ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿಗೆ ರಾಯಚೂರು ಸಿಗಡಿಮೀನು!

ಲಾಕ್‌ಡೌನ್‌ ದಿನಗಳಲ್ಲಿ ₹ 70 ಲಕ್ಷದವರೆಗೆ ವಹಿವಾಟು
Last Updated 21 ಮೇ 2020, 5:39 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಹಾರಾಷ್ಟ್ರದ ಮುಂಬೈಗೆ ಲಾಕ್‌ಡೌನ್‌ ದಿನಗಳಲ್ಲಿ ರಾಯಚೂರಿನಿಂದ ಸಿಗಡಿ ಮೀನು ಸರಬರಾಜು ಆಗುತ್ತಿದೆ!

ಬಿಸಿಲೂರಿನಲ್ಲಿ ಕೃಷ್ಣಾ ನದಿ ತೀರದಲ್ಲಿ ಸಿಗಡಿ ಮೀನು ಸಾಕಾಣಿಕೆ ಮಾಡುವ ಸಾಹಸವನ್ನು ಯುವ ರೈತರಾದತಾಲ್ಲೂಕಿನ ದೇವುಸುಗೂರು ಗ್ರಾಮದ ಸರ್ವೇಶ್‌ ರಾಯ್ಡು, ಸತೀಶ್‌ ದೊಡ್ಡಿ, ವೆಂಕಟೇಶ ಭೂತಪಲ್ಲಿ, ಸುರೇಶ‌ ಪಾಟೀಲ ಮತ್ತು ರಾಜಕುಮಾರ ವರಪೇಟೆ ಅವರು ಮಾಡಿದ್ದಾರೆ.

12 ಎಕರೆ ಜಮೀನಿನಲ್ಲಿ 12 ದೊಡ್ಡ ದೊಡ್ಡ ಹೊಂಡಗಳನ್ನು ನಿರ್ಮಿಸಿ ಸಿಗಡಿ ಮೀನುಗಾರಿಕೆ ಆರಂಭಿಸಿ ಆರು ತಿಂಗಳಾಗಿದೆ.ಇದಕ್ಕಾಗಿ ರೈತರು ₹1.2 ಕೋಟಿ ವೆಚ್ಚ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಮರಿ ಬೆಳೆಸಲು ಆರಂಭಿಸಿದ ಅವರಿಗೆ ಆರು ತಿಂಗಳಲ್ಲೇ ಅರ್ಧದಷ್ಟು ಬಂಡವಾಳ ವಾಪಸ್‌ ಬಂದಿದೆ.

ಏಪ್ರಿಲ್‌ನಲ್ಲಿ ಸಿಗಡಿ ಮೀನು ಮಾರುಕಟ್ಟೆಗೆ ಒಯ್ಯಲು ಸಿದ್ಧವಾಗಿದ್ದ ವೇಳೆಯಲ್ಲೇ ಲಾಕ್‌ಡೌನ್‌ ಶುರುವಾಯಿತು. ಮೀನುಗಾರಿಕೆ ಸ್ಥಗಿತವಾಗಿದ್ದ ಕರಾವಳಿ ಜಿಲ್ಲೆಗಳಿಂದ ರಾಯಚೂರಿನ ಸಿಗಡಿ ಮೀನುಗಳಿಗೆ ಬೇಡಿಕೆ ಬಂದಿದೆ. ಈವರೆಗೂ ₹ 70 ಲಕ್ಷದವರೆಗೆ ಸಿಗಡಿ ಮೀನು ವ್ಯವಹಾರ ಮಾಡಿದ್ದಾಗಿ ಈ ಯುವ ರೈತರು ಹೇಳುತ್ತಾರೆ.

ಕರಾವಳಿ ಭಾಗದವರಿಗೆ ರಾಯಚೂರಿನ ಸಿಗಡಿ ಮೀನು ಇಷ್ಟವಾಗಿದ್ದು, ಪ್ರತಿ ಬುಧವಾರ ಮತ್ತು ಭಾನುವಾರ ಸಿಗಡಿ ರವಾನಿಸಲಾಗುತ್ತಿದೆ. ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಪಾಸ್‌ ಒದಗಿಸಿದೆ. ಒಂದು ಕೆ.ಜಿ ಸಿಗಡಿ ಮೀನು ದರ ₹ 300ರಿಂದ ₹ 500ರವರೆಗೆ ಇದೆ. ಸಿಗಡಿ ದರ ಪಟ್ಟಿ ಕೂಡಾ ಮುಂಬೈನಿಂದ ಪ್ರತಿದಿನ ಆನ್‌ಲೈನ್‌ನಲ್ಲಿ ಬರುತ್ತದೆ.

‘ಆಂಧ್ರಪ್ರದೇಶದ ಕಾಕಿನಾಡದಲ್ಲಿ ರೈತರು ಸಿಗಡಿ ಮೀನುಗಾರಿಕೆ ಮಾಡಿದ್ದನ್ನು ನೋಡಿದ್ದೆವು. ಅದರ ಉಸ್ತುವಾರಿಗಾಗಿ ಆಂಧ್ರಪ್ರದೇಶದಿಂದ 18 ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ. ಪ್ರತಿದಿನ ಸಿಗಡಿಗೆ ಆನ್‌ಲೈನ್‌ ಬುಕಿಂಗ್‌ ಬರುತ್ತಿದೆ’ ಎಂದು ಸರ್ವೇಶ್‌ ರಾಯ್ಡು ಅವರು ಸಂತಸ ಹಂಚಿಕೊಂಡರು.

‘ಸಿಗಡಿ ಮೀನು ಸ್ಥಳೀಯವಾಗಿ ಪ್ರತಿ ವಾರ ಒಂದೂವರೆ ಟನ್‌ ಮಾರಾಟವಾಗುತ್ತಿದೆ. ಇನ್ನುಳಿದ ಮೀನುಗಳನ್ನು ಹೊರಗೆ ಕಳುಹಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT