ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ: ಕಂಗೆಟ್ಟ ಮಲೆನಾಡಿಗರು

ಶಿವಮೊಗ್ಗ ನಗರದಲ್ಲೂ ಕುಡಿಯುವ ನೀರಿಗೆ ಬರ, ಬಿತ್ತನೆ ಕುಂಠಿತ l ಮುಂಗಾರು ಆರಂಭದಲ್ಲೇ ಶೇ 80ರಷ್ಟು ಕೊರತೆ
Last Updated 20 ಜೂನ್ 2019, 18:47 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂಗಾರು ವಿಳಂಬವಾಗಿರುವ ಕಾರಣ ಮಲೆನಾಡಿನ ಹಲವು ಭಾಗಗಳಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಜಲಾಶಯಗಳು ಬರಿದಾಗಿವೆ. 1.54 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಶೇ 1ರಷ್ಟೂ ಸಾಧನೆಯಾಗಿಲ್ಲ.

ಜೂನ್‌ 20ರ ವೇಳೆಗೆ ಪ್ರತಿ ವರ್ಷ ಜಿಲ್ಲೆಯಲ್ಲಿ ವಾಡಿಕೆಯಂತೆ 360 ಮಿ.ಮೀ. ಮಳೆಯಾಗುತ್ತಿತ್ತು. ಈ ಬಾರಿ ಮುಂಗಾರು ಆರಂಭದಲ್ಲೇ ಶೇ 80ರಷ್ಟು ಕೊರತೆಯಾಗಿದೆ.ಹಿಂದಿನ ವರ್ಷ ಈ ವೇಳೆಗೆ 675 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ವರ್ಷದ ಮುಂಗಾರಿನಲ್ಲಿ 99,684 ಹೆಕ್ಟೇರ್‌ನಲ್ಲಿ ಭತ್ತ, 55,100 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಸೇರಿ 1,59,457 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಬಿತ್ತನೆ 10 ಹೆಕ್ಟೇರ್ ದಾಟಿಲ್ಲ.

22 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ: ಮುಂಗಾರು ಹಂಗಾಮಿಗೆ ರೈತರಿಂದ 22 ಸಾವಿರ ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದಿದೆ. 12 ಸಾವಿರ ಕ್ವಿಂಟಲ್ ಮೆಕ್ಕೆಜೋಳ, 156 ಕ್ವಿಂಟಲ್ ತೊಗರಿ, 165 ಕ್ವಿಂಟಲ್ ರಾಗಿ ಬೀಜಗಳಿಗೆ ಬೇಡಿಕೆ ಇದೆ. ಕೃಷಿ ಇಲಾಖೆ ಈಗಾಗಲೇ ಅಗತ್ಯ ಇರುವಷ್ಟು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಂಡಿದೆ. ಮುಂಗಾರು ಬೆಳೆಗೆ 90 ಸಾವಿರ ಟನ್‌ ರಸಗೊಬ್ಬರದ ಬೇಡಿಕೆ ನಿರೀಕ್ಷಿಸಲಾಗಿದ್ದು, ಅಗತ್ಯ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ನಿರೀಕ್ಷೆಯಂತೆ ಮಳೆಬಾರದ ಕಾರಣ ರೈತರು ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ.

ಕುಡಿಯುವ ನೀರಿಗೂ ತತ್ವಾರ: ಮಳೆ ವಿಳಂಬದ ಕಾರಣ ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. 136 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು 35 ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.ಶಿವಮೊಗ್ಗ ನಗರಕ್ಕೆ ನೀರು ಪೂರೈಸುವ ತುಂಗಾ ಜಲಾಶಯದಲ್ಲಿ ಕೇವಲ 1.39 ಟಿಎಂಸಿ ಅಡಿ ನೀರಿದೆ. ಜಲಾಶಯದಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಅಗತ್ಯ ಇರುವಷ್ಟು ನೀರು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ 4 ಲಕ್ಷ ಜನಸಂಖ್ಯೆ ಇರುವ ಶಿವಮೊಗ್ಗ ನಗರದಲ್ಲೂ ನೀರಿನ ಸಮಸ್ಯೆ ಉಲ್ಬಣಸಿದೆ. ನಗರ ಪಾಲಿಕೆ ದಿನಬಿಟ್ಟು ದಿನ ನೀರು ಸರಬರಾಜು ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.

ಅಚ್ಚುಕಟ್ಟು ಪ್ರದೇಶದಲ್ಲೂ ಸಂಕಷ್ಟ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ. ಜೊತೆಗೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಈ ಜಲಾಶಯವೇ ಆಧಾರ. 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅದರಲ್ಲಿ ಪ್ರಸ್ತುತ 17 ಟಿಎಂಸಿ ಅಡಿ ನೀರಿದೆ. ಅದರಲ್ಲಿ 13.832 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್. ಉಳಿದ 4 ಟಿಎಂಸಿ ಅಡಿ ನೀರಿನಲ್ಲಿ ತುಂಗಭದ್ರಾ ನದಿಗೆ 1.382 ಟಿ.ಎಂ.ಸಿ ಅಡಿ ನೀರು ಹರಿಸಲಾಗುತ್ತಿದೆ. ಈ ವಾರದ ಒಳಗೆ ಮಳೆ ಬಾರದೇ ಹೋದರೆ ಭದ್ರಾ ಜಲಾಶಯವೂ ಬರಿದಾಗಲಿದೆ. ಅಚ್ಚುಕಟ್ಟು ವ್ಯಾಪ್ತಿಯ ಒಂದು ಲಕ್ಷ ಹೆಕ್ಟೇರ್ ಅಡಿಕೆ ಬೆಳೆಗೆ ಸಂಕಷ್ಟ ಎದುರಾಗಿದೆ.

**
ಭದ್ರಾ ಜಲಾಶಯ ಬರಿದಾದರೆ ಅಚ್ಚುಕಟ್ಟು ಪ್ರದೇಶದ 1 ಲಕ್ಷ ಹೆಕ್ಟೇರ್ ಅಡಿಕೆ ತೋಟಗಳು ನಾಶವಾಗುತ್ತವೆ. ವಾರದೊಳಗೆ ಮಳೆ ಬರದಿದ್ದರೆ ಆರ್ಥಿಕ ವ್ಯವಸ್ಥೆ ಹದಗೆಡುತ್ತದೆ.
-ಎಚ್.ಆರ್.ಬಸವರಾಜಪ್ಪ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT