ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ಅನ್ಯಾಯ, ಸುಳ್ಳು, ದ್ವೇಷ: ರಾಹುಲ್ ಗಾಂಧಿ ಟೀಕೆ

ಪ್ರಕಾಶ ಹುಕ್ಕೇರಿ ಪ್ರಚಾರ ಸಮಾವೇಶ
Last Updated 19 ಏಪ್ರಿಲ್ 2019, 15:24 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ):‘ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಅನ್ಯಾಯ ಮಾಡಿದ್ದಾರೆ. ಸುಳ್ಳುಗಳನ್ನು ಹೇಳಿದ್ದಾರೆ. ದ್ವೇಷ ಸಾಧನೆ ಮಾಡಿದ್ದಾರೆ. ಅದೇ ಅವರ ಸಾಧನೆಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತಿನುದ್ದಕ್ಕೂ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ‘ಅವರು ಚೌಕಿದಾರ ಅಲ್ಲ; ಕಳ್ಳ’ ಎಂದು ಮೂದಲಿಸಿದರು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುವ ಜೊತೆಗೆ, ತಮ್ಮ ಸರ್ಕಾರ ಬಂದರೆ ಏನೇನು ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎನ್ನುವುದನ್ನು ಹಂಚಿಕೊಂಡರು.

‘ಸತ್ಯ, ನ್ಯಾಯ ಹಾಗೂ ಪ್ರೀತಿ ಕಾಂಗ್ರೆಸ್‌ನ ತತ್ವಗಳಾಗಿವೆ. ಆದರೆ, ಬಿಜೆಪಿಯ ಚೌಕಿದಾರ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಅವರು ಈಡೇರಿಸಿಲ್ಲ’ ಎಂದು ಕುಟುಕಿದರು.

‘ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ರೈತರನ್ನು ಸಾಲ ಮರುಪಾವತಿ ವಿಷಯದಲ್ಲಿ ಜೈಲಿಗೆ ಹಾಕುವುದನ್ನು ತಪ್ಪಿಸಲು ಕಾನೂನು ಬದಲಾವಣೆ ಮಾಡಲಾಗುವುದು ಎಂದು ಎಐಸಿಸಿ ಭರವಸೆ ನೀಡಿದರು.

‘ಸಾಲ ಮರುಪಾವತಿ ವಿಷಯದಲ್ಲಿ ಈಗಿರುವ ನಿಯಮಾವಳಿಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತೇವೆ. ಇದರಿಂದ ರೈತರು ಜೈಲಿಗೆ ಹೋಗುವುದಷ್ಟೇ ಅಲ್ಲ ಬ್ಯಾಂಕ್‌ಗಳಿಂದ ಉಂಟಾಗುವ ತೊಂದರೆಗಳಿಂದಲೂ ದೂರಾಗಬಹುದು’ ಎಂದು ಹೇಳಿದರು.

‘ಉದ್ಯೋಗ ಆರಂಭಿಸುವ ಯುವಕರು ಸಕ್ಷಮ ಪ್ರಾಧಿಕಾರಿಗಳ ಅನುಮತಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು. ಅವರು ಮೊದಲ ಮೂರು ವರ್ಷ ಯಾವುದೇ ಅನುಮತಿ ಪಡೆಯದೆಯೂ ಉದ್ಯಮ ನಡೆಸಬಹುದು; ನಿರುದ್ಯೋಗಿಗಳಿಗೆ ಉದ್ಯೋಗ ನೀಡಬಹುದು. ಅವರ ಉದ್ಯಮ ಯಶಸ್ವಿಯಾಗಿ ಮುಂದುವರಿದರೆ ನಂತರವಷ್ಟೇ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಬ್ಯಾಂಕ್‌ನಿಂದ ಸಾಲ ನೀಡುವ ವ್ಯವಸ್ಥೆಯುನ್ನೂ ಮಾಡಲಾಗುವುದು. ಇದರಿಂದ ಲಕ್ಷಾಂತರ ಮಂದಿಗೆ ಕೆಲಸ ಸಿಗಲಿದೆ ಹಾಗೂ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಬಡತನ ನಿರ್ಮೂಲನೆ:

‘2021ರ ವೇಳೆಗೆ ದೇಶದಲ್ಲಿ ಬಡತನವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ಪಕ್ಷದ ಮೊದಲ ಗುರಿಯಾಗಿದೆ. ಇದನ್ನು ಆಂದೋಲನದ ರೂಪದಲ್ಲಿ ಕಾಂಗ್ರೆಸ್‌ ಕೈಗೆತ್ತಿಕೊಳ್ಳಲಿದೆ. ನಾವು ಬಡತನದ ವಿರುದ್ದ ಸರ್ಜಿಕಲ್ ಸ್ಟ್ರೈಕ್ ನಡೆಸಲಿದ್ದೇವೆ. ಪಂಚಾಯ್ತಿಗಳಲ್ಲಿ ಯುವಕರಿಗೆ10 ಲಕ್ಷ ಹುದ್ದೆಗಳನ್ನು ನೀಡಲಾಗುವುದು’ ಎಂದು ಹೇಳಿದರು.

‘ಮೋದಿ ದೇಶದ ಚೌಕಿದಾರನಲ್ಲ; ಅನಿಲ್ ಅಂಬಾನಿ ರೀತಿಯ ಉದ್ಯಮಿಗಳಿಗಷ್ಟೇ ಅವರು ಕಾವಲುಗಾರರಾಗಿದ್ದಾರೆ. ಜನರಿಗೆ ಅನ್ಯಾಯ ಮಾಡಿದ್ದಾರೆ. ಆದರೆ, ನಾವು ಎಲ್ಲ ಬಡವರ ಪಟ್ಟಿ ಸಿದ್ಧ ಮಾಡಿದ್ದೇವೆ. ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ ₹ 72ಸಾವಿರ ಹಾಕುತ್ತೇವೆ. ಆದರೆ, ಮೋದಿ ಸರ್ಕಾರ ನಿಮ್ಮ ಜೇಬಿನಿಂದ ಹಣ ಕಸಿದುಕೊಂಡಿದೆ. ನೋಟು ಚಲಾವಣೆ ರದ್ದುಪಡಿಸಿ ತೊಂದರೆ ನೀಡಿದೆ; ಬಡವರಿಗೆ ಸಂಕಷ್ಟ ತಂದೊಡ್ಡಿದೆ’ ಎಂದರು.

‘ಸಾಲ ಮನ್ನಾ ಮಾಡುತ್ತೇವೆ ಎಂದರೆ, ಹಣ ಎಲ್ಲಿಂದ ಬರುತ್ತದೆ ಎಂದು ಮೋದಿ ಕೇಳುತ್ತಾರೆ. ಸಾಲ ತೀರಿಸಲಗದೇ ದೇಶದಿಂದ ಪರಾರಿಯಾಗಿರುವ ನೀರವ್‌ ಮೋದಿ, ಅನಿಲ್ ಅಂಬಾನಿ, ವಿಜಯ ಮಲ್ಯ ಅವರ ಜೇಬಿನಿಂದ ಹಣ ತಂದು ಇಲ್ಲಿನ ಜನರಿಗೆ ಕೊಡುತ್ತೇವೆ. ‘ನ್ಯಾಯ’ ಯೋಜನೆ ಮೂಲಕ ಜನರಿಗೆ ನ್ಯಾಯ ಒದಗಿಸುತ್ತೇವೆ. ಒಂದೇ ಹೊಡೆತಕ್ಕೆ ಬಡತನ ಹೋಗಲಾಡಿಸಲಿದ್ದೇವೆ’ ಎಂದು ತಿಳಿಸಿದರು.

‘ಮೋದಿ ವಿಧಿಸಿರುವ ಗಬ್ಬರ್ ಸಿಂಗ್ ತೆರಿಗೆಯಿಂದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚುತ್ತಿವೆ. ನಿರುದ್ಯೋಗಿಗಳಿಗೆ ‌ಉದ್ಯೋಗ ದೊರೆಯುತ್ತಿಲ್ಲ. ಸರ್ಕಾರಿ ಹುದ್ದೆಯನ್ನು ಭರ್ತಿ ಮಾಡಲು ಅವರಿಂದ ಆಗಲಿಲ್ಲ. ದೇಶದಲ್ಲಿ 22 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಹಾಗಾದರೆ ಯುವಕರಿಗೆ ಅವರೇನು ಮಾಡಿದ್ದಾರೆ’ ಎಂದು ವಾಗ್ಬಾಣ ಪ್ರಯೋಗಿಸಿದರು.

‘ದೇಶದಲ್ಲಿ ಗುರುವಿಗೆ ದೊಡ್ಡ ಸ್ಥಾನಮಾನವಿದೆ. ಆದರೆ, ಮೋದಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಏನು‌ ಮಾಡಿದರು? ಮೂಲೆಗುಂಪು ಮಾಡಿದರು. ಭರವಸೆಗಳನ್ನು ಮರೆತಿರುವ ಅವರು ನಿರುದ್ಯೋಗ, ಬಡತನ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಕುಟುಕಿದರು.

ನಿಗದಿಗಿಂತ ಒಂದು ತಾಸು ತಡವಾಗಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT