ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಗಿಂಗ್ ಆರೋಪ: ಅಲ್ಲಗಳೆದ ಕುಲಪತಿ

Last Updated 5 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್‌ ಪಿಡುಗು ಹೆಚ್ಚಾಗಿದ್ದು, ತಮ್ಮ ಮಕ್ಕಳು ತೀವ್ರವಾಗಿ ನೊಂದಿದ್ದಾರೆ ಎಂದು ಪ್ರಥಮ ವರ್ಷದ ವಿದ್ಯಾರ್ಥಿಗಳ ಪಾಲಕರು ಆರೋಪಿಸಿದ್ದಾರೆ. ಆದರೆ ಇದನ್ನು ಕುಲಪತಿ ಡಾ. ಎಂ.ಬಿ.ಚೆಟ್ಟಿ ನಿರಾಕರಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ದಾಖಲಾದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ವಿನಾಕಾರಣ ಹಾಸ್ಟೆಲ್‌ನಲ್ಲಿ ತಡರಾತ್ರಿಯವರೆಗೂ ನಿಲ್ಲುವ ಶಿಕ್ಷೆಯನ್ನು 2ನೇ ವರ್ಷದ ವಿದ್ಯಾರ್ಥಿಗಳು ನೀಡುತ್ತಿದ್ದಾರೆ. ಓದಲು ಬಿಡದೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪಾಲಕರು ದೂರಿದ್ದಾರೆ.

‘ಮೊದಲ ವರ್ಷದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿದ್ದ ಕ್ಯಾಂಟೀನ್‌ ಅನ್ನು 2 ಹಾಗೂ 3ನೇ ವರ್ಷದ ವಿದ್ಯಾರ್ಥಿಗಳಿಗೆ ಮೀಸಲಾದ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಊಟಕ್ಕೆ ಹೋಗುವ ಈ ವಿದ್ಯಾರ್ಥಿಗಳು ಅಲ್ಲಿ ಸುಲಭವಾಗಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್‌ಗೆ ಒಳಗಾಗುತ್ತಿದ್ದಾರೆ. ಮಕ್ಕಳು ನಮ್ಮ ಬಳಿ ಗೋಳು ಹೇಳಿಕೊಂಡು ಅಳುತ್ತಿದ್ದಾರೆ. ಆದರೆ ಇದನ್ನು ಅಧಿಕಾರಗಳ ಗಮನಕ್ಕೆ ತರಲು ಬಿಡುತ್ತಿಲ್ಲ. ಹಿರಿಯ ವಿದ್ಯಾರ್ಥಿಗಳು ಒಂದೆಡೆ ಮಕ್ಕಳಿಗೆ ಓದಲು ಬಿಡುತ್ತಿಲ್ಲ. ಮತ್ತೊಂದೆಡೆ ಊಟವನ್ನೂ ಸರಿಯಾಗಿ ಮಾಡುತ್ತಿಲ್ಲ’ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದರು.

ಈ ಆರೋಪವನ್ನು ನಿರಾಕರಿಸಿರುವ ಕುಲಪತಿ ಡಾ.ಎಂ.ಬಿ.ಚೆಟ್ಟಿ, ‘ರ‍್ಯಾಗಿಂಗ್ ಆರೋಪಗಳಿದ್ದರೆ ನಮಗೆ ನೇರವಾಗಿ ಹೇಳಬಹುದು ಎಂಬ ವಿಷಯವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮೊದಲೇ ಹೇಳಲಾಗಿದೆ. ಜತೆಗೆ ಅವರು ನೀಡುವ ಮಾಹಿತಿ ಗೌಪ್ಯವಾಗಿರಲಿದೆ ಎಂಬುದನ್ನೂ ಮನವರಿಕೆ ಮಾಡಿಕೊಡಲಾಗಿದೆ. ಹೀಗಿದ್ದರೂ ಯಾವ ಪಾಲಕರೂ ದೂರು ನೀಡಿಲ್ಲ. ಅಲ್ಲದೇ, ವಿದ್ಯಾರ್ಥಿ ನಿಲಯದಲ್ಲಿ ಸಂಜೆ 7ರಿಂದ ರಾತ್ರಿ 2ರವರೆಗೂ ಹಿರಿಯ ಪ್ರಾಧ್ಯಾಪಕರು, ಡೀನ್‌ಗಳು, ವಾರ್ಡನ್‌ಗಳು ಗಸ್ತು ತಿರುಗುವ ಮೂಲಕ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಕಾಳಜಿ ಮಾಡಲಾಗುತ್ತಿದೆ. ಹೀಗಾಗಿ ರ‍್ಯಾಗಿಂಗ್ ನಡೆದಿರುವ ಸಾಧ್ಯತೆ ಇಲ್ಲ’ ಎಂದರು.

‘ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಾಯಕ ಮಹಾನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ರಾಷ್ಟ್ರಮಟ್ಟದ ರ‍್ಯಾಗಿಂಗ್ ನಿಯಂತ್ರಣ ಕೋಶದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ದೇಶದ 75 ಕೃಷಿ ವಿವಿ ಜತೆಗೆ, ವೈದ್ಯಕೀಯ, ದಂತವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ರ‍್ಯಾಗಿಂಗ್ ತಡೆಗೆ ಕಠಿಣ ಕ್ರಮ ಜರುಗಿಸುವುದು ಮತ್ತು ಅದರ ಮಾಹಿತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ನೀಡುವ ಗುರುತರ ಜವಾಬ್ದಾರಿ ನಿಭಾಯಿಸಿದ್ದೇನೆ. ಹೀಗಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ಅಂಥದ್ದೊಂದು ಪಿಡುಗು ಇರಲು ಯಾವ ಅವಕಾಶವನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆದರೂ ಡೀನ್‌ ಹಾಗೂ ವಾರ್ಡನ್‌ಗಳ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು. ಜತೆಗೆ ಎಚ್ಚರವನ್ನೂ ವಹಿಸಲಾಗುವುದು. ವಿದ್ಯಾರ್ಥಿಗಳು ಹಾಗೂ ಪಾಲಕರು ಯಾವುದೇ ಹಿಂಜರಿಕೆ ಇಲ್ಲದೆ, ನನ್ನನ್ನೇ ನೇರವಾಗಿ ಭೇಟಿ ಮಾಡಿ ದೂರು ಸಲ್ಲಿಸಬಹುದು’ ಎಂದು ಡಾ. ಚೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT