ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಲು ಒತ್ತಡ ಹಾಕಿ: ಪ್ರಕಾಶ್‌ ರೈ

Last Updated 4 ಮೇ 2018, 8:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸ್ಥಳೀಯ ಸಮಸ್ಯೆಗಳು, ಪರಿಹಾರ ಮಾರ್ಗಗಳು, ಊರಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಜಸ್ಟ್‌ ಆಸ್ಕಿಂಗ್ ಆಂದೋಲನದ ಮುಖಂಡ ಪ್ರಕಾಶ್‌ ರೈ ಹೇಳಿದರು.

ತಾಲ್ಲೂಕಿನ ಕಳಾಸಪುರದ ಮನೆಯೊಂದರಲ್ಲಿ ಗುರುವಾರ ರೈತರೊಂದಿಗೆ ಮಾತನಾಡಿದರು. ‘ರಾಜಕಾರಣಿಗಳು ಊರಿಗೆ ಬಂದು ಸಮಸ್ಯೆ ಪರಿಹಾರಿಸುತ್ತಾರೆ ಎಂಬುದು ಸುಳ್ಳು. ಆಶ್ವಾಸನೆ ಬೇಡ, ಕೆಲಸ ಮಾಡಿ ತೋರಿಸಿ ಎಂದು ಅವರಿಗೆ ಷರತ್ತು ಹಾಕಬೇಕು. ನಮ್ಮ ಊರಿಗೆ, ಈ ಭಾಗದ ಜನರಿಗೆ ಏನು ಬೇಕು ಎಂಬುದರ ಬಗ್ಗೆ ಮೊದಲು ನಮಗೆ ಸ್ಪಷ್ಟತೆ ಇರಬೇಕು. ಬದುಕುವ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನೀರು ಬೇಕು ಎಂಬುದರಿಂದ ಎಲ್ಲ ಸಮಸ್ಯೆಗಳು ನೀಗುವುದಿಲ್ಲ. ಹಳೆ ಸಮಸ್ಯೆಗಳನ್ನೇ ಮತ್ತೆಮತ್ತೆ ಕೇಳಬಾರದು. ಹೊಸ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ಪರ್ಯಾಯ ಮಾರ್ಗಗಳ ಬಗ್ಗೆಯೂ ಚಿಂತಿಸಬೇಕು. ರೈತರ ಸಮಸ್ಯೆಗಳು ಒಂದೊಂದು ಭಾಗದಲ್ಲಿ ಒಂದು ರೀತಿ ಇರುತ್ತವೆ. ಮಳೆ ಆಶ್ರಿತ ಪ್ರದೇಶದಲ್ಲಿ ಒಂದು ರೀತಿ ಸಮಸ್ಯೆ ಇದ್ದರೆ, ನೀರಾವರಿ ಪ್ರದೇಶದಲ್ಲಿ ಮತ್ತೊಂದು ರೀತಿ ಇರುತ್ತದೆ. ಕಾಡಂಚಿನ ರೈತರ ಸಮಸ್ಯೆ ಇನ್ನೊಂದು ಬಗೆ ಇರುತ್ತದೆ. ಪ್ರದೇಶಕ್ಕೆ ತಕ್ಕಂತೆ ಅವುಗಳನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು’ ಎಂದು ಹೇಳಿದರು.

‘ರಾಜಕಾರಣಿಗಳು ಒಡೆದು ಆಳುವ ತಂತ್ರ ಅನುಸರಿಸುತ್ತಿದ್ದಾರೆ. ಎಲ್ಲರೂ ಒಗ್ಗೂಡಿದರೆ ಅವರ ತಂತ್ರ ಫಲಿಸುವುದಿಲ್ಲ. ನಂಬಿಕೆ ದ್ರೋಹ ಹೆಚ್ಚಾಗಿದೆ. ಪ್ರತಿ ಸಲವೂ ನಂಬಿಸಿ ವಂಚಿಸುತ್ತಿದ್ದಾರೆ. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘಟಿತರಾಗಬೇಕು. ಕಾಮಗಾರಿಗಳಿಗೆ ಹಣದ ಕೊರತೆ ಇದ್ದರೆ ಸಾಲ ಮಾಡಿ ಎಂದು ಸರ್ಕಾರಕ್ಕೆ ಹೇಳಬೇಕು’ ಎಂದರು.

‘ಇನ್ನೊಂದು ತಿಂಗಳು ಬಿಟ್ಟು ಮತ್ತೆ ಬರುತ್ತೇನೆ. ಅಷ್ಟೊರಳಗೆ ಈ ಭಾಗದವರೆಲ್ಲರೂ ಒಗ್ಗೂಡಿ ಸಮಸ್ಯೆಗಳು, ಪರಿಹಾರ ಮಾರ್ಗಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಿರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT