ಗುರುವಾರ , ಆಗಸ್ಟ್ 22, 2019
22 °C

ಡಿವೈಎಸ್ಪಿ ಶ್ರೀಧರ ದೊಡ್ಡಿಗೆ ರಾಷ್ಟ್ರಪತಿ ಪದಕ

Published:
Updated:

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಸಿಪಿಐ ಆಗಿದ್ದ ಶ್ರೀಧರ ದೊಡ್ಡಿ ಅವರಿಗೆ ಬೆಂಗಳೂರಿನ ರಾಜ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ರಾಜ್ಯಪಾಲ ವಜುಭಾಯ್ ವಾಲಾ ಪ್ರದಾನ ಮಾಡಿದ್ದಾರೆ.

‘36 ವರ್ಷ ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕೆಲಸ ಮಾಡಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಇದ್ದರು ಎಂದು,’ ಈಗ  ರಾಯಚೂರು  ವಿಭಾಗದ ಗುಪ್ತಚರ ದಳದ ಡಿವೈಎಸ್ಪಿ ಆಗಿ ಪದೋನ್ನತಿ ಹೊಂದಿರುವ ಶ್ರೀಧರ್ ದೊಡ್ಡಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬಳ್ಳಾರಿ, ಕಲಬುರಗಿ, ಶಿವಮೊಗ್ಗ, ರಾಯಚೂರು, ಮತ್ತು ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಈ ಮುಂಚೆ 2010 ರಲ್ಲಿ ಮುಖ್ಯಮಂತ್ರಿ ಗಳ ಚಿನ್ನದ ಪದಕ ದೊರಕಿತ್ತು. ರಾಜ್ಯದಲ್ಲಿ ಒಟ್ಟು 66 ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ,’ ಎಂದರು. 

ಆದೋನಿಯವರಾದ ದೊಡ್ಡಿಯವರು 1982ರಲ್ಲಿ ಸಿರಿಗೇರಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸಕ್ಕೆ ಸೇರಿದ್ದರು.  2000 ರಲ್ಲಿ ಕಲಬುರಗಿ ಪಿಎಸ್ಐ, 2008ರಲ್ಲಿ ಸಿಪಿಐ ನಂತರ  ಡಿವೈಎಸ್ಪಿ ಆಗಿ ಪದೋನ್ನತಿ ಪಡೆದರು.

ಶುಕ್ರವಾರದಿಂದ ರಾಯಚೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ ಎಂದು ತಿಳಿಸಿದರು.

Post Comments (+)