ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಮಳೆ: ಬಾಲಕಿ ಸೇರಿ ನಾಲ್ವರು ಸಾವು

ಕುಮಟಾ– ತಡಸ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ಕೆಲ ಕಾಲ ಸಂಚಾರ ವ್ಯತ್ಯಯ
Last Updated 6 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಕಲಬುರ್ಗಿ, ರಾಯಚೂ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಗಾಳಿ ಮಳೆಗೆ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದು, ಮನೆ, ಕೃಷಿ ತೋಟಗಳಿಗೆ ಹಾನಿಯುಂಟಾಗಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಅರಳಿಕಟ್ಟಿಯಲ್ಲಿ ಕೊಟ್ಟಿಗೆಯ ಗೋಡೆ ಕುಸಿದು ಯಲ್ಲಪ್ಪ ಬಡಕುರೆ (60) ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಿದ್ದಪ್ಪ (32) ಮೃತಪಟ್ಟಿದ್ದಾರೆ. ಶಿವರಾಜ ಹಾಗೂ ರಾಜಪ್ಪ ಅವರಿಗೆ ಸಣ್ಣ ಗಾಯಗಳಾಗಿವೆ. ಮಹಾದೇವಪ್ಪ ಅವರ ಎತ್ತು ಕೂಡ ಬಲಿಯಾಗಿದೆ.

ಶಿರಸಿ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ 3 ಗಂಟೆಗೆ ಬೀಸಿದ ಗಾಳಿ ಹಾಗೂ ಮಳೆಗೆ ಜನರು ಭಯಭೀತರಾದರು. ಕೆಲವೆಡೆ ಮನೆಯ ಚಾವಣಿ ಹಾರಿ ಹೋಗಿವೆ. ಮರಗಳು, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಕುಮಟಾ– ತಡಸ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರ ಮುರಿದು ಬಿದ್ದು ಕೆಲ ಕಾಲ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಬನವಾಸಿ ಹಾಗೂ ಮುಂಡಗೋಡ ತಾಲ್ಲೂಕಿನ ಪಾಳಾದಲ್ಲಿ ಬಾಳೆ ತೋಟ ನಾಶವಾಗಿದೆ. ಕರಾವಳಿ ಭಾಗದ ಕಾರವಾರ, ಭಟ್ಕಳ, ಹೊನ್ನಾವರ, ಕುಮಟಾದಲ್ಲಿ ಮಿಂಚು, ಸಿಡಿಲು, ಗಾಳಿ ಸಹಿತ ಉತ್ತಮ ಮಳೆ ಸುರಿಯಿತು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮಳೆ ಗಾಳಿಗೆ ಎಲೆಬಳ್ಳಿ, ಹಿಪ್ಪುನೇರಳೆ, ಬಾಳೆ ತೋಟ ಹಾಳಾಗಿದೆ.

ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳ ಕೆಲವೆಡೆಗುರುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆ ಸುರಿಯಿತು.

ಕಲಬುರ್ಗಿನಗರದಲ್ಲಿ ಬೆಳಿಗ್ಗೆ ಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಆದರೂ ಬಿಸಿಗಾಳಿಯಿಂದಾಗಿ ವಾತಾವರಣ ಬಿಸಿಯಾಗೇ ಇತ್ತು. ರಾತ್ರಿ 8ರ ಸುಮಾರಿಗೆ ಏಕಾಏಕಿ ಮಳೆ ಸುರಿಯಲಾರಂಭಿಸಿತು.

ರಾಯಚೂರು ನಗರ, ಜಿಲ್ಲೆಯ ಮಾನ್ವಿ, ಕವಿತಾಳ, ಬಾಗಲವಾಡ, ಲಿಂಗಸುಗೂರು ಹಾಗೂ ಸಿರವಾರದಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಸುತ್ತ
ಮುತ್ತಬುಧವಾರ ತಡರಾತ್ರಿ ಮಳೆಯಾಗಿದೆ.

ಕಾರಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸಿದ್ದಾಪುರ ಹೋಬಳಿಯ ಉಳೇನೂರಲ್ಲಿ ಬುಧವಾರ ತಡ ರಾತ್ರಿ ಸಿಡಿಲು ಬಡಿದು ದನಗಾಹಿ ಪಾಮಣ್ಣ (28) ಮೃತಪಟ್ಟಿದ್ದಾರೆ.ಎರಡು ಆಕಳು ಸಹ ಸಾವನ್ನಪ್ಪಿವೆ. ಮಂಗಳೂರು ನಗರದಲ್ಲಿ ಬುಧವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಬಿರುಸಿನ ಮಳೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ನಿರಂತರ ಸುರಿದ ಗಾಳಿ ಮಳೆಗೆ ಹಲವು ಮನೆಗಳ ಚಾವಣಿಗಳು ಹಾರಿ ಹೋಗಿವೆ.

ಶೆಡ್ ಕುಸಿದು ಬಾಲಕಿ ಸಾವು: ಹರಪನಹಳ್ಳಿ: ಪಟ್ಟಣದಗುಂಡಿನಕೇರಿಯಲ್ಲಿ ಬುಧವಾರ ತಡರಾತ್ರಿ ಸುರಿದ ಗಾಳಿ ಮಳೆಗೆ 9 ವರ್ಷದ ಬಾಲಕಿ ಸಹರಾ ಮೃತಪಟ್ಟು, ಏಳು ಜನರು ಗಾಯಗೊಂಡಿದ್ದಾರೆ.

ಇಲ್ಲಿನ ಗುಂಡಿನಕೇರಿಯಲ್ಲಿ ದಾದಾಪೀರ್‌ ಎಂಬುವವರು ತಂಗಿದ್ದ ತಗಡಿನ ಶೆಡ್‌ ಕುಸಿದು ಅವಘಡ ಸಂಭವಿಸಿದ್ದು, 7 ವರ್ಷದ ಬಾಲಕಿ ಸಿಮ್ರನ್ ಗಾಯಗೊಂಡಿದ್ದಾಳೆ. ಹಿರೇಕೆರೆ ಹತ್ತಿರ ಶೆಡ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ ತಮಿಳುನಾಡಿನ ಏಳು ಜನರು ಗಾಯಗೊಂಡಿದ್ದಾರೆ. ಇವರು ಹಳೇ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದ ಕೆಲಸಕ್ಕಾಗಿ ಬಂದಿದ್ದರು.

ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಸಮೀಪದ ತಿಮ್ಮಾಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಿವೆ. ಕೆಲವೆಡೆ ಬೆಳೆಹಾನಿ ಆಗಿದೆ. ದಾವಣಗೆರೆ ಜಿಲ್ಲೆಯ ಕೆಲವೆಡೆಯೂ ಬುಧವಾರ ತಡರಾತ್ರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT