ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಪ್ರತಿಷ್ಠೆಗೆ ಧಕ್ಕೆ ಉಂಟಾಗಿಲ್ಲ: ಸತೀಶ ಜಾರಕಿಹೊಳಿ

7

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಪ್ರತಿಷ್ಠೆಗೆ ಧಕ್ಕೆ ಉಂಟಾಗಿಲ್ಲ: ಸತೀಶ ಜಾರಕಿಹೊಳಿ

Published:
Updated:

ಬೆಳಗಾವಿ: ‘ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ ಚುನಾವಣೆಯ ಫಲಿತಾಂಶದಿಂದ ನನ್ನ ಪ್ರತಿಷ್ಠೆಗೆ ಧಕ್ಕೆ ಉಂಟಾಗಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಿಎಲ್‌ಡಿ ಬ್ಯಾಂಕಿನಲ್ಲಿ ಮೊದಲಿನಿಂದಲೂ ಅವಿರೋಧ ಆಯ್ಕೆಯಾಗುತ್ತಿತ್ತು. ಅದೇ ರೀತಿ ಈ ಸಲವೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಲಿ ಎನ್ನುವುದಷ್ಟೇ ನಮ್ಮ ಬಯಕೆಯಾಗಿತ್ತು. ಈಗ ಆಯ್ಕೆಯಾಗಿರುವವರ ಬಗ್ಗೆ ನಮ್ಮ ಸಹಮತವಿದೆ’ ಎಂದರು.

‘ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಸಮಸ್ಯೆಯಿತ್ತು. ಕಳೆದ ವಾರದಿಂದಲೂ ಇದನ್ನು ಪಕ್ಷದ ವರಿಷ್ಠರಿಗೆ ಹೇಳುತ್ತಿದ್ದೇವು. ಅದನ್ನು ಈಗ ಬಗೆಹರಿಸಿದ್ದಾರೆ’ ಎಂದು ಹೇಳಿದರು.

ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ: ‘ಚುನಾವಣೆ ಸಣ್ಣದು ಆದರೆ, ರಾಜಕೀಯ ತಿರುವು ತೆಗೆದುಕೊಂಡಿದ್ದರಿಂದ ಈ ಮಟ್ಟಕ್ಕೆ ಬೆಳೆದು ನಿಂತಿತು. ಚುನಾವಣೆಯು ಅವಿರೋಧವಾಗಿ ನಡೆಯಬೇಕಾಗಿತ್ತು. ಇದಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ನಮ್ಮ ಜೊತೆ ಅಲ್ಲದಿದ್ದರೂ 14 ಜನ ನಿರ್ದೇಶಕರ ಜೊತೆಗಾದರೂ ಮಾತನಾಡಬೇಕಾಗಿತ್ತು. ಆದರೆ, ಮಾತನಾಡದೆ ಗುಂಪುಗಾರಿಕೆ ಮಾಡಿದರು. ಹೀಗಾಗಿ ಈ ಪ್ರಕರಣ ಇಷ್ಟೊಂದು ಬೆಳೆಯಲು ಕಾರಣವಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರಕ್ಕೆ ಧಕ್ಕೆ ಇಲ್ಲ: ‘ಪಕ್ಷದ ಮುಖಂಡರಲ್ಲಿ ಸಂವಹನ ಕೊರತೆಯಿಂದ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಅವುಗಳನ್ನು ಬಗೆಹರಿಸಿದ್ದೇವೆ. ಸರ್ಕಾರಕ್ಕಾಗಲೀ, ಪಕ್ಷಕ್ಕಾಗಲೀ ಯಾವುದೇ ಧಕ್ಕೆ ಇಲ್ಲ. ಮುಂಬರುವ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

‘ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವವರು ಪಕ್ಷದ ಒಮ್ಮತದ ಅಭ್ಯರ್ಥಿಗಳಾಗಿದ್ದಾರೆ. ಯಾವ ಬಣದವರೂ ಅಲ್ಲ’ ಎಂದರು.

ಕಾಣಿಸಿಕೊಳ್ಳದ ರಮೇಶ ಜಾರಕಿಹೊಳಿ: ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ತೀವ್ರ ಟೀಕೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಈಶ್ವರ ಖಂಡ್ರೆ, ‘ರಮೇಶ ಅವರು ಕೋಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದಾರೆ. ಇಲ್ಲಿನ ಬೆಳವಣಿಗೆಗಳ ಕುರಿತು ಮಾತನಾಡಿದ್ದೇನೆ. ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದರು.

ಸುಖಾಂತ್ಯವಾಗಿದೆ:‘ಅವಿರೋಧವಾಗಿ ಆಯ್ಕೆಯಾದವರು ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯ ಪ್ರಕರಣ ಸುಖಾಂತ್ಯವಾಗಿದೆ. ಯಾವುದೇ ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !