ಹಿರಿಯ ಕವಿ, ಲೇಖಕ ಸುಮತೀಂದ್ರ ನಾಡಿಗ ನಿಧನ

7

ಹಿರಿಯ ಕವಿ, ಲೇಖಕ ಸುಮತೀಂದ್ರ ನಾಡಿಗ ನಿಧನ

Published:
Updated:

ಬೆಂಗಳೂರು: ಹಿರಿಯ ಕವಿ, ಲೇಖಕ ಸುಮತೀಂದ್ರ ನಾಡಿಗ (83) ಇಂದು ಬೆಳಿಗ್ಗೆ ನಿಧನರಾದರು.

ಹೃದಯ, ಕಿಡ್ನಿ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮೂರು ದಿನಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪತ್ನಿ ಮಾಲತಿ, ಪುತ್ರಿಯರಾದ ಸ್ವಪ್ನ ಮತ್ತು ರಶ್ಮಿ ಹಾಗೂ ಮಗ ಅಪೂರ್ವ ಅವರನ್ನು ಅಗಲಿದ್ದಾರೆ.

ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿರುವ ಡಾ. ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ 1935ರ ಮೇ 4ರಂದು ಜನಿಸಿದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಮತ್ತು ಅಮೆರಿಕದ ಫಿಲಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದರು. 1985ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ವಿಷಯದ ಮೇಲೆ ಪ್ರೌಢ ಪ್ರಬಂಧ ಮಂಡಿಸಿದ್ದರು. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ನಾಡಿಗರು ವಿಶೇಷವಾದ ಅಧ್ಯಯನ ನಡೆಸಿದ್ದಾರೆ.

ಅಧ್ಯಾಪನ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರಕ್ಕೆ ನಿರಂತರ ಕೊಡುಗೆ ನೀಡಿರುವ ಅವರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲಸಾಹಿತ್ಯ ಪುರಸ್ಕಾರ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ.ವಿ.ಸೀ. ಪುರಸ್ಕಾರ ಮುಂತಾದ ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ನಾಡಿಗರು ಭಾಜನರಾಗಿದ್ದಾರೆ. 1996-1999ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಅವರನ್ನು ಹರಿದ್ವಾರದ ‘ಗುರುಕುಲ ಕಾಂಗ್‌ಡಿ ವಿಶ್ವವಿದ್ಯಾನಿಲಯ’ವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಸಾಹಿತ್ಯ ಕೊಡುಗೆ

ನಾಡಿಗರು ಬರೆದಿರುವ ‘ದಾಂಪತ್ಯ ಗೀತ’ ಮತ್ತು  ‘ಪಂಚಭೂತಗಳು’ ಕವನ ಸಂಕಲನಗಳು ಬಹಳ ಪ್ರಸಿದ್ಧಿ ಪಡೆದಿವೆ. ಇಂಗ್ಲಿಷ್, ಸಂಸ್ಕೃತ, ಬಂಗಾಳಿ, ಮಲಯಾಳ ಸೇರಿದಂತೆ ಹಲವು ಸ್ಥಳೀಯ ಭಾಷೆಗಳಿಗೆ ಅನುವಾದಗೊಂಡಿದೆ.

ಇತರ ಕವನ ಸಂಕಲನಗಳು: ಜಡ ಮತ್ತು ಚೇತನ, ನಟರಾಜ ಕಂಡ ಕಾಮನಬಿಲ್ಲು, ಕುಹೂ ಗೀತ, ತಮಾಷೆ ಪದ್ಯಗಳು, ದಾಂಪತ್ಯ ಗೀತ, ಭಾವಲೋಕ, ಉದ್ಘಾಟನೆ, ಕಪ್ಪು ದೇವತೆ ಇತ್ಯಾದಿ

ಗಿಳಿ ಮತ್ತು ದುಂಬಿ, ಕಾರ್ಕೋಟಕ, ಸ್ಥಿತಪ್ರಜ್ಞ, ಆಯ್ದ ಕಥೆಗಳು ಎಂಬ ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ.

ವಿಮರ್ಶಾ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿರುವ ನಾಡಿಗರು ಮೌನದಾಚೆಯ ಮಾತು, ನಾಲ್ಕನೆಯ ಸಾಹಿತ್ಯ ಚರಿತ್ರೆ, ಮತ್ತೊಂದು ಸಾಹಿತ್ಯ ಚರಿತ್ರೆ, ಅಡಿಗರು ಮತ್ತು ನವ್ಯಕಾವ್ಯ ಮತ್ತಿತರ ವಿಮರ್ಶಾ ಕೃತಿಗಳನ್ನೂ ಪ್ರಕಟಿಸಿದ್ದರು.
‌ಮಕ್ಕಳ ಸಾಹಿತ್ಯ, ಅನುವಾದ ಕ್ಷೇತ್ರದಲ್ಲೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.  ‘ಡಕ್ಕಣಕ್ಕ ಡಕ್ಕಣ’, ‘ಧ್ರುವ ಮತ್ತು ಪ್ರಹ್ಲಾದ’, ‘ದಿಡಿಲಕ್ ದಿಡಿಲಕ್’ ಇತ್ಯಾದಿಗಳು ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆಗಳು. ಚಾರ್ಲ್ಸ್ ಡಿಕನ್ಸ್‌ನ ‘ಹಾರ್ಡ್ ಟೈಮ್ಸ್’ ಸೇರಿದಂತೆ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷ್‌ನಲ್ಲೂ ಕೃತಿಗಳನ್ನು ರಚಿಸಿದ್ದಾರೆ.

ಇದನ್ನೂ ಓದಿ: ಡಿಡಿಲಕ್ ಡಿಡಿಲಕ್ ಅಜ್ಜ!

ಪುಟ್ಟೇನಹಳ್ಳಿಯ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ

ನಾಡಿಗರ ಪಾರ್ಥಿವ ಶರೀರವನ್ನು ‌ಪುಟ್ಟೇನಹಳ್ಳಿಯ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಾರಕ್ಕಿ ಮಯಾ ಸಭಾಂಗಣ ಸಮೀಪ ಅಂತಿಮ ವಿಧಿವಿಧಾನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !