ಮಂಗಳವಾರ, ಆಗಸ್ಟ್ 3, 2021
27 °C
ವರ್ಷದ ಹಿಂದೆ ದಾಖಲೆಗಳ ಪರಿಶೀಲನೆ

ತೋಟಗಾರಿಕೆ ಇಲಾಖೆ ನೇಮಕಾತಿ: ಆದೇಶಕ್ಕಾಗಿ ಕಾದಿರುವ ‘ತೋಟಗಾರರು’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಮೈಸೂರು: ಮೂಲ ದಾಖಲಾತಿಗಳ ಪರಿಶೀಲನೆ ಮುಗಿದು ವರ್ಷವಾದರೂ, ಅಂತಿಮ ಪಟ್ಟಿ ಪ್ರಕಟಗೊಂಡು ನೇಮಕಾತಿ ಆದೇಶ ಕೈ ಸೇರದಿರುವುದು ‘ತೋಟಗಾರ’ ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಮೂಡಿಸಿದೆ.

ಹಲವು ವರ್ಷಗಳ ಬಳಿಕ ತೋಟಗಾರಿಕೆ ಇಲಾಖೆಯು 200 ತೋಟಗಾರರ ನೇಮಕಾತಿಗಾಗಿ 2019ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಆ ಪೈಕಿ, 128 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾಗಿದ್ದವು. ‘ಡಿ’ ದರ್ಜೆಯ ಈ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ, ತೋಟಗಾರಿಕೆ ಇಲಾಖೆಯಿಂದ ನೀಡುವ 10 ತಿಂಗಳ ಅವಧಿಯ ‘ತೋಟಗಾರ’ ತರಬೇತಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿತ್ತು.

ಅದೇ ವರ್ಷ ಜುಲೈನಲ್ಲಿ, ಕಲ್ಯಾಣ ಕರ್ನಾಟಕದ 147 ಹಾಗೂ ಮೂಲ ವೃಂದದ ಪೈಕಿ 92 ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯೂ ನಡೆದಿತ್ತು. ಇದಾಗಿ ವರ್ಷ ಮುಗಿಯುತ್ತಾ ಬಂದರೂ, ನೇಮಕಾತಿ ಆದೇಶ ಹೊರ ಬೀಳದಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.

‘ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಹುದ್ದೆಯಿರುವ ಕಾರಣಕ್ಕಾಗಿಯೇ ವಿಳಂಬ ಮಾಡಲಾಗುತ್ತಿದೆ ಎಂಬ ಅನುಮಾನ ಈಚೆಗೆ ಕಾಡಲಾರಂಭಿಸಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೊಪ್ಪಳ ಜಿಲ್ಲೆಯ ಉದ್ಯೋಗಾಕಾಂಕ್ಷಿಯೊಬ್ಬರು.

‘ನಾನೊಬ್ಬ 33 ವರ್ಷದ ರೈತ. ಇನ್ನೂ ಮದುವೆಯಾಗಿಲ್ಲ. ಈ ಉದ್ಯೋಗವಾದರೂ ಸಿಕ್ಕರೆ ಮದುವೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದೇನೆ’ ಎಂದು ಮೈಸೂರು ಜಿಲ್ಲೆಯ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

‘ದಾಖಲಾತಿ ಪರಿಶೀಲನೆ ಬಳಿಕ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಹೇಳಿ,‌ ನಮ್ಮ ತಂದೆ ಉದ್ಯೋಗಸ್ಥರೊಬ್ಬರ ಜೊತೆ ಮದುವೆ ಮಾಡಿದರು. ಆದರೆ, ಇದುವರೆಗೂ ಪಟ್ಟಿಯೇ ಪ್ರಕಟವಾಗಿಲ್ಲ. ನನಗೆ ಆತಂಕವಾಗುತ್ತಿದೆ’ ಎಂದು ಬಳ್ಳಾರಿ ಜಿಲ್ಲೆಯ ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.

‘ಎಲೆಕೋಸು ಬೆಳೆದಿದ್ದ ನಾನು, ಕೋವಿಡ್‌ ಸಂಕಷ್ಟದಿಂದಾಗಿ ₹2 ಲಕ್ಷ ನಷ್ಟ ಅನುಭವಿಸಿದೆ. ಕೃಷಿಗಾಗಿ ತಂದೆ ಮಾಡಿದ್ದ ₹3 ಲಕ್ಷ ಸಾಲವಿದೆ. ಈ ನೌಕರಿ ಸಿಕ್ಕಿದರೆ ಬದುಕಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಉದ್ಯೋಗಾಕಾಂಕ್ಷಿ. ಅಂತಿಮ ಪಟ್ಟಿಯ ನಿರೀಕ್ಷೆಯಲ್ಲಿರುವ ಈ ಯಾರೊಬ್ಬರೂ ತಮ್ಮ ಹೆಸರನ್ನು ಬಹಿರಂಗಪಡಿಸಲು ಬಯಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು