ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿಗೆ ಸಂದರ್ಶನ ರದ್ದು

* 300 ಹುದ್ದೆಗಳ ಭರ್ತಿಗೆ ಅಧಿಸೂಚನೆ * ಜನಸ್ನೇಹಿ ಅಧಿಕಾರಿಗಳ ನೇಮಕಕ್ಕೆ ಅಡ್ಡಿ
Last Updated 9 ನವೆಂಬರ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳ ಭರ್ತಿಗೆ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಸಂದರ್ಶನ ಪ್ರಕ್ರಿಯೆಯನ್ನು ಈ ವರ್ಷದಿಂದ ರದ್ದುಪಡಿಸಲಾಗಿದೆ.

‘ಈ ಕ್ರಮವು ಅವೈಜ್ಞಾನಿಕವಾಗಿದ್ದು, ಜನಸ್ನೇಹಿ ಅಧಿಕಾರಿಗಳ ನೇಮಕ ಮಾಡುವ ಪ್ರಕ್ರಿಯೆಗೆ ಅಡ್ಡಿಯಾಗಲಿದೆ’ ಎಂದು ಅಭಿ‍‍ಪ್ರಾಯ ನಿವೃತ್ತ ಅಧಿಕಾರಿಗಳ ವಲಯದಿಂದ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 300 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ಇತ್ತೀಚೆಗಷ್ಟೇ ಅಧಿಸೂಚನೆ ಹೊರಡಿಸಲಾಗಿದೆ. ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಗ್ರೂಪ್ ‘ಸಿ’ ದರ್ಜೆಯ ಹುದ್ದೆಗಳ ಪಟ್ಟಿಯಲ್ಲಿರುವ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭವಾದಾಗಿನಿಂದ ಸಂದರ್ಶನ ನಡೆಸಿಕೊಂಡು ಬರಲಾಗುತ್ತಿತ್ತು. ‘ಗ್ರೂಪ್ ‘ಸಿ’ ಹಾಗೂ ‘ಡಿ’ ದರ್ಜೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸಂದರ್ಶನ ನಡೆಸಬಾರದು’ ಎಂಬುದಾಗಿ ಜುಲೈನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದನ್ನು ಆಧರಿಸಿ ಪೊಲೀಸ್ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.

‘300 ಪಿಎಸ್‌ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನ. 6 ಕೊನೆಯ ದಿನವಾಗಿತ್ತು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ,ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಪಾರದರ್ಶಕವಾಗಿ ಹುದ್ದೆಗೆ ಆಯ್ಕೆ ಮಾಡಲಾಗುವುದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ನೇಮಕಾತಿ ವಿಭಾಗದ ಎಡಿಜಿಪಿ ಟಿ.ಸುನೀಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕು. ಪ್ರಥಮ ಪತ್ರಿಕೆಗೆ (ಭಾಷಾಂತರ, ಪ್ರಬಂಧ, ಸಾರಾಂಶ) 50 ಅಂಕ ಹಾಗೂ ಎರಡನೇ ಪತ್ರಿಕೆಗೆ (ಸಾಮಾನ್ಯ ಜ್ಞಾನ) 150 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಅದಾದ ನಂತರವೇ ಅಂತಿಮ ಪಟ್ಟಿ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ಇದುವರೆಗೂ 10 ಅಂಕಗಳಿಗೆ ಸಂದರ್ಶನ ನಡೆಸಲಾಗುತ್ತಿತ್ತು. ಇಲಾಖೆಯ ಉನ್ನತ ಅಧಿಕಾರಿಗಳು, ಮಾನಸಿಕತಜ್ಞರು ಹಾಗೂ ವಿಷಯ ಪರಿಣಿತರು ಅಭ್ಯರ್ಥಿಗಳ ಮೌಖಿಕ ಸಂದರ್ಶನ ನಡೆಸುತ್ತಿದ್ದರು. ಈ ಬಾರಿ ಅಂಥ ಸಂದರ್ಶನ ಇರುವುದಿಲ್ಲ. ಇದು 300 ಹುದ್ದೆಗಳ ನೇಮಕಾತಿಗೆ ಮಾತ್ರ ಅನ್ವಯವಾಗಲಿದೆ. ಇದಕ್ಕೂ ಮುನ್ನ ಹೊರಡಿಸಲಾಗಿರುವ 200 ಹುದ್ದೆಗಳ ನೇಮಕಾತಿಯಲ್ಲಿ ಯಥಾಪ್ರಕಾರ ಸಂದರ್ಶನ ಇರಲಿದೆ’ ಎಂದು ಅವರು ಮಾಹಿತಿ ನೀಡಿದರು.

ಜನಸ್ನೇಹಿ ಅಧಿಕಾರಿಗಳ ಕೊರತೆ: ‘ಸಂದರ್ಶನ ರದ್ದುಪಡಿಸಿರುವುದು ತಪ್ಪು. ಈ ನಡೆಯಿಂದ ಇಲಾಖೆಯಲ್ಲಿ ಜನಸ್ನೇಹಿ ಅಧಿಕಾರಿಗಳ ಕೊರತೆ ಉಂಟಾಗಲಿದೆ’ ಎಂದು ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ್‌ ಆತಂಕ ವ್ಯಕ್ತಪಡಿಸಿದರು.

‘ಪಿಎಸ್ಐ ಆದವರು ದಿನದ 24 ಗಂಟೆ ಜನರ ಜೊತೆಗೆ ಇರಬೇಕು. ಅಂಥ ಹುದ್ದೆಗೆ ಬರುವ ಅಭ್ಯರ್ಥಿಯ ವ್ಯಕ್ತಿತ್ವ ಹಾಗೂ ಆತನ ಮಾನಸಿಕ ಸಾಮರ್ಥ್ಯವನ್ನು ಮೌಖಿಕ ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ. ಆತ ಜನರ ಜೊತೆ ಹೇಗೆ ನಡೆದುಕೊಳ್ಳುತ್ತಾನೆ ? ಕ್ಲಿಷ್ಟ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ ? ಆತ ಇಲಾಖೆಗೆ ಸೇರಲು ಅರ್ಹನೇ ? ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರ ಪಡೆಯಲಾಗುತ್ತದೆ’ ಎಂದರು.

‘ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಡಿವೈಎಸ್ಪಿ ಹುದ್ದೆಗಳ ನೇಮಕಾತಿಗೆ ಸಂದರ್ಶನ ಇದೆ. ಪಿಎಸ್‌ಐಗೆ ಸಂದರ್ಶನ ರದ್ದುಪಡಿಸಿರುವುದು ಅವೈಜ್ಞಾನಿಕ ಕ್ರಮ. ಪಿಎಸ್‌ಐ ಆದವರೇ ಬಡ್ತಿ ಪಡೆದು ಇನ್‌ಸ್ಪೆಕ್ಟರ್, ಎಸಿಪಿ ಹಾಗೂ ಡಿವೈಎಸ್ಪಿ ಆಗುತ್ತಾರೆಂಬುದನ್ನು ಇಲಾಖೆ ಮರೆತಂತೆ ಕಾಣುತ್ತದೆ’ ಎಂದು ಗುರುಪ್ರಸಾದ್ ಹೇಳಿದರು.

‘ಪ್ರಭಾವಿಗಳ ಒತ್ತಡ ತಪ್ಪಲಿದೆ’
‘ಸಂದರ್ಶನಕ್ಕೆ ಆಯ್ಕೆ ಆಗುವ ಕೆಲ ಅಭ್ಯರ್ಥಿಗಳಿಗೆ 10 ಅಂಕಗಳ ಪೈಕಿ ಹೆಚ್ಚಿನ ಅಂಕ ನೀಡುವಂತೆ ಪ್ರಭಾವಿಗಳ ಒತ್ತಡವೂ ಹೆಚ್ಚಿರುತ್ತದೆ. ಇಂಥ ಸ್ಥಿತಿಯಲ್ಲಿ ಸಂದರ್ಶನವನ್ನು ರದ್ದುಪಡಿಸಿರುವುದು ಒಳ್ಳೆಯದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸಂದರ್ಶನದಲ್ಲಿ 10ಕ್ಕೆ 10 ಅಂಕ ಪಡೆದವರು ಹುದ್ದೆಗೆ ಆಯ್ಕೆಯಾಗುತ್ತಾರೆಂಬುದು ಸುಳ್ಳು. ದೈಹಿಕ, ಲಿಖಿತ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯುವುದರಿಂದ ಉತ್ತಮ ಅಭ್ಯರ್ಥಿಯೇ ಇಲಾಖೆಗೆ ಬರುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಿಎಸ್ಐ ನೇಮಕಾತಿ ಹುದ್ದೆಗಳ ಹಂಚಿಕೆ
205:ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಸಿವಿಲ್)
63:ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಸಿವಿಲ್)
32:ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಸಿವಿಲ್) ಸೇವಾನಿರತರು

**
ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದನ್ವಯ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಡಿ ನಡೆಸುತ್ತಿದ್ದ ಸಂದರ್ಶನ ರದ್ದುಪಡಿಸಲಾಗಿದೆ.
-ಟಿ. ಸುನೀಲ್‌ಕುಮಾರ್, ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT