ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಬಸ್‌ಪಾಸ್‌ಗೆ ಎಬಿವಿಪಿ ಆಗ್ರಹ

ಎಲ್ಲ ವರ್ಗ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುವಂತೆ ಒತ್ತಾಯ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
Last Updated 16 ಜೂನ್ 2018, 9:46 IST
ಅಕ್ಷರ ಗಾತ್ರ

ಕೋಲಾರ: ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಕೊಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯರು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಶುಕ್ರವಾರ ಧರಣಿ ನಡೆಸಿದರು.

‘ಎಲ್ಲ ವಿದ್ಯಾರ್ಥಿಗಳು ಸಮಾನರು. ಆದರೆ, ಸರ್ಕಾರ ವಿದ್ಯಾರ್ಥಿಗಳ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ. ಉಚಿತ ಬಸ್‌ಪಾಸ್‌ ನೆಪದಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿಯ ವಿಷ ಬೀಜ ಬಿತ್ತುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್‌ ಕೊಡಲಾಗುತ್ತಿತ್ತು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಸೌಲಭ್ಯ ವಿಸ್ತರಿಸುವಂತೆ ಹಿಂದಿನ ವರ್ಷ ಹೋರಾಟ ನಡೆಸಿದ್ದೆವು. ಹೋರಾಟಕ್ಕೆ ಮಣಿದ ಹಿಂದಿನ ಕಾಂಗ್ರೆಸ್‌ ಸರ್ಕಾರ ಬೇಡಿಕೆ ಈಡೇರಿಕೆಗೆ ಒಪ್ಪಿಗೆ ಸೂಚಿಸಿತ್ತು’ ಎಂದು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಚ್‌.ನವೀನ್‌ ಹೇಳಿದರು.

‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಕೊಡುವುದಾಗಿ ಘೋಷಿಸಿದ್ದರು. ಪರಿಶಿಷ್ಟರು ಮತ್ತು ಇತರ ವರ್ಗಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 22 ಲಕ್ಷ ಮಂದಿಗೆ ಬಸ್‌ ಪಾಸ್‌ ಅಗತ್ಯವಿದೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರವು ಹಿಂದಿನ ಸರ್ಕಾರದ ಆದೇಶ ಹಿಂಪಡೆದು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ಕೊಡುವಂತೆ ಆದೇಶಿಸಿದೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರ ಉಚಿತ ಬಸ್‌ ಪಾಸ್‌ ಸೌಲಭ್ಯಕ್ಕಾಗಿ ₹ 836.96 ಕೋಟಿ ಬಿಡುಗಡೆ ಮಾಡಿದೆ. ಆದರೆ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಕೊಡಲು ಹೆಚ್ಚುವರಿಯಾಗಿ ₹ 629.32 ಕೋಟಿ ಅಗತ್ಯವಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಣಕಾಸು ಇಲಾಖೆಗೆ ಪತ್ರ ಬರೆದು ಹೆಚ್ಚುವರಿ ಅನುದಾನ ಕೇಳಿದ್ದಾರೆ. ಆದರೆ, ಹಣಕಾಸು ಇಲಾಖೆಯು ಅನುದಾನ ಬಿಡುಗಡೆಗೆ ನಿರಾಕರಿಸಿದೆ’ ಎಂದರು.

ತರಾತುರಿ ನಿರ್ಧಾರ: ‘ರೈತರ ಸಾಲ ಮಾಡುವ ಉದ್ದೇಶಕ್ಕಾಗಿ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹೊರಟಿದೆ. ಇದರ ಭಾಗವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ವಿತರಣೆಯ ಆದೇಶ ಹಿಂಪಡೆದಿದೆ. ಗ್ರಾಮೀಣ ಬಡ ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಬಸ್‌ ಪಾಸ್‌ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರ ಈ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ರಾಜ್ಯದೆಲ್ಲೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವುದು ಅವರಿಗೆ ಕಷ್ಟ. ಹೀಗಾಗಿ ಕೇರಳ ಮತ್ತು ತಮಿಳುನಾಡು ರಾಜ್ಯದ ಮಾದರಿಯಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಸ್‌ ಕೊಟ್ಟರೆ ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ’ ಎಂದು ಹೇಳಿದರು.

‘ಗ್ರಾಮೀಣ ಭಾಗದ ಬಡ ರೈತರು ಬಡ್ಡಿ ಸಾಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಆದ ಕಾರಣ ಸರ್ಕಾರ ಉಚಿತ ಶಿಕ್ಷಣ, ಉಚಿತ ಪ್ರಯಾಣ ಬೇಡಿಕೆ ಈಡೇರಿಸುವ ಮೂಲಕ ವಿದ್ಯಾರ್ಥಿಗಳ ಪರ ನಿಲ್ಲಬೇಕು. ಇಲ್ಲವಾದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಎಬಿವಿಪಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರದೀಪ್, ಸುನಿಲ್, ಹರಿಪ್ರಸಾದ್, ನಾಗೇಶ್, ಶ್ರೀಧರ್, ಶಿವಕುಮಾರ್, ಚೇತನ್, ಭಾಸ್ಕರ್ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು

ಶ್ರೀನಿವಾಸಪುರ: ಉಚಿತ ಬಸ್‌ಪಾಸ್‌ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಎಬಿವಿಪಿ ಮುಖಂಡ ಕಲ್ಯಾಣ್‌ ಮಾತನಾಡಿ, ‘ಸರ್ಕಾರ ವಿಧಾನಸಭಾ ಚುನಾವಣೆಗೆ ಮೊದಲು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಪ್ರಕಟಿಸಿತ್ತು. ಆದರೆ ಈಗ ಆ ಮಾತಿನಿಂದ ಹಿಂದೆ ಸರಿದಿದೆ. ಇದರಿಂದ ಗ್ರಾಮೀಣ ಪ್ರದೇಶದಿಂದ ನಗರ ಹಾಗೂ ಪಟ್ಟಣ ಪ್ರದೇಶದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ’ ಎಂದು ದೂರಿದರು.

ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಚಿತ ಪಾಸ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ ತಹಶೀಲ್ದಾರ್‌ಗೆ ಮನವಿ ನೀಡಿದರು.

ಸರ್ಕಾರ ವಿದ್ಯಾರ್ಥಿಗಳ ವಿಚಾರದಲ್ಲಿ ತಾರತಮ್ಯ ಎಸಗುತ್ತಿರುವುದು ಖಂಡನೀಯ. ಈ ಸಂಬಂಧ ಅನೇಕ ಬಾರಿ ಧರಣಿ ಮಾಡಿ ಎಚ್ಚರಿಕೆ ನೀಡಿದ್ದರೂ ಸರ್ಕಾರ ತಪ್ಪು ತಿದ್ದಿಕೊಳ್ಳುತ್ತಿಲ್ಲ
ಅರುಣ್, ಎಬಿವಿಪಿ ತಾಲ್ಲೂಕು ಘಟಕದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT