ಶನಿವಾರ, ಜುಲೈ 31, 2021
28 °C
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ 26ರಂದು

ಅಕ್ಕನ ಪುಸ್ತಕ–ಅಜ್ಜನ ಆಸೆಯಿಂದ ವೈದ್ಯಲೋಕಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈದ್ಯರಾಗಿರುವ ಅಕ್ಕನ ಪುಸ್ತಕಗಳನ್ನು ಪ್ರೌಢಶಾಲೆಯಲ್ಲಿ ಇರುವಾಗಲೇ ತಿರುವಿಹಾಕುತ್ತಿದ್ದ ವಲ್ಲೀಶ್‌ ಶೆಣೈಗೆ ವೈದ್ಯಕೀಯ ರಂಗದಲ್ಲಿ ಕುತೂಹಲ ಬೆಳೆಯಿತು. ಅದೇ ಇಂದು ಅವರಿಗೆ ಎಂಬಿಬಿಎಸ್‌ ಪದವಿಯೊಂದಿಗೆ 7 ಚಿನ್ನದ ಪದಕಗಳನ್ನು ಕೊರಳಿಗೇರಿಸಿದೆ.

ಇದೇ 26ರಂದು ನಡೆಯುವ ‘ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ’ 21ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪದಕಗಳನ್ನು ಪ್ರದಾನ ಮಾಡಲಿದ್ದಾರೆ. ವಿಜ್ಞಾನಿ ಸಿ.ಎನ್‌.ಆರ್‌.ರಾವ್ ಇವರನ್ನು ಹರಸಲಿದ್ದಾರೆ.

ಮಂಗಳೂರಿನ ಎ.ಜೆ.ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾದ ವಲ್ಲೀಶ್‌ ಎಲ್‌.ಕೆ.ಜಿ.ಯಿಂದ ದ್ವಿತೀಯ ಪಿ.ಯು. ವರೆಗೆ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಓದಿದರು. ಪ್ರೌಢಶಾಲೆಯಲ್ಲೇ ವೈದ್ಯರಾಗುವ ಕನಸು ಮೊಳಕೆಯೊಡೆಯಿತು. ಅದಕ್ಕೆ ಪೋಷಕರ ಪ್ರೋತ್ಸಾಹ, ಅಧ್ಯಾಪಕರ ಮಾರ್ಗದರ್ಶನ ಸಿಕ್ಕಿದ್ದರಿಂದ ಈಗ ವೈದ್ಯರಾಗಿ ಹೊರಹೊಮ್ಮಿದ್ದಾರೆ.

‘ಸದ್ಯ ನೀಟ್‌ ಪರೀಕ್ಷೆಯಲ್ಲಿ 950ನೇ ರ್‍ಯಾಂಕ್ ಬಂದಿದೆ. ನರವ್ಯೂಹ ವಿಜ್ಞಾನ(ನ್ಯೂರಾಲಜಿ)ದಲ್ಲಿ ಸ್ನಾತಕೋತ್ತರ ಪದವಿ ಓದಬೇಕು. ಸಂಶೋಧನೆಯಲ್ಲಿ ತೊಡಗಿ, ನರರೋಗಗಳಿಗೆ ಔಷಧಿ ಕಂಡುಹಿಡಿಯಬೇಕು ಅಂದುಕೊಂಡಿದ್ದೇನೆ’ ಎಂದು ಭವಿಷ್ಯದ ದಾರಿ ಬಗ್ಗೆ ಹೇಳಿದರು ವಲ್ಲೀಶ್‌ ಶೆಣೈ.

ಚೆನ್ನೈನಲ್ಲಿ ಹುಟ್ಟಿ ಬೆಳೆದ ಜಿ.ಅಪರ್ಣಾರಿಗೆ ತಾತನ ಆಸೆಯಂತೆ ವೈದ್ಯರಾಗಬೇಕು ಎಂಬ ಗುರಿ ನಿಗದಿಪಡಿಸಿಕೊಂಡರು. ಇಷ್ಟದ ಎಂಬಿಬಿಎಸ್‌ ಸೀಟು ಸಿಗದಿದ್ದರೂ, ಓದಿನಿಂದ ವಿಮುಖರಾಗದೆ ಬ್ಯಾಚುಲರ್‌ ಆಫ್‌ ಡೆಂಟಲ್‌ ಸರ್ಜರಿ ಕೋರ್ಸ್‌(ಬಿಡಿಎಸ್‌) ಸೇರಿ, ಈಗ 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಂಚೆ ಇಲಾಖೆಯಲ್ಲಿದ್ದ ಅಪ್ಪ– ಎಲ್‌ ಆ್ಯಂಡ್ ಟಿ ಕಂಪನಿಯ ಉದ್ಯೋಗಿಯಾಗಿದ್ದ ಅಮ್ಮನ ಮಗಳು ಜಿ.ಅಪರ್ಣಾ. ಹುಟ್ಟಿ, ಬೆಳೆದು, 12ನೇ ತರಗತಿ ವರೆಗೆ ಶಿಕ್ಷಣ ಪೂರೈಸಿದ್ದು ಚೆನ್ನೈನಲ್ಲಿ.

ವೈದ್ಯೆಯಾಗಬೇಕೆಂದು ಕಾಮೆಡ್‌–ಕೆ ಪರೀಕ್ಷೆ ಬರೆದರು. ಸಿಕ್ಕ ಅವಕಾಶ ಬಳಸಿಕೊಂಡು ಬೆಂಗಳೂರಿನ ಡಿ.ಎ.ಪಾಂಡು ಸ್ಮಾರಕ ಆರ್‌.ವಿ.ದಂತ ವೈದ್ಯಕೀಯ ಕಾಲೇಜಿಗೆ ಬಂದರು. ಮಗಳಿಗಾಗಿ ಅಮ್ಮನೂ ಕೆಲಸ ಬಿಟ್ಟು ಬೆಂಗಳೂರಿಗೆ ವಾಸ ಬದಲಿಸಿದರು. ಕೊನೆಗೂ ಅಮ್ಮನ ಶ್ರಮವನ್ನು ಅಪರ್ಣಾ ವ್ಯರ್ಥ ಮಾಡಲಿಲ್ಲ.

ಮಂಡ್ಯದ ಭಾರತಿ ಕಾಲೇಜ್‌ ಆಫ್‌ ಫಾರ್ಮಸಿಯ ಫಾರ್ಮ್‌.ಡಿ. ವಿದ್ಯಾರ್ಥಿನಿ ಭಾತ್ಸಾ ಲಿಜಾ ಜಾನ್ಸನ್‌ ಸಹ 6 ಚಿನ್ನದ ಪದಕ ಗಳಿಸಿದ್ದಾರೆ.
*
136 ಬಂಗಾರ ಪದಕಗಳ ಪ್ರದಾನ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಈ ಬಾರಿ ‘ಬಂಗಾರದ ವಿದ್ಯಾರ್ಥಿ’ಗಳ ಸಂಖ್ಯೆ ಹೆಚ್ಚಿದೆ.

‘ಎಲ್ಲ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿಶ್ವವಿದ್ಯಾಲಯವು ದತ್ತಿಗಳೊಂದಿಗೆ, ವಿ.ವಿ. ಅನುದಾನವನ್ನು ಸೇರಿಸಿ ಒಟ್ಟು 121 ವಿದ್ಯಾರ್ಥಿಗಳಿಗೆ 136 ಬಂಗಾರದ ಪದಕಗಳನ್ನು ಪ್ರದಾನ ಮಾಡುತ್ತಿದೆ. ಜತೆಗೆ 11 ವಿದ್ಯಾರ್ಥಿಗಳಿಗೆ ಕನಿಷ್ಟ ₹ 10,000 ಕ್ಕಿಂತ ಹೆಚ್ಚಿನ ನಗದು ಪುರಸ್ಕಾರ ನೀಡಲಾಗುತ್ತಿದೆ’ ಎಂದು ಕುಲಪತಿ ಎಸ್‌.ಸಚ್ಚಿದಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
*

ಬಂಗಾರದ ಪ್ರತಿ ಪದಕವೂ 4.8 ಗ್ರಾಂ. ಶುದ್ಧ ಚಿನ್ನದಿಂದ ಕೂಡಿದೆ. ಪ್ರತಿ ಪದಕಕ್ಕೆ ₹ 60,000 ವ್ಯಯಿಸಿದ್ದೇವೆ.
- ಎಸ್‌. ಸಚ್ಚಿದಾನಂದ, ಕುಲಪತಿ
*

ಕೆ.ಎಸ್‌.ನಾಗೇಶ್‌ಗೆ ಗೌರವ ಡಾಕ್ಟರೇಟ್‌

ಆರ್‌.ವಿ.ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ದಂತ ವೈದ್ಯ ಕೆ.ಎಸ್‌.ನಾಗೇಶ್‌(72) ಅವರಿಗೆ ಈ ಬಾರಿಯ ‘ಡಾಕ್ಟರ್‌ ಆಫ್‌ ಸೈನ್’ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ.
*

ಶೇ 81.11 ಫಲಿತಾಂಶ

ಎಲ್ಲ ಕೋರ್ಸ್‌ಗಳಿಗೆ ದಾಖಲಾದ 37,670 ವಿದ್ಯಾರ್ಥಿಗಳಲ್ಲಿ ಶೇ 81.11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪ್ರಮಾಣ 2018 ಮತ್ತು 2017ರಲ್ಲಿ ಕ್ರಮವಾಗಿ ಶೇ 70.44 ಮತ್ತು ಶೇ 76.77 ಇತ್ತು.

ವಿದ್ಯಾರ್ಥಿನಿಯರ ಮೇಲುಗೈ

ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ದಾಖಲಾದವರಲ್ಲಿ 9,727 ವಿದ್ಯಾರ್ಥಿಗಳು ಮತ್ತು 20,553 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಶೇ 32.58 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಪಾಸ್‌ ಆಗಿದ್ದಾರೆ.
*

ಅಂಕಿ–ಅಂಶ

30,556 - ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು

44 - ಪಿಎಚ್‌.ಡಿ. ಪ್ರದಾನ

129 - ಸೂಪರ್‌ ಸ್ಪೆಷಾಲಿಟಿ ಕೋರ್ಸ್‌(ಡಿಎಂ, ಎಂಸಿಎಚ್‌) ಪದವೀಧರರು

5,711- ಸ್ನಾತಕೋತ್ತರ ಪದವಿ ಪಡೆಯುವವರು

175 - ಫೆಲೋಷಿಪ್‌ ಕೋರ್ಸ್‌ ಪೂರ್ಣಗೊಳಿಸಿದವರು

16 - ಸರ್ಟಿಫಿಕೇಟ್‌ ಕೋರ್ಸ್‌ ಪೂರ್ಣಗೊಳಿಸಿದವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು