ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಜಾಗರಣೆಗೆ ಪೊಲೀಸರ ಅಡ್ಡಿ

ವಿಚಾರಣೆಗೆ ಆದೇಶಿಸಿದ ಪೊಲೀಸ್‌ ಕಮಿಷನರ್‌
Last Updated 5 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ನಡೆಯುತ್ತಿದ್ದ ಶಿವರಾತ್ರಿ ಜಾಗರಣೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ತಾಕೀತು ಮಾಡಿ ಪೊಲೀಸರು ಅಡ್ಡಿಪಡಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ವಿಚಾರಣೆಗೆ ಆದೇಶಿಸಿದ್ದಾರೆ.

ಜಾಗರಣೆ ನಿಮಿತ್ತ ದೇವಸ್ಥಾನದಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ರಾತ್ರಿ 10.30ರ ಬಳಿಕ ಮೂರು ಬಾರಿ ಅಲ್ಲಿಗೆ ಭೇಟಿ ನೀಡಿದ ಕಾವೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ್‌, ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದ್ದಾರೆ. ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಐಜಿಪಿಯವರಿಂದ ಆದೇಶ ಬಂದಿದೆ ಎಂದು ಸಂಘಟಕರಿಗೆ ತಿಳಿಸಿದ್ದಾರೆ.

ತಡರಾತ್ರಿಯವರೆಗೂ ಪೊಲೀಸರು ಮತ್ತು ಸಂಘಟಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್‌ ಶೆಟ್ಟಿ ಸ್ಥಳಕ್ಕೆ ಬಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಅವರನ್ನು ಸಂಪರ್ಕಿಸಿ ಕಾರ್ಯಕ್ರಮ ಮುಂದುವರಿಸಲು ಅವಕಾಶ ಕಲ್ಪಿಸಿದ್ದಾರೆ. ನಂತರ ಧ್ವನಿವರ್ಧಕ ಬಂದ್‌ ಮಾಡಿ ಕಾರ್ಯಕ್ರಮ ಮುಂದುವರಿಸಿದ್ದಾರೆ.

ಪೊಲೀಸರ ಕ್ರಮಕ್ಕೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಕೂಡ ವಿರೋಧ ವ್ಯಕ್ತಪಡಿಸಿವೆ. ಜಾಗರಣೆಗೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಈ ಎಲ್ಲರೂ ಆಗ್ರಹಿಸಿದ್ದಾರೆ.

ವಿಚಾರಣೆಗೆ ಆದೇಶ: ‘ನಗರದಲ್ಲಿ 70 ಕಡೆ ಜಾಗರಣೆ ಕಾರ್ಯಕ್ರಮ ನಡೆದಿದೆ. ಕಾವೂರಿನಲ್ಲಿ ಮಾತ್ರ ಇಂತಹ ಘಟನೆ ನಡೆದಿದೆ. ಕಾವೂರು ಠಾಣೆ ಇನ್‌ಸ್ಪೆಕ್ಟರ್‌ ವಿರುದ್ಧ ದೂರುಗಳು ಬಂದಿವೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ಅವರು ಸ್ಥಳಕ್ಕೆ ಹೋಗಿದ್ದಾರೆ. ಈ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

‘ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಸುವಾಗ ಶಬ್ದದ ಮಿತಿ ಅನುಸರಿಸುತ್ತಿರಲಿಲ್ಲ. ತೊಂದರೆ ಆಗಿದ್ದರಿಂದ ನಾನು ಸೂಚಿಸಿದ್ದು ನಿಜ. ಹಿಂದೆಯೂ ಹಲವು ಬಾರಿ ಇನ್‌ಸ್ಪೆಕ್ಟರ್‌ಗೆ ತಿಳಿಸಿದ್ದೆ. ಸೋಮವಾರ ಶಿವರಾತ್ರಿ ಇತ್ತು. ಅವರು ಪ್ರಕರಣವನ್ನು ಸರಿಯಾಗಿ ನಿರ್ವಹಿಸಿಲ್ಲ’ ಎಂದು ಕಾವೂರು ದೇವಸ್ಥಾನಕ್ಕೆ ಸಮೀಪದಲ್ಲೇ ಅಧಿಕೃತ ನಿವಾಸ ಹೊಂದಿರುವ ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT