ಭಾನುವಾರ, ಫೆಬ್ರವರಿ 23, 2020
19 °C
ಮುತ್ತೂರು ಹೋಬಳಿಯಲ್ಲಿ ಮಂಗನ ಶವ ಪತ್ತೆ

ತೀರ್ಥಹಳ್ಳಿಯ ಕುಂಟುವಳ್ಳಿಯಲ್ಲಿ ಮಂಗದ ಕಳೇಬರ ಪತ್ತೆ: ಜನರಲ್ಲಿ ಮಂಗನ ಕಾಯಿಲೆ ಭೀತಿ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ತಾಲ್ಲೂಕಿನ ಮುತ್ತೂರು ಹೋಬಳಿಯ ಮೇಳಿಗೆ ಸಮೀಪ ಕುಂಟುವಳ್ಳಿಯಲ್ಲಿ ಮಂಗನ ಶವವೊಂದು ಶುಕ್ರವಾರ ಪತ್ತೆಯಾಗಿದೆ.

ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿದರು. ಸತ್ತ ಮಂಗನ ಮರಣೋತ್ತರ ಪರೀಕ್ಷೆಯನ್ನು ಪಶು ಇಲಾಖೆಯ ವೈದ್ಯಕೀಯ ಸಿಬ್ಬಂದಿಯಿಂದ ನಡೆಸಲಾಗಿದ್ದು, ಅಂಗಾಂಗಗಳ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯದ ಮೂಲಕ ಹೆಚ್ಚಿನ ಪರೀಕ್ಷೆಗೆ ಪುಣೆಗೆ ಕಳುಹಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಅಶೋಕ್ ತಿಳಿಸಿದ್ದಾರೆ.

ಮಂಗನ ಮೃತ ದೇಹ ಪತ್ತೆಯಾದ ಜಾಗದಲ್ಲಿ ಉಣಗು (ಉಣ್ಣೆ) ಹರಡದಂತೆ 50 ಮೀಟರ್ ಸುತ್ತ ಔಷಧ ಸಿಂಪಡಿಸಲಾಗಿದೆ. ಈ ಭಾಗದ ಜನರಲ್ಲಿ ಜ್ವರ ಕಾಣಿಸಿಕೊಂಡಿದೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಂಗನ ಕಾಯಿಲೆ ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ.

ನಾಲ್ಕು ದಿನಗಳ ಹಿಂದೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಇದೇ ಭಾಗದ ಕಟ್ಟೆಹಕ್ಕಲಿನಲ್ಲಿ ಸಭೆ ನಡೆಸಿ ಮುಂದಿನ ನಾಲ್ಕೈದು ತಿಂಗಳು ಮಂಗನ ಕಾಯಿಲೆ ತಡೆಗಟ್ಟುವ ಕುರಿತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಸೂಚಿಸಿದ್ದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ತಾಲ್ಲೂಕಿನಾದ್ಯಂತ 50 ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ 40 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಶೇ 70ರಷ್ಟು ಪ್ರಗತಿಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ರೋಗ ಕಾಣಿಸಿಕೊಂಡ ಪ್ರದೇಶವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ ಜನರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ. ಆ ಭಾಗದಲ್ಲಿ ಎರಡು ಸುತ್ತಿನ ಲಸಿಕೆ ನೀಡಲಾಗಿದೆ. ಪ್ರತಿ ಹಳ್ಳಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ ರೋಗದ ಕುರಿತು ಜನಜಾಗೃತಿ ಮೂಡಿಸಲಾಗಿದೆ.

ಕಾಯಿಲೆ ಬಾಧಿಸಬಹುದಾದ ಗ್ರಾಮೀಣ ಭಾಗದಲ್ಲಿನ ಶಾಲೆಗಳಿಗೆ ತೆರಳಿ 6 ವರ್ಷ ಮೇಲಿನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯ ಕೈಗೊಳ್ಳಲಾಗಿದೆ.

***

ಮಂಗನ ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳ ಮಾದರಿಯನ್ನು ಪುಣೆಗೆ ಕಳುಹಿಸಿದ್ದು, ಮನುಷ್ಯ, ಮಂಗ, ಉಣಗಿನಲ್ಲಿ ಈವರೆಗೂ ವೈರಸ್ ಪತ್ತೆಯಾಗಿಲ್ಲ.

- ಡಾ. ಅಶೋಕ್, ತಾಲ್ಲೂಕು ವೈದ್ಯಾಧಿಕಾರಿ ತೀರ್ಥಹಳ್ಳಿ

***

ಕುಂಟುವಳ್ಳಿಯಲ್ಲಿ ಮಂಗ ಸತ್ತಿರುವುದರಿಂದ ಈ ಭಾಗದ ಜನರಿಗೆ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಅರೋಗ್ಯ ಇಲಾಖೆ ಕಾಯಿಲೆ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

- ಪೂರ್ಣೇಶ್ ಕೆಳಕೆರೆ, ಗ್ರಾಮಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)