ಬುಧವಾರ, ಆಗಸ್ಟ್ 21, 2019
25 °C
ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ

‘ಕೇಂದ್ರದಿಂದ ಭಾಷೆಗಳನ್ನು ನಿರ್ಜೀವಗೊಳಿಸುವ ಯತ್ನ’

Published:
Updated:
Prajavani

ಉಡುಪಿ: ಸಂವಿಧಾನದ 8ನೇ ಪರಿಚ್ಛೇದಕ್ಕೆ ಭಾಷೆ ಸೇರಿದರೆ, ಅದರಿಂದ ಸಿಗಬಹುದಾದ ಪ್ರಯೋಜನಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸುತ್ತಿದೆ. ಒಂದು ಭಾಷೆಯನ್ನು ಗಟ್ಟಿಗೊಳಿಸುವ ಬದಲು ನಿರ್ಜೀವಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಭಾನುವಾರ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್‌.ಆರ್‌.ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ತುಳು ಸೇರಿದಂತೆ ಐದು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಡ ಹಾಕಲಾಯಿತು. ಆದರೆ, ತುಳು ಹೊರತುಪಡಿಸಿ ಉಳಿದ ನಾಲ್ಕು ಭಾಷೆಗಳನ್ನು ಮಾತ್ರ ಪರಿಚ್ಛೇದಕ್ಕೆ ಸೇರಿಸಲಾಯಿತು ಎಂದರು.

ತುಳು ಭಾಷೆಯನ್ನು ಪರಿಚ್ಛೇದಕ್ಕೆ ಸೇರಿಸುವ ವಿಷಯ ಲೋಕಸಭೆಯಲ್ಲಿ ಚರ್ಚೆಗೆ ಬಂದಾಗ ಅದರ ಪರವಾಗಿ ಮಾತನಾಡುವವರು ಇರಲಿಲ್ಲ. ಮಂಗಳೂರು ಸಂಸದರು ಬಿಟ್ಟರೆ ಉಳಿದವರಿಗೆ ತುಳುವಿನ ಬಗ್ಗೆ ಏನೂ ಗೊತ್ತಿರಲಿಲ್ಲ. ನನ್ನ ರಾಜ್ಯದ ಭಾಷೆ ಎಂದು ಮಾತನಾಡಲು ಸಂಸದರಿಗೆ ಚೈತನ್ಯ ಇರಲಿಲ್ಲ ಎಂದರು.

ದೇಶದ ನೂತನ ಶಿಕ್ಷಣ ನೀತಿಯ ಕರಡಿನಲ್ಲಿ ಸ್ಥಳೀಯ ಭಾಷೆಗಳ ಕುರಿತು ಒಂದು ಶಬ್ಧವೂ ಇಲ್ಲ. ಕೇವಲ ಹಿಂದಿ, ಸಂಸ್ಕೃತ, ಇಂಗ್ಲೀಷ್‌ಗೆ ಮಾತ್ರ ಆದ್ಯತೆ ನೀಡಲಾಗಿದೆ. 484 ಪುಟಗಳ ಶಿಕ್ಷಣ ನೀತಿಯ ಸಾರಾಂಶ ಸ್ಥಳೀಯ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡದಿದ್ದರೆ ಜನರಿಗೆ ತಿಳಿಯುವುದಾದರೂ ಹೇಗೆ ಎಂದು ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದರು.

ಸಣ್ಣ ಸಣ್ಣ ಭಾಷೆಗಳನ್ನು ಬಿಡಿ, ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೂ ಶಿಕ್ಷಣ ನೀತಿಯಲ್ಲಿ ಬೆಲೆ ಇಲ್ಲದಿರುವುದು ಖಂಡನೀಯ. ಶಿಕ್ಷಣ ನೀತಿಯ ಕರಡು ಮಾತೃಭಾಷೆಗಳಲ್ಲಿ ಓದಲು ಸಿಗಬೇಕು. ಕರಡು ತಿದ್ದುಪಡಿಗೆ ಮೂರು ತಿಂಗಳು ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Post Comments (+)