ಭಾನುವಾರ, ಡಿಸೆಂಬರ್ 15, 2019
26 °C
ಅಪಘಾತ ನಿಯಂತ್ರಣ ಹೆಸರಿನಲ್ಲಿ ದುಂದುವೆಚ್ಚಕ್ಕೆ ಆಕ್ಷೇಪ

ಕಾಮಗಾರಿ ವೆಚ್ಚ 7ಪಟ್ಟು ಹೆಚ್ಚು!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ರಸ್ತೆ ಮತ್ತು ಆಸ್ತಿ ನಿರ್ವಹಣಾ ಕೇಂದ್ರವು ಅಪಘಾತ ನಿಯಂತ್ರಣದ ಹೆಸರಿನಲ್ಲಿ ₹ 1,000 ಕೋಟಿಯ ಕಾಮಗಾರಿಗೆ ಪ್ರಸ್ತಾವ ಸಿದ್ಧಪಡಿಸಿದೆ. ಅಪಘಾತಗಳು ಹೆಚ್ಚು ಸಂಭವಿಸುವಲ್ಲಿ (ಬ್ಲ್ಯಾಕ್‌ ಸ್ಪಾಟ್‌) ರಸ್ತೆಯ ದೋಷ ಸರಿಪಡಿಸುವ ಬದಲು ಡಾಂಬರೀಕರಣವನ್ನಷ್ಟೇ ಮಾಡುವ ಈ ಯೋಜನೆಗೆ ಆಕ್ಷೇಪ ವ್ಯಕ್ತವಾಗಿದೆ.

ಬ್ಲ್ಯಾಕ್‌ ಸ್ಪಾಟ್‌ ಸರಿಪಡಿಸಲು ಈ ಕೇಂದ್ರಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2016ರಲ್ಲಿ ₹ 150 ಕೋಟಿ ನೀಡಿತ್ತು. ಎರಡು ವರ್ಷಗಳಲ್ಲಿ 310 ಬ್ಲ್ಯಾಕ್‌ಸ್ಪಾಟ್‌ಗಳನ್ನು ಕೇಂದ್ರ ಸರಿಪಡಿಸಿತ್ತು.

‘ಇದೀಗ ಅಪಘಾತ ವಲಯಗಳ ನಿಯಂತ್ರಣದ ಹೆಸರಿನಲ್ಲಿ ಕಿಲೊಮೀಟರ್‌ಗಟ್ಟಲೆ ಡಾಂಬರೀಕರಣ ಮಾಡಲು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಜತೆಗೆ, ಈ ವರ್ಷ ಅನುದಾನ ಪ್ರಮಾಣ ಏಕಾಏಕಿ ಹೆಚ್ಚಿಸಿರುವುದು ಸಂಶಯಕ್ಕೆ ಎಡೆಮಾಡಿದೆ. ರಾಮನಗರ ಹಾಗೂ ಹಾಸನ ಜಿಲ್ಲೆಗಳಿಗೇ ₹ 200 ಕೋಟಿ ಮೀಸಲಿಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಪ್ರತಿ ಗಂಟೆಗೆ ಸರಾಸರಿ 55 ಅಪಘಾತಗಳು ಸಂಭವಿಸುತ್ತಿದ್ದು, 17 ಮಂದಿ ಸಾವಿಗೀಡಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ಗಂಟೆಗೆ ಒಬ್ಬ ವ್ಯಕ್ತಿಯ ಸಾವು ಸಂಭವಿಸುತ್ತಿದೆ. ಅತಿ ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳ ‍ಪೈಕಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಅಪಘಾತಗಳಿಗೆ ನಿಯಂತ್ರಣ ಹಾಕಲು ನಿವೃತ್ತ ನ್ಯಾಯಮೂರ್ತಿ ಕೆ.ಎಸ್‌.ರಾಧಾಕೃಷ್ಣನ್‌ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿತ್ತು. ಬ್ಲ್ಯಾಕ್‌ಸ್ಪಾಟ್‌ಗಳ ನಿರ್ಮೂಲನೆಗೆ ಪ್ರತಿವರ್ಷ ಯೋಜನೆ ಹಾಕಿಕೊಳ್ಳಬೇಕು ಎಂದು ಸಮಿತಿಯು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು.

ಬಳಿಕ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಲೋಕೋಪಯೋಗಿ ರಸ್ತೆಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸುವುದು, ಅಪಘಾತ ಸಂಭವಿಸುವಲ್ಲಿ ತಿರುವುಗಳಿದ್ದರೆ, ನೇರಗೊಳಿಸುವುದು, ಮಾರ್ಗಸೂಚಿ ಫಲಕಗಳನ್ನು ಅಳವಡಿಸುವುದೂ ಸೇರಿದಂತೆ ರಸ್ತೆಗಳ ದೋಷ ಸರಿಪಡಿಸುವ ಹೊಣೆಯನ್ನು ರಸ್ತೆ ಹಾಗೂ ಆಸ್ತಿ ನಿರ್ವಹಣಾ ಕೇಂದ್ರಕ್ಕೆ ವಹಿಸಲಾಗಿತ್ತು.

ಕಳಂಕಿತ ಅಧಿಕಾರಿಗೆ ಕೇಂದ್ರದ ಹೊಣೆ: ‘ಬಿಡಿಎ ಎಂಜಿನಿಯರಿಂಗ್‌ ಸದಸ್ಯರಾಗಿದ್ದ ಬಿ.ಎಲ್‌. ರವೀಂದ್ರಬಾಬು ಅವರನ್ನು ಈ ಕೇಂದ್ರಕ್ಕೆ ಮುಖ್ಯ ಎಂಜಿನಿಯರ್‌ ಆಗಿ ಇತ್ತೀಚೆಗೆ ನಿಯೋಜಿಸಲಾಗಿದೆ. ಅವರ ನೇತೃತ್ವದಲ್ಲೇ ಡಾಂಬರೀಕರಣದ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಸಮಸ್ಯೆಯ ಮೂಲ ಅರಿಯದೆ ಡಾಂಬರು ಹಾಕಿದರೆ ಅಪಘಾತ ಕಡಿಮೆಯಾಗುತ್ತದೆಯೇ’ಎಂದು ಲೋಕೋಪಯೋಗಿ ಇಲಾಖೆಯ ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

‘ರವೀಂದ್ರಬಾಬು ಅವರ ಮೇಲೆ ಹಲವು ಆರೋಪಗಳಿವೆ. ಆದರೂ, ಸಮ್ಮಿಶ್ರ ಸರ್ಕಾರ ಅವರಿಗೆ ಆಯಕಟ್ಟಿನ ಹುದ್ದೆ ನೀಡಿದೆ. ರಾಮನಗರದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣಕ್ಕೆ ಭೂಸ್ವಾಧೀನ ಮಾಡುವ ಮುನ್ನವೇ ಗುತ್ತಿಗೆದಾರರಿಗೆ ₹ 26 ಕೋಟಿ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರಬಾಬು ಹಾಗೂ ಮತ್ತೊಬ್ಬ ಎಂಜಿನಿಯರ್‌ ಅಮಾನತುಗೊಂಡಿದ್ದರು.

2014ರಲ್ಲಿ ರವೀಂದ್ರಬಾಬು ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಆಗ ಅವರಿಗೆ ಸೇರಿದ್ದ ₹9.04 ಕೋಟಿ ಆಸ್ತಿ ಪತ್ತೆಯಾಗಿತ್ತು. ಮೈತ್ರಿ ಸರ್ಕಾರ ಬಂದ ಮೇಲೆ ಈ ಪ್ರಕರಣದಲ್ಲಿ ಬಿ–ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇಂಥ ಹಿನ್ನೆಲೆ ಇರುವ ಅಧಿಕಾರಿಯ ನೇತೃತ್ವದಲ್ಲೇ ಈ ಪ್ರಸ್ತಾವ ಸಿದ್ಧಪಡಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.

‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಕೂಡ ಆಗಿರುವ ರವೀಂದ್ರಬಾಬು ಅವರಿಗೆ ಬೆಂಗಳೂರಿನಲ್ಲಿ ನಿರ್ಮಿಸಲಾಗುವ ₹ 25 ಸಾವಿರ ಕೋಟಿ ವೆಚ್ಚದ ಎಲಿವೇಟೆಡ್‌ ಕಾಮಗಾರಿಯ ಉಸ್ತುವಾರಿಯನ್ನೂ ವಹಿಸಲಾಗಿದೆ. ಯೋಜನಾ ವೆಚ್ಚ ₹17 ಸಾವಿರ ಕೋಟಿಯಿಂದ ₹25 ಸಾವಿರ ಕೋಟಿಗೆ ಹೆಚ್ಚುವಲ್ಲಿ ಅವರ ಪಾತ್ರವೂ ಇದೆ’ ಎಂದೂ ಮೂಲಗಳು ತಿಳಿಸಿವೆ.

‘ರಸ್ತೆ ಅಭಿವೃದ್ಧಿ ಕಾಮಗಾರಿಗಳ ಯೋಜನಾ ವೆಚ್ಚದಲ್ಲಿ ಶೇ 2ರಿಂದ ಶೇ 3ರಷ್ಟು ಮೊತ್ತವನ್ನು ರಸ್ತೆ ಸುರಕ್ಷತೆಗೆ ಮೀಸಲಿಡುವುದು ಕಡ್ಡಾಯ. ಕೇಂದ್ರ ಭೂಸಾರಿಗೆ ಸಚಿವಾಲಯದ ವ್ಯಾಖ್ಯಾನದ ‍ಪ್ರಕಾರ ರಾಜ್ಯದಲ್ಲಿ ಈ ವರ್ಷ 565 ಬ್ಲ್ಯಾಕ್‌ಸ್ಪಾಟ್‌ಗಳನ್ನಷ್ಟೇ ಗುರುತಿಸಲಾಗಿದೆ. ಇವುಗಳನ್ನು ಸರಿಪಡಿಸಲು ಸಾವಿರ ಕೋಟಿ ಬೇಕೇ’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು