ಶ್ರೀರಾಮುಲು ಹಣಿಯಲು ಕೈ ‘ನಾಯಕ’ರ ಪಣ

6

ಶ್ರೀರಾಮುಲು ಹಣಿಯಲು ಕೈ ‘ನಾಯಕ’ರ ಪಣ

Published:
Updated:

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಶಾಸಕ ಶ್ರೀರಾಮುಲು ಅವರ ‘‍ಪಾರುಪತ್ಯ’ವನ್ನು ಹಣಿಯಲು ಕಾಂಗ್ರೆಸ್‌ನ ‘ನಾಯಕ’ರು ಪಣ ತೊಟ್ಟಿದ್ದಾರೆ.

ರಾಜ್ಯದಲ್ಲಿರುವ ವಾಲ್ಮೀಕಿ ನಾಯಕ ಸಮುದಾಯದ ನಾಯಕತ್ವಕ್ಕಾಗಿ ಶ್ರೀರಾಮುಲು ಹಾಗೂ ಜಾರಕಿಹೊಳಿ ಕುಟುಂಬದ ಮಧ್ಯೆ ನಡೆಯುತ್ತಿರುವ ಪೈಪೋಟಿ ಈಗ ರಾಜಕೀಯ ಮುನ್ನೆಲೆಗೆ ಬಂದಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ವೇದಿಕೆಯಾಗಿಟ್ಟುಕೊಂಡು ಶ್ರೀರಾಮುಲು ಅವರ ಶಕ್ತಿಯನ್ನು ಕುಗ್ಗಿಸುವ ಕಾರ್ಯತಂತ್ರ ಈಗ ಸಿದ್ಧವಾಗಿದೆ. ಈ ತಂತ್ರಗಾರಿಕೆಗೆ ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಆ ಜಿಲ್ಲೆ ಪ್ರತಿನಿಧಿಸುವ ಕಾಂಗ್ರೆಸ್ ಶಾಸಕರಾದ ಬಿ. ನಾಗೇಂದ್ರ, ಆನಂದ್ ಸಿಂಗ್‌ ಕೂಡ ಕೈಜೋಡಿಸಿದ್ದಾರೆ. ಇದು ಚುನಾವಣಾ ರಾಜಕೀಯಕ್ಕೆ ಹೊಸ ರಂಗು ತಂದಿದೆ.

2014ರ ಲೋಕಸಭಾ ಚುನಾವಣೆ ಯಲ್ಲಿ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಶಾಸಕರಾಗಿ ಆಯ್ಕೆಯಾದರು. ಈ ಕಾರಣದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಈ ಹಿಂದೆ ಸಂಸದೆಯಾಗಿದ್ದ ಶ್ರೀರಾಮುಲು ಸೋದರಿ ಜೆ. ಶಾಂತಾ ಅವರನ್ನು ಈಗ ಮತ್ತೆ ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ಬಳ್ಳಾರಿ ಮಾತ್ರವಲ್ಲದೆ ರಾಜ್ಯದಲ್ಲಿ ಶ್ರೀರಾಮುಲು ಪ್ರಭಾವ ಕುಗ್ಗಿಸಬೇಕಾದರೆ ಶಾಂತಾ ಅವರನ್ನು ಸೋಲಿಸಲೇಬೇಕು ಎಂದು ಕಾಂಗ್ರೆಸ್‌ನ ಪ್ರಭಾವಿಗಳು ಹಟ ತೊಟ್ಟಿದ್ದಾರೆ. ಇದು ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿದೆ.

ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶಿವಕುಮಾರ್ ಅವರನ್ನು ಬದಲಾಯಿಸಿ, ಆ ಜಿಲ್ಲೆಯವರಿಗೇ ನೀಡಬೇಕು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹಾಗೂ ಅವರ ಸೋದರ ಶಾಸಕ ಸತೀಶ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಅವರ ಜತೆಗೆ ಬಳ್ಳಾರಿಯ ಕೆಲವು ಶಾಸಕರು ಕೈಜೋಡಿಸಿದ್ದರು. ಆದರೆ, ರಾಮುಲು ಹೆಡೆಮುರಿ ಕಟ್ಟಲು ಈಗ ಎಲ್ಲರೂ ಒಂದಾಗಿದ್ದಾರೆ.

ಪ್ರಭಾವ ಕುಗ್ಗಿಸಲು ತಂತ್ರ: ಬಳ್ಳಾರಿ ಜಿಲ್ಲೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಪ್ರಭಾವ ಕಡಿಮೆಯಾದ ಮೇಲೆ ಅವರ ನಿರ್ದೇಶನದಲ್ಲಿ ಆ ಸ್ಥಾನವನ್ನು ಶ್ರೀರಾಮುಲು ತುಂಬಿದ್ದಾರೆ. ಇದರಿಂದಾಗಿ, ಕಾಂಗ್ರೆಸ್ ಶಾಸಕರು ತಮ್ಮ ರಾಜಕೀಯ ನಡೆಸಲು ಕಷ್ಟವಾಗುತ್ತಿದೆ. ರಾಮುಲು ಅವರನ್ನು ಹಿಂದಿಕ್ಕಿದರೆ ಮಾತ್ರ ತಮ್ಮ ಪ್ರಭಾವ ಬೆಳೆಯಲು ಸಾಧ್ಯ ಎಂಬುದು ಶಾಸಕರಾದ ಆನಂದ ಸಿಂಗ್, ಬಿ. ನಾಗೇಂದ್ರ, ಈ. ತುಕಾರಾಂ, ಪಿ.ಟಿ. ಪರಮೇಶ್ವರ ನಾಯ್ಕ, ಭೀಮಾನಾಯ್ಕ ಮೊದಲಾದವರ ಲೆಕ್ಕಾಚಾರ.

ಬಿಜೆಪಿ ಶಾಸಕರಾಗಿದ್ದ ಅವಧಿಯಲ್ಲಿ ರೆಡ್ಡಿ ಹಾಗೂ ಶ್ರೀರಾಮುಲು ಗರಡಿಯಲ್ಲೇ ಬೆಳೆದಿರುವ ಆನಂದ ಸಿಂಗ್‌, ನಾಗೇಂದ್ರ ಈಗ ತಮ್ಮ ಹಿಂದಿನ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಅವರನ್ನು ಮೂಲೆಗುಂಪು ಮಾಡಿ ತಮ್ಮ ಅಧಿಕಾರದ ಪರಿಧಿಯನ್ನು ವಿಸ್ತರಿಸಲು ಈ ಅವಕಾಶ ಬಳಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.

ಈ ಲೆಕ್ಕಾಚಾರ ಮುಂದಿಟ್ಟು ಬಳ್ಳಾರಿ ಉಪಚುನಾವಣೆ ಎದುರಿಸುವ ಸೂತ್ರ ಈಗ ಸಿದ್ಧವಾಗಿದೆ.

ಜೆ. ಶಾಂತಾ ಎದುರು ನಾಗೇಂದ್ರ ಅವರ ಸಹೋದರ ವೆಂಕಟೇಶ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿ ಎಲ್ಲರೂ ಒಮ್ಮತದಿಂದ ಕೆಲಸ ಮಾಡಿ ಅವರನ್ನು ಗೆಲ್ಲಿಸುವುದು. ಸಹೋದರನಿಗೆ ಟಿಕೆಟ್‌ ನೀಡುವುದರಿಂದ, ಮತ್ತೆ ಸಚಿವ ಸ್ಥಾನದ ಬೇಡಿಕೆಯನ್ನು ನಾಗೇಂದ್ರ ಮುಂದಿಡಬಾರದು ಎಂಬ ಷರತ್ತನ್ನು ಇತರ ಶಾಸಕರು ಮುಂದಿಟ್ಟಿದ್ದಾರೆ.

ಈ ವಿಷಯದಲ್ಲಿ ಸಹಮತ ಮೂಡದೇ ಇದ್ದರೆ ಜಾರಕಿಹೊಳಿ ಕುಟುಂಬದ ಸಂಬಂಧಿ ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸುವ ಚಿಂತನೆ ನಡೆಸಲಾಗಿದೆ. ದೇವೇಂದ್ರಪ್ಪ ಅಭ್ಯರ್ಥಿಯಾದರೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ರಾಮುಲು ಅವರಿಗೆ ಸೋಲಿನ ರುಚಿ ತೋರಿಸುವುದು ಮತ್ತೊಂದು ಸೂತ್ರ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !