ಸೋಮವಾರ, ಫೆಬ್ರವರಿ 24, 2020
19 °C
ಪರಿಶಿಷ್ಟ ನೌಕರರ ಹಿತರಕ್ಷಣೆ– ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ

ಬಡ್ತಿ ಮೀಸಲಾತಿ: ಕಾನೂನು ತಜ್ಞರ ಜತೆ ಚರ್ಚಿಸಲಿದ್ದಾರೆ ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸಮಾನಾಂತರ ಹುದ್ದೆ ಕಲ್ಪಿಸಿ, ನ್ಯಾಯ ಕೊಡಿಸುವ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಅಡ್ವೊಕೋಟ್‌ ಜನರಲ್‌ ಹಾಗೂ ಕಾನೂನು ತಜ್ಞರ ತಂಡದ ಜತೆಗೆ ಶೀಘ್ರ ಸಭೆ ನಡೆಸಲಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಬಡ್ತಿ ಮೀಸಲಾತಿ ವಿಷಯದ ಬಗ್ಗೆ ಅನೌಪಚಾರಿಕ ಚರ್ಚೆ ನಡೆಯಿತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಹಿತ ಕಾಯಬೇಕು ಎಂದು ಹಲವು ಸಚಿವರು ಒತ್ತಾಯಿಸಿದರು.

ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇದೇ 12ರಂದು ನಡೆದಿತ್ತು. ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಅನುವು ಮಾಡಿಕೊಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ, ಕೋರ್ಟ್‌ ಇದನ್ನು ಮಾನ್ಯ ಮಾಡಿರಲಿಲ್ಲ. ಹಾಗಾಗಿ, ನೌಕರರ ಹಿತ ಕಾಯಲು ಯಾವ ಮಾರ್ಗೋಪಾಯ ಅನುಸರಿಸಬಹುದು ಎಂಬ ಬಗ್ಗೆ ಸಚಿವರು  ಸಮಾಲೋಚನೆ ನಡೆಸಿದರು.

‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆ ಹುದ್ದೆಗಳಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆಯನ್ನು ವಿಸ್ತರಿಸುವ ಮಸೂದೆಗೆ ವಿಧಾನಮಂಡಲದ ಉಭಯ ಸದನಗಳು ಈಗಾಗಲೇ ಒಪ್ಪಿಗೆ ನೀಡಿವೆ. ಈ ಕಾಯ್ದೆಗೆ ರಾಷ್ಟ್ರಪತಿ ಅಂಕಿತವನ್ನೂ ಹಾಕಿದ್ದಾರೆ. ಆದರೂ, ಈ ಕಾಯ್ದೆ ಜಾರಿಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಅಂತಿಮ ಆದೇಶಕ್ಕೆ ಒಳಪಟ್ಟು ಬಡ್ತಿ ನೀಡುತ್ತೇವೆ ಎಂದರೂ ಕೋರ್ಟ್‌ ಒಪ್ಪುತ್ತಿಲ್ಲ. ಹಾಗಾಗಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ರಾಜ್ಯದ ವಕೀಲರ ಜತೆಗೆ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರನ್ನು ನೇಮಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು