ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರವರೆಗೂ ಪ್ರಧಾನಿ ನರೇಂದ್ರ ಮೋದಿಗೆ ಕಂಟಕ: ದ್ವಾರಕಾನಾಥ ಭವಿಷ್ಯ

Last Updated 29 ಡಿಸೆಂಬರ್ 2019, 13:10 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸದ್ಯ ಪ್ರಧಾನಿ ಮೋದಿ ಅವರಿಗೆ ಕೆಲವು ಸಂಕಷ್ಟಗಳು ಎದುರಾಗಿವೆ. ಅವರು ದೇವಲ ಗಾಣಗಾಪುರ ಅಥವಾ ಗುಜರಾತ್‌ನಲ್ಲಿರುವ ದತ್ತಾತ್ರೇಯ ಪೀಠಕ್ಕೆ ಭೇಟಿ ನೀಡಿ ದರ್ಶನ ಪಡೆದರೆ ಈ ಸಂಕಷ್ಟಗಳು ನಿವಾರಣೆ ಆಗಲಿವೆ’ ಎಂದು ಜ್ಯೋತಿಷಿ ದ್ವಾರಕಾನಾಥ ಹೇಳಿದರು.

‘ಸದ್ಯ ದೇಶದಲ್ಲಿ ಸಿಎಎ, ಎನ್‌ಆರ್‌ಸಿ ಸೇರಿದಂತೆ ಹಲವು ಸಂಕಷ್ಟಗಳು ಮೋದಿ ಸರ್ಕಾರಕ್ಕೆ ಎದುರಾಗಿವೆ. ಅವುಗಳಿಂದ ಮುಕ್ತರಾಗಲು ದತ್ತಾತ್ರೇಯ ದರ್ಶನ ಮಾಡುವುದೇ ದಾರಿ’ ಎಂದು ಅವರು ನಗರದಲ್ಲಿ ಭಾನುವಾರ ಭವಿಷ್ಯ ನುಡಿದರು.

ದ್ವಾರಕಾನಾಥ
ದ್ವಾರಕಾನಾಥ

‘2020ರಿಂದ 2023ನೇ ಸಾಲಿನವರೆಗೆ ಪ್ರಧಾನಿಗೆ ಇನ್ನಷ್ಟು ಗಂಡಾಂತರಗಳು ಎದುರಾಗುತ್ತವೆ. ಅದೆಲ್ಲವನ್ನೂ ಜಯಿಸಿ ಅವರು ಮುಂದೆ ಹೋದರೂ; 2024ರ ನಂತರ ಅವರ ಭವಿಷ್ಯವಾಣಿಯಲ್ಲಿ ಸಕ್ರಿಯ ರಾಜಕಾರಣವಿಲ್ಲ’ ಎಂದೂ ಹೇಳಿದರು.

‘ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ನಾಲ್ಕು ತಿಂಗಳ ಸಂಕಷ್ಟ ಇದೆ. ಅದಾದ ಬಳಿಕ ಈ ಸರ್ಕಾರ ಪೂರ್ಣಾವಧಿ ಮುಗಿಸಲಿದೆ. ಈ ಹಿಂದೆಯೇ ನನ್ನನ್ನು ಭೇಟಿಯಾದ ವೇಳೆ ಅವರಿಗೆ ದತ್ತಾತ್ರೇಯ ದರ್ಶನ ಮಾಡುವಂತೆ ಅವರಿಗೆ ಹೇಳಿದ್ದೆ. ಆ ಪ್ರಕಾರ ಅವರು ನಡೆದುಕೊಂಡಿದ್ದಾರೆ. ಹಾಗಾಗಿ, ಅವರ ಸಂಕಷ್ಟಗಳು ದೂರಾಗಲಿವೆ’ ಎಂದು ತಿಳಿಸಿದರು.

‘2018ರ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೂ ಮುಂಚೆಯೇ ಸ್ವತಃ ನಾನೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೆ. ಶೃಂಗೇರಿ ಶಾರದಾಂಬೆ ಪೀಠಕ್ಕೆ ಭೇಟಿ ನೀಡಿ, ನಿಮ್ಮ ರಾಜಕೀಯ ಅಡೆತಡೆಗಳು ಮಾಯವಾಗುತ್ತವೆ. ನಿಮಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದೂ ಹೇಳಿದ್ದೆ. ಆದರೆ, ಅವರು ಇಂಥ ಭವಿಷ್ಯ ನಂಬುವುದಿಲ್ಲ ಎಂದು ತಳ್ಳಿಹಾಕಿದರು’ ಎಂದೂ ದ್ವಾರಕಾನಾಥ ತಿಳಿಸಿದರು.

‘ಇಂದಿರಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್‌ ನಾಯಕರು ಶೃಂಗೇರಿ ಶಾರದೆ ಭಕ್ತರಾಗಿದ್ದರು. ದೇವಿ ಅನುಗ್ರಹದಿಂದ ಇಂದಿರಾ ಪ್ರಧಾನಿ ಆದರು. ನಂತರ ಅವರ ಪುತ್ರ ರಾಜೀವ್‌ ಗಾಂಧಿ ಅವರೂ ಮಠಕ್ಕೆ ಬರುತ್ತಿದ್ದರು. ಅವರೂ ಪ್ರಧಾನಿ ಆದರು. ರಾಜೀವ್‌ ಕಾಲವಾದ ನಂತರ ಗಾಂಧಿ ಕುಟುಂಬದವರು ಮಠದೊಂದಿಗೆ ಸಂಪರ್ಕ ಕಳೆದುಕೊಂಡರು. ಇದೇ ಕಾರಣಕ್ಕೆ ಅವರಿಗೆ ಅವನತಿ ಉಂಟಾಯಿತು. ಇದನ್ನು ತಿಳಿಸಿ ಹೇಳಿದರೂ ಕೇಳಲಿಲ್ಲ. ಅವರ ಅವನತಿ ಇನ್ನೂ ಹೀಗೇ ಮುಂದುವರಿಯುತ್ತದೆ’ ಎಂದೂ ಭವಿಷ್ಯ ನುಡಿದರು.

‘ಎಚ್‌.ಡಿ. ದೇವೇಗೌಡ ಹಾಗೂ ಅವರ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದೆ, ಅವರಿಬ್ಬರೂ ಸೋತರು. ಹಾಗಾಗಿ ನಾನು ಸುಳ್ಳು ನುಡಿಯುತ್ತೇನೆ ಎಂದು ಕೆಲವರು ದೂರಿದರು. ಈ ಇಬ್ಬರಿಗೂ ಗೆಲುವಿನ ಯೋಗ ಇರಲಿಲ್ಲ. ಸ್ವಂತ ಕ್ಷೇತ್ರ ಬಿಟ್ಟು ಹೋಗಬೇಡಿ ಎಂದು ದೇವೇಗೌಡರಿಗೆ ಹೇಳಿದ್ದೆ. ಆದರೆ, ಯಾರಿಗೂ ನೇರವಾಗಿ ಸೋಲುತ್ತೀರಿ ಎಂದು ಹೇಳಿ ನೋವು ಮಾಡಲಾರೆ. ಹಾಗಾಗಿ, ಜಯವಾಗಲಿ ಎಂದಷ್ಟೇ ಹೇಳಿದ್ದೆ’ ಎಂದು ಸ್ಪಷ್ಟಪಡಿಸಿದರು.

‘ಜೀವನದಲ್ಲಿ ಸಂಕಷ್ಟ ಎದುರಿಸುತ್ತಿರುವವರು ಪ್ರಪಂಚದ ಎಲ್ಲ ಕಡೆ ಅಲೆಯಬೇಕಿಲ್ಲ. ಯಾರ ಮಾತನ್ನೂ ಕೇಳಬೇಕಿಲ್ಲ. ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಸನ್ನಿಧಿಗೆ ಭೇಟಿ ನೀಡಿದರೆ ಸಾಕು. ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT