ಶನಿವಾರ, ಜನವರಿ 25, 2020
22 °C
ಯೋಜನೆ ಸ್ಥಗಿತಕ್ಕೆ ಯಾರ ಒತ್ತಡವೂ ಇಲ್ಲ; ಕೆಲಸ ಶೀಘ್ರ ಮುಗಿಸಲು ಎಲ್ಲರ ಸಹಕಾರವಿದೆ– ಗುತ್ತಿಗೆದಾರರ ಸ್ಪಷ್ಟನೆ

ರೈಲ್ವೆ ಕಾಮಗಾರಿ ಶೀಘ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ಕಾರಾಣಾಂತರದಿಂದ ಸ್ಥಗಿತಗೊಂಡಿದ್ದ ರಾಯದುರ್ಗ-ತುಮಕೂರು ರೈಲ್ವೆ ಯೋಜನೆ ಕಾಮಗಾರಿ ಶನಿವಾರದಿಂದ ಮತ್ತೆ ಆರಂಭವಾಗಲಿದೆ ಎಂದು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ತಿಳಿಸಿದ್ದಾರೆ.

ಈ ಹಿಂದೆಯೇ ಆಂಧ್ರದ ಕಂಬದೂರುವರೆಗೆ ರೈಲ್ವೆ ಕಾಮಗಾರಿ ಮುಕ್ತಾಯವಾಗಿತ್ತು. ನಂತರ ತಾಲ್ಲೂಕಿನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಯೋಜನೆಯೆ ಕೆಲಸವನ್ನು ಗುತ್ತಿಗೆದಾರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಈ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಊಹಾ ಪೋಹಗಳು ಹರಿದಾಡಿದವು. ಶಾಸಕ ವೆಂಕಟರಮಣಪ್ಪ ಅವರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿತ್ತು.

ಈ ಬಗ್ಗೆ ಯೋಜನೆಯ ಉಪ ಗುತ್ತಿಗೆದಾರ ರಾಮಕೃಷ್ಣರೆಡ್ಡಿ ಪ್ರತಿಕ್ರಿಯಿಸಿ, ಬಿಲ್ ಪಾವತಿ ಹಾಗೂ ಕಡತ ವಿಲೇವಾರಿ ತಡವಾಗುತ್ತಿದೆ. ಹೀಗಾಗಿ ಕಾಮಗಾರಿ ವಿಳಂಬಾವಾಗುತ್ತಿದೆ. ಕಾಮಗಾರಿಗೆ ಯಾರೂ ಅಡ್ಡಿಪಡಿಸಿಲ್ಲ. ಕೆಲಸ ಶೀಘ್ರ ಮುಗಿಯಲಿ ಎಂದು ಪ್ರತಿಯೊಬ್ಬರೂ ಸಹಕಾರ ನೀಡುತ್ತಿದ್ದಾರೆ ಎಂದರು.

ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಅಧಿಕಾರಿಗಳು ಬಗೆಹರಿಸುತ್ತಿದ್ದಾರೆ. ಮಾರ್ಚ್ ವೇಳೆಗೆ ನಮಗೆ ವಹಿಸಿರುವ ಕೆಲಸ ಮುಗಿಯಲಿದೆ ಎಂದರು.

ಶಾಸಕ ವೆಂಕಟರಮಣಪ್ಪ ಪ್ರತಿಕ್ರಿಯಿಸಿ, ಗುತ್ತಿಗೆದಾರರ ನಡುವಿನ ಸಮಸ್ಯೆಯಿಂದ ಸ್ಥಗಿತಗೊಳಿಸಿರಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ನಮ್ಮ ಕ್ರಶರ್ ಜಲ್ಲಿಯನ್ನೇ ಕೊಂಡುಕೊಳ್ಳಿ ಎಂದು ಎಲ್ಲಿಯೂ ಒತ್ತಾಯ ಹೇರಿಲ್ಲ. ಕಾಮಗಾರಿ ನಡೆಸುವ ಮಾರ್ಗದಲ್ಲಿ ಅಡ್ಡ ಬರುವ ಕಲ್ಲು, ಗುಟ್ಟೆಗಳನ್ನು ತೆರವುಗೊಳಿಸಲು ಅವಕಾಶವಿದೆ. ಆದರೆ ಜಲ್ಲಿಗಾಗಿ ಕಾನೂನು ಬಾಹಿರವಾಗಿ ಬಂಡೆಗಳನ್ನು ಸ್ಪೋಟಿಸುವಂತಿಲ್ಲ. ಚಲಿಸುವ ಜಲ್ಲಿ ಯಂತ್ರಗಳನ್ನು ಬಳಸುವಂತಿಲ್ಲ ಎಂದರು.

ಪ್ರತಿಕ್ರಿಯಿಸಿ (+)