಂದಿಷ್ಟು ದಟ್ಟ ಹಸಿರು ಉಳಿದುಕೊಂಡಿದೆ. ಅವುಗಳನ್ನಾದರೂ ಉಳಿಸಿಕೊಳ್ಳಬೇಕಾದ ಅನಿವಾರ್ಯ ಇದೆ

ರುದ್ರಪ್ರತಾಪ, ಆರ್‌.ಟಿ.ನಗರ ನಿವಾಸಿ

‘ವಾತಾವರಣ ಮತ್ತಷ್ಟು ಹದಗೆಡಲಿದೆ’

ಕೆಜಿಐಡಿ ಕಟ್ಟಡ ಕೆಡವಿ ಅಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸುವುದೆಂದರೆ ಮತ್ತೆ ಮಾಲಿನ್ಯಕ್ಕೆ ದಾರಿ ಮಾಡಿ ಕೊಟ್ಟಂತೆ. ವಾಹನ ದಟ್ಟಣೆಯಿಂದ ಈಗಾಗಲೇ ನಗರ ಕಲುಷಿತಗೊಂಡಿದೆ. ಮತ್ತಷ್ಟು ಮಾಲಿನ್ಯ ನಮಗೆ ಬೇಡ

ರವಿಶಂಕರ್‌ ರೆಡ್ಡಿ, ಆರ್‌.ಟಿ.ನಗರ

‘ನಮ್ಮೂರು ದೆಹಲಿಯಂತಾಗಲಿದೆ’

ನವದೆಹಲಿಯಲ್ಲಿ ತಲೆದೋರಿರುವ ವಾಯುಮಾಲಿನ್ಯದ ಆರ್ಭಟ ಕಂಡ ಬಳಿಕವಾದರೂ ನಮ್ಮಲ್ಲಿರುವ ಹಸಿರನ್ನು ಉಳಿಸಲು ಪಣ ತೋಡಬೇಕಿದೆ. ಇಲ್ಲಿನ ಹಸಿರನ್ನು ಉಳಿಸದಿದ್ದರೆ ಇಲ್ಲೂ ದೆಹಲಿಯ ಪರಿಸ್ಥಿತಿ ಬರಲಿದೆ

ರವಿ, ಆರ್‌ಎಂವಿ ಎರಡನೇ ಹಂತ

‘ಬೇಕಿದ್ದರೆ ಹೈಕೋರ್ಟ್‌ ಸ್ಥಳಾಂತರವಾಗಲಿ’

ಹೈಕೋರ್ಟ್‌ಗೆ ಹೆಚ್ಚಿನ ಜಾಗ ಬೇಕಿದ್ದರೆ, ಅದನ್ನೇ ನಗರದ ಹೊರವಲಯಕ್ಕೆ ಸ್ಥಳಾಂತರಿಸಲಿ. ನಮಗೆ ಉದ್ಯಾನ ಮುಖ್ಯ. ಹೈಕೋರ್ಟ್‌ ಹಾಗೂ ಕೆಜಿಐಡಿ ಪಾರಂಪರಿಕ ಕಟ್ಟಡಗಳನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಿ

ರವಿಶಂಕರ್‌, ಕುಮಾರಪಾರ್ಕ್‌

‘ದಟ್ಟಣೆ ಹೆಚ್ಚಿಸಲಿದೆ ಏಳಂತಸ್ತಿನ ಕಟ್ಟಡ’

ಉದ್ಯಾನದೊಳಗೆ ಏಳಂತಸ್ತಿನ ಕಟ್ಟಡಕ್ಕೆ ಅವಕಾಶ ಕಲ್ಪಿಸಿದರೆ ಈ ಪರಿಸರದಲ್ಲಿ ಮತ್ತಷ್ಟು ವಾಹನ ದಟ್ಟಣೆ ಉಂಟಾಗಲಿದೆ. ಮಾಲಿನ್ಯ ಹೆಚ್ಚಲಿದೆ.

ಲಕ್ಷ್ಮೀ, ಸಂಪಂಗಿರಾಮನಗರ

‘ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಬೇಕು’

ಕಬ್ಬನ್ ಉದ್ಯಾನವನ್ನು ಆಕ್ರಮಿಸಲು ಒಂದಿಲ್ಲ ಒಂದು ರೀತಿಯ ಸಂಚು ನಡೆಯುತ್ತಲೇ ಇದೆ. ಈ ಉದ್ಯಾನ ಸಾರ್ವಜನಿಕ ಸ್ವತ್ತು. ಇಂತಹ ಸಂಚುಗಳ ವಿರುದ್ಧ ಜನ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಬೇಕು

ಟಿ.ಎಚ್‌.ಕೆಂಪೇಗೌಡ, ನಿವೃತ್ತ ತೋಟಗಾರಿಕಾ ಅಧಿಕಾರಿ

‘ಏಟ್ರಿಯಾ ಹೋಟೆಲ್‌ವರೆಗೂ ವ್ಯಾಪಿಸಿತ್ತು’ 

ಕಬ್ಬನ್‌ ಉದ್ಯಾನ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಏಟ್ರಿಯಾ ಹೋಟೆಲ್‌ವರೆಗೂ ವ್ಯಾಪಿಸಿದ್ದ ಉದ್ಯಾನದ ಅರ್ಧದಷ್ಟು ಭಾಗವೂ ಉಳಿದುಕೊಂಡಿಲ್ಲ. ಮುಂದೊಂದು ದಿನ ಇದು ಇತಿಹಾಸದ ಪುಟ ಸೇರಬಹುದು

ಸೊಮಶೇಖರ್‌, ರಾಜಾಜಿನಗರ

‘ಒಂದೊಂದು ಮರದ ಜತೆಗೂ ನಂಟಿದೆ’

ನಾನು 50 ವರ್ಷಗಳಿಂದ ಈ ಉದ್ಯಾನಕ್ಕೆ ಬರುತ್ತಿದ್ದೇನೆ. ಇಲ್ಲಿನ ಒಂದೊಂದು ಮರಗಳ ಜೊತೆಗೂ ನಂಟು ಹೊಂದಿದ್ದೇನೆ. ಇಂತಹ ಜಾಗದಲ್ಲಿ 7 ಮಹಡಿ ಕಟ್ಟಡ ನಿರ್ಮಿಸುವಾಗ ಸುಮ್ಮನಿರಲಾದೀತೇ

ಅಲೆಕ್ಸಾಂಡರ್‌, ಮೆಗ್ರಾತ್‌ ರಸ್ತೆ

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು