ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲವಾಗುತ್ತಿರುವ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಕರ್ನಾಟಕ, ಗೋವಾ, ಮಹಾರಾಷ್ಟ್ರದ ಪ್ರಗತಿಪರ ಚಿಂತಕರಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಸಲಹೆ
Last Updated 9 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲಗೊಳ್ಳುತ್ತಿದ್ದು, ಅದನ್ನು ಗಟ್ಟಿಗೊಳಿಸಲು ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರದ ತಜ್ಞರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸಲಹೆ ನೀಡಿದರು.

ಇಲ್ಲಿನ ಡೆನಿಸನ್ಸ್‌ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ರಾಹುಲ್‌ ಅವರೊಂದಿಗೆ ಸುಮಾರು ಒಂದು ತಾಸು ಸಂವಾದ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೊ.ರಾಜೇಂದ್ರ ಚೆನ್ನಿ, ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಗಣೇಶ ದೇವಿ, ‘ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಸ್ಥೆಗಳನ್ನು ಯಾವುದೇ ಕಾರಣಕ್ಕೂ ಅಭದ್ರಗೊಳಿಸಬಾರದು. ಇವು ಅಭದ್ರಗೊಂಡರೆ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ ಎಂಬುದನ್ನು ರಾಹುಲ್‌ ಗಮನಕ್ಕೆ ತರಲಾಯಿತು’ ಎಂದು ಹೇಳಿದರು.

ದೇಶದ ಬಾಹ್ಯ ಭದ್ರತೆ ಎಷ್ಟು ಮುಖ್ಯವೋ ಅದಕ್ಕಿಂತ ಆಂತರಿಕ ಭದ್ರತೆ ಹೆಚ್ಚು ಮುಖ್ಯ. ದೇಶದ ನಾಗರಿಕರಿಗೆ ಅಭದ್ರತೆ ಎಂಬುದು ಎಂದಿಗೂ ಕಾಡಬಾರದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಭದ್ರತೆಯ ಮನಸ್ಥಿತಿ ನಿರ್ಮಾಣವಾಗಿದೆ. ಪ್ರಕ್ಷುಬ್ಧವಾಗಿರುವ ವಾತಾವರಣವನ್ನು ತಿಳಿಗೊಳಿಸಬೇಕಾದ ಅಗತ್ಯವಿದೆ ಎಂಬುದನ್ನು ಹೇಳಿದ್ದಾಗಿ ಅವರು ತಿಳಿಸಿದರು.

‘ದೇಶದ ಯುವ ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಬೇಕಾಗಿರುವ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ವಿನಾಶ ಮಾಡಲಾಗುತ್ತಿದೆ. ಅವುಗಳ ಸಾಮರ್ಥ್ಯ ಕುಂದಿಸುವ ಪ್ರಯತ್ನ ನಡೆದಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಆಯಕಟ್ಟಿನ ಸ್ಥಳಗಳಲ್ಲಿ ಒಂದೇ ಸಿದ್ಧಾಂತದ ಹಿನ್ನೆಲೆಯವರನ್ನು ತಂದು ಕೂರಿಸಲಾಗುತ್ತಿದೆ. ಸಂಶೋಧನೆಗಳಿಗೆ ಆದ್ಯತೆ ಕಡಿಮೆಯಾಗಿದೆ’ ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು ಎಂದು ತಿಳಿಸಿದರು.

ದೇಶದಲ್ಲಿ ಆದಿವಾಸಿಗಳನ್ನು ಹೊರಹಾಕುವ ಯತ್ನ ನಡೆದಿದೆ. ಕೃಷಿ ಬಿಕ್ಕಟ್ಟು ತೀವ್ರವಾಗಿದೆ. ಬೆಲೆ ಏರುಪೇರಾಗುತ್ತಿರುವ ಪರಿಣಾಮ ರೈತರ ಆತ್ಮಹತ್ಯೆ ಹೆಚ್ಚಾಗಿದ್ದು, ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾಗಿ ಹೇಳಿದರು.

ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮಾಣಿಕಂ ಠಾಕೂರ್‌, ಪ್ರಕಾಶ ರಾಠೋಡ ಹಾಗೂ ವಿವಿಧ ಕ್ಷೇತ್ರದ ಪ್ರಮುಖರಾದ ಪ್ರೊ.ಮುಜಾಫರ ಅಸ್ಸಾದಿ, ಸಿದ್ದನಗೌಡ ಪಾಟೀಲ, ಸುರೇಖಾ ದೇವಿ, ಉಲ್ಕಾ ಮಹಾಜನ, ಕೆ.ನೀಲಾ , ವಿಲ್ಫ್ರೆಡ್‌ ಡಿ’ಸೋಜಾ, ಅಬ್ದುಲ್‌ ಖಾನ್‌, ಬಸವಪ್ರಭು ಹೊಸಕೇರಿ, ಧನಾಜಿ ಗುರುವ, ಪಿ.ವಿ.ಹಿರೇಮಠ, ಪ್ರಕಾಶ ಗರುಡ, ರಾಜೇಂದ್ರ ಪೊದ್ದಾರ್‌, ಎಸ್‌.ವಿ.ಚಿಕ್ಕನರಗುಂದ, ಸಂಜೀವ ಕುಲಕರ್ಣಿ, ಸತ್ಯೇಂದ್ರ ಸೋನಾರ, ಶಂಕರಗೌಡ ಸತ್ಮಾರ, ಶಂಕರ ಹಳಗಟ್ಟಿ, ಶಿವಯೋಗಿ ಪ್ಯಾಟಿಶೆಟ್ಟರ, ಟೆರೆನ್ಸ್‌ ಡಿ.ಸೇನಾ, ಸಿ.ಎ.ಕುಟಿನ್ಹೊ, ದತ್ತಾ ನಾಯ್ಕ್‌, ಬಿ.ಎನ್‌.ಪೂಜಾರಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇದು ರಾಜಕೀಯ ವೇದಿಕೆ ಅಲ್ಲ: ಚೆನ್ನಿ ಸ್ಪಷ್ಟನೆ

‘ಚಿಂತಕರು, ಪ್ರಗತಿಪರರು, ಬರಹಗಾರರ ಅಭಿಪ್ರಾಯ ಆಲಿಸಬೇಕು ಎಂದು ರಾಹುಲ್‌ ಗಾಂಧಿ ಇಚ್ಛೆ ವ್ಯಕ್ತಪಡಿಸಿದ್ದರಿಂದ ಇಂದಿನ ಸಂವಾದ ನಡೆಯಿತು. ‘ದಕ್ಷಿಣಾಯನ’ ಎಂಬ ಸಾಂಸ್ಕೃತಿಕ ಸಂಸ್ಥೆಯಲ್ಲಿ ಸಕ್ರಿಯವಾಗಿರುವ ಕವಿಗಳು, ಬರಹಗಾರರು, ಚಿಂತಕರು ಈ ಸಂವಾದದಲ್ಲಿ ಪಾಲ್ಗೊಂಡಿದ್ದೆವು. ನಾವೆಲ್ಲರೂ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡವರಲ್ಲ. ಇದು ರಾಜಕೀಯ ವೇದಿಕೆಯೂ ಎಲ್ಲ, ಯಾವುದೇ ಪಕ್ಷ ರಾಜಕೀಯದ ಜೊತೆಯೂ ನಾವಿಲ್ಲ’ ಎಂದು ಪ್ರೊ. ರಾಜೇಂದ್ರ ಚೆನ್ನಿ ಸ್ಪಷ್ಟಪಡಿಸಿದರು.

ವಿಮರ್ಶಾತ್ಮಕವಾಗಿ ನಡೆದ ಸಂವಾದದಲ್ಲಿ ವ್ಯಕ್ತವಾದ ಸಲಹೆ, ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ಮತ್ತು ಉತ್ಸಾಹದಿಂದ ಆಲಿಸಿದ ರಾಹುಲ್‌, ಉಪಯುಕ್ತ ಸಲಹೆಗಳನ್ನು ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವುದಾಗಿ ಹೇಳಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ ಸವಾಲುಗಳನ್ನು ನಿವಾರಿಸಲು ಆದ್ಯತೆ ನೀಡುವ ಭರವಸೆ ನೀಡಿದ್ದಾಗಿ ಹೇಳಿದರು.

ರಾಹುಲ್ ಭಾಷಣ ಬೊಗಳೆ: ಬಿಜೆಪಿ ಟೀಕೆ

ಬೆಂಗಳೂರು: ಯಾವುದೇ ಸತ್ವ ಇಲ್ಲದೇ ಹೇಳಿದ್ದನ್ನೇ ಹೇಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೊಗಳೆ ಭಾಷಣೆ ಮಾಡಲುವ ಜನರನ್ನು ಮರುಳು ಮಾಡುವ ಯತ್ನ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಜೈಷ್ ಎ ಮೊಹಮದ್‌ ಸಂಘಟನೆಯ ಮಸೂದ್‌ ಅಜರ್‌ನನ್ನು ಕಂದಹಾರ್‌ಗೆ ಬಿಟ್ಟು ಬಂದಿದ್ದೇ ಬಿಜೆಪಿ ಎಂದು ರಾಹುಲ್ ಟೀಕಿಸಿದ್ದಾರೆ. ಆದರೆ, ಮಸೂದ್‌ ಅಜರ್, ದಾವೂದ್ ಇಬ್ರಾಹಿಂ ಅಂತಹವರನ್ನು ಬೆಳೆಸಿದ್ದು ಕಾಂಗ್ರೆಸ್ ಎಂಬುದನ್ನು ಅವರು ಮರೆತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್‌ ದೂರಿದ್ದಾರೆ.

ಮೋದಿಯುವರ ನಾಯಕತ್ವ ದೇಶಕ್ಕೆ ಅಗತ್ಯವಿದೆಯೇ ಅಥವಾ ನಾಯಕತ್ವವೇ ಇಲ್ಲದ ಅವಕಾಶವಾದಿ ಕಾಂಗ್ರೆಸ್ ಆಡಳಿತ ಬೇಕೇ ಎಂಬುದನ್ನು ವಿಮರ್ಶೆ ಮಾಡುವಷ್ಟು ಪ್ರೌಢತೆ ನಮ್ಮ ದೇಶದ ಮತದಾರರಲ್ಲಿದೆ. ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಬಿಜೆಪಿ ಯತ್ನ ಪಡುವುದೇ ಬೇಕಿಲ್ಲ. ಕಾಂಗ್ರೆಸ್ ಅಧ್ಯಕ್ಷರೇ ಆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

* ರಾಹುಲ್‌ ಅವರನ್ನು ಬಿಜೆಪಿಯವರು ‘ಪಪ್ಪು’ ಎಂದು ಮೂದಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ನೋಡುವ ನಮ್ಮ ಮನಸ್ಥಿತಿಯೂ ಬೇರೆಯಾಗಿತ್ತು. ಆದರೆ, ಇಂದು ಅವರೊಡನೆ ಸಮಾಲೋಚನೆ ನಡೆಸಿದ ಬಳಿಕ ಆತ ‘ಪಪ್ಪು’ ಅಲ್ಲ, ಪ್ರಬುದ್ಧ ರಾಜಕಾರಣಿ ಎಂಬುದು ಸಾಬೀತಾಯಿತು

- ಅಶೋಕ ಎ. ಪಾಲ್‌, ವಿದ್ವಾಂಸ

* ದೇಶದ ಸಂವಿಧಾನ, ಬಹುತ್ವಕ್ಕೆ ಒದಗಿರುವ ಅಪಾಯಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಗಹನ ಚರ್ಚೆ ನಡೆಯಿತು

- ಬಿ.ಎಲ್‌.ಶಂಕರ್‌, ಕಾಂಗ್ರೆಸ್‌ ಮುಖಂಡ

* ರಫೇಲ್‌ ಹಗರಣ, ಏರ್‌ಸ್ಟ್ರೈಕ್‌, ರಾಮಮಂದಿರ ವಿವಾದದ ಬಗ್ಗೆ ತಾವೊಬ್ಬರೇ ಮಾತನಾಡುತ್ತಿದ್ದು, ತಮ್ಮೊಂದಿಗೆ ನಾಡಿನ ಬುದ್ಧಿಜೀವಿಗಳು, ಪ್ರಗತಿಪರರು ದಿಟ್ಟ ಪ್ರತಿಕ್ರಿಯೆ ನೀಡಬೇಕು ಎಂದು ರಾಹುಲ್‌ ಮನವಿ ಮಾಡಿದರು

- ದಾನಪ್ಪ ಕಬ್ಬೇರ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT