ಬುಧವಾರ, ಏಪ್ರಿಲ್ 8, 2020
19 °C
ಬಜೆಟ್‌ನಲ್ಲಿ ಮಠ – ಮಂದಿರಗಳಿಗೆ ಆದ್ಯತೆ

ಶರಣರಿಗೆ ಪ್ರಭುತ್ವ ಅಸ್ಥಿರಗೊಳಿಸುವ ಉದ್ದೇಶವಿರಲಿಲ್ಲ: ಬಿ.ಎಸ್‌. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಗಣಮೇಳ ನಡೆಸಿದಾಗ ಅದು ಪ್ರಭುತ್ವಕ್ಕೆ ವಿರುದ್ಧವಾದುದು ಎಂದು ಬಿಂಬಿಸಲಾಗಿತ್ತು. ಆದರೆ, ಸಮಾಜಕ್ಕೆ ವೈಚಾರಿಕತೆಯ ರಸದೂಟ ಬಡಿಸುವ ಉದ್ದೇಶ ಶರಣರದಾಗಿತ್ತೇ ವಿನಾ, ಪ್ರಭುತ್ವವನ್ನು ಅಸ್ಥಿರಗೊಳಿಸುವುದಾಗಿರಲಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. 

ನಗರದ ನಂದಿ ಗ್ರೌಂಡ್ಸ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವಣ್ಣನವರು 1.96 ಲಕ್ಷ ಶರಣರನ್ನು ಸೇರಿಸಿದ್ದು ದಾಖಲೆಯಾಗಿತ್ತು. ಅದೇ ಉದ್ದೇಶದೊಂದಿಗೆ ಚಿತ್ರದುರ್ಗದ ಮುರುಘಾಶರಣರು ಆಯೋಜಿಸಿರುವ ಈ ಮೇಳವೂ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಸಮಾವೇಶದ ಫಲಿತಾಂಶ ನಾಡಿನಲ್ಲಿ ಸಾಮರಸ್ಯ ಬದುಕಿಗೆ ಮತ್ತಷ್ಟು ಶಕ್ತಿ ನೀಡುವ ವಿಶ್ವಾಸವಿದೆ’ ಎಂದು ಅವರು ಹೇಳಿದರು. 

ಕೃಷಿಗೆ ಆದ್ಯತೆ: ‘ಈ ಬಾರಿಯ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುವುದು’ ಎಂದು ಅವರು ಹೇಳಿದರು. 

‘ರೈತರು ಸ್ವಾಭಿಮಾನ ಮತ್ತು ನೆಮ್ಮದಿಯಿಂದ ಬದುಕು ನಡೆಸಬೇಕಾಗಿದೆ. ಇದಕ್ಕಾಗಿ ನೀರಾವರಿಗೆ ಆದ್ಯತೆ ನೀಡಲಾಗುವುದು‌ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಲಾಗುವುದು’ ಎಂದರು.

‘ಮಠ-ಮಂದಿರಗಳಿಗೂ ಬಜೆಟ್ ನಲ್ಲಿ ಆದ್ಯತೆ ನೀಡಲಾಗುವುದು’ ಎಂದೂ ಅವರು ತಿಳಿಸಿದರು. 

₹500 ಕೋಟಿ: ‘ಈ ಬಾರಿಯ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹500 ಕೋಟಿ ಮೀಸಲಿಡಲಾಗುವುದು. ಈ ಪೈಕಿ ₹100 ಕೋಟಿಯನ್ನು ಇದೇ ವರ್ಷದಲ್ಲಿ ಖರ್ಚು ಮಾಡಲಾಗುವುದು’ ಎಂದರು. 

'ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ಬಸವ ಪುತ್ಥಳಿ ಈಗಾಗಲೇ ಸಾಕಷ್ಟು ಹಣ ನೀಡಲಾಗಿದ್ದು, ಇನ್ನಷ್ಟು ಅನುದಾನ ನೀಡಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು. 

ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಅರುಣ್‌ಕುಮಾರ್‌ ಸೋಮಣ್ಣ ಅವರು, ಚಿತ್ರದುರ್ಗದ ಮುರುಘಾಶರಣರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು. ಕೆಲವು ಸಭಿಕರಿಂದಲೂ ಇದೇ ಒತ್ತಾಯ ಕೇಳಿ ಬಂತು. 

ಸಚಿವ ವಿ.ಸೋಮಣ್ಣ ಮಾತಿಗೆ ಸಭಿಕರ ವಿರೋಧ
ಬೆಂಗಳೂರು: ‘ರಾಜಕಾರಣವನ್ನು ಇಲ್ಲಿ ಬೆರೆಸುವುದು ಬೇಡ’ ಎನ್ನುತ್ತಲೇ ಸಿದ್ದರಾಮಯ್ಯ ಅವರನ್ನು ಕುಟುಕಲು ಯತ್ನಿಸಿದ ವಸತಿ ಸಚಿವ ವಿ. ಸೋಮಣ್ಣ ಅವರ ಮಾತಿಗೆ ನೆರೆದಿದ್ದ ಭಕ್ತರು ಒಕ್ಕೊರಲಿನಿಂದ ಗಟ್ಟಿದನಿಯಲ್ಲಿ ವಿರೋಧ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯನವರು ತಮ್ಮದೇ ಚಿಂತನೆಯ ಆಡಳಿತದ ದಿನಗಳಲ್ಲಿ ಎಲ್ಲೋ ಒಂದು ಕಡೆ ನಾಡಿನ ಜನರ ಅಂತರಂಗದ ಭಾವನೆ ಕೆದಕಿದರು. ಅದರಿಂದ ಯಡಿಯೂರಪ್ಪ ಅಧಿಕಾರಕ್ಕೆ ಬಂದರು’ ಎಂದು ಸೋಮಣ್ಣ, ಪರೋಕ್ಷವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಕೆದಕಲು ಮುಂದಾದರು.

ಈ ಮಾತಿಗೆ ಜನರಿಂದ ತಕ್ಷಣವೇ, ಗಟ್ಟಿ ದನಿಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಶಿವಮೂರ್ತಿ ಶರಣರು, ‘ಏ ಸೋಮಣ್ಣ’ ಎಂದು ಎಚ್ಚರಿಸಿದರು. ಇದನ್ನೆಲ್ಲಾ ಕೇಳಿಯೂ ಕೇಳಿಸಿಕೊಳ್ಳದವರಂತೆ ಸೋಮಣ್ಣ ತಮ್ಮ ಮಾತು ಮುಗಿಸಿದರು. 

ಕರ್ನಾಟಕ ಕಲ್ಯಾಣವಾಗಲಿ: ಸಮಾವೇಶದ ರೂವಾರಿ ಮತ್ತು ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರೂ ಆದ ಬಿ.ವೈ.ವಿಜಯೇಂದ್ರ, ‘ರಾಜ್ಯವು ಅನುಭವ ಮಂಟಪ ಆಶಯದ ಕಲ್ಯಾಣ ಕರ್ನಾಟಕವಾಗಬೇಕು. ಕಲ್ಯಾಣ ರಾಜ್ಯದ ಮರುಸ್ಥಾಪನೆಯ ದಿಸೆಯಲ್ಲಿ ಸಮಸಮಾಜದ ಪ್ರತಿಪಾದನೆಗಾಗಿ ಈ ಗಣಮೇಳ ನಡೆಯುತ್ತಿದೆ’
ಎಂದರು.

‘ಜಗತ್ತು ಇಂದು ಅಶಾಂತಿಯಲ್ಲಿ ತಾಂಡವವಾಡುತ್ತಿದೆ. ಇಂತಹ ಹೊತ್ತಿನಲ್ಲಿ ನಮ್ಮ ಮುಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ಶಾಂತಿ ಮಂತ್ರ ನಮ್ಮ ಧ್ಯೇಯವಾಕ್ಯವಾಗಬೇಕು’ ಎಂದರು.

ನಿರ್ಣಯಗಳು
*ಸಮಾಜಕ್ಕೆ ಸೇವೆ ಸಲ್ಲಿಸಿದ ಸ್ವಾಮೀಜಿಗಳ ಸ್ಮಾರಕಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು

*ಪಠ್ಯ ಪುಸ್ತಕಗಳಲ್ಲಿ ಶಿವಶರಣರ ಬಗ್ಗೆ ಅಧ್ಯಾಯಗಳನ್ನು ಇಡುವುದರ ಜೊತೆಗೆ, ಶರಣ ಸಾಹಿತ್ಯದ ಮೂಲಕ ನೈತಿಕ ಪಾಠ ಬೋಧಿಸಬೇಕು

*ಕಲಬುರ್ಗಿ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು, ಧಾರವಾಡ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಬಸವಣ್ಣನವರ ಹೆಸರನ್ನು ಇಡಬೇಕು

*ಕೇಂದ್ರ- ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ ಕನ್ನಡಿಗರಿಗೆ ಆದ್ಯತೆ ನೀಡಬೇಕು

*ಬಸವಕಲ್ಯಾಣದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.

*ಮುರುಘಾಮಠದಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣನವರ ಪುತ್ಥಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು