ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಸಂಬಂಧಿಯ ಬಂಧನ

ದೆಹಲಿ ಒಳಚರಂಡಿ ಕಾಮಗಾರಿ ಹಗರಣ
Last Updated 10 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಂಬಂಧಿಯೊಬ್ಬರನ್ನು ದೆಹಲಿ ಲೋಕೋಪಯೋಗಿ ಇಲಾಖೆ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ಬಂಧಿಸಿದೆ. ಬಂಧಿತ ವಿನಯ್ ಬನ್ಸಾಲ್, ಕೇಜ್ರಿವಾಲ್‌ ಅವರ ಭಾವ ಸುರೇಂದ್ರ ಬನ್ಸಾಲ್‌ರ ಮಗ.

‘ವಿನಯ್ ಬನ್ಸಾಲ್ ಪಾಲುದಾರರಾಗಿರುವ ರೇಣು ಕನ್‌ಸ್ಟ್ರಕ್ಷನ್‌ ಸಂಸ್ಥೆ ವಾಯವ್ಯ ದೆಹಲಿಯಲ್ಲಿ ಒಳಚರಂಡಿಯನ್ನು ನಿರ್ಮಿಸುವ ಗುತ್ತಿಗೆ ಪಡೆದುಕೊಂಡಿದೆ. ಗುತ್ತಿಗೆ ನೀಡುವಲ್ಲಿ ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್ ತಮ್ಮ ಪ್ರಭಾವ ಬಳಸಿ ಸಂಬಂಧಿಗೆ ಗುತ್ತಿಗೆ ಕೊಡಿಸಿದ್ದಾರೆ’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರಾಹುಲ್ ಶರ್ಮಾ ದೆಹಲಿ ಎಸಿಬಿಗೆ ದೂರು ನೀಡಿದ್ದರು.

‘ಕಳಪೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಳಿಸದಿದ್ದರೂ ಹಣ ಪಾವತಿ ಮಾಡಲಾಗಿದೆ’ ಎಂದೂ ರಾಹುಲ್ ಆರೋಪಿಸಿದ್ದರು. ಆ ದೂರಿನ ಅನ್ವಯ ಎಸಿಬಿ ಕಳೆದ ವರ್ಷವೇ ಎಫ್‌ಐಆರ್ ದಾಖಲಿಸಿತ್ತು. ಎಫ್‌ಐಆರ್‌ನಲ್ಲಿ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ಅವರ ಹೆಸರಿಲ್ಲ.

‘ರೇಣು ಕನ್‌ಸ್ಟ್ರಕ್ಷನ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ವಿನಯ್ ಈ ಹಿಂದಿನ ವಿಚಾರಣೆ ವೇಳೆ ಹೇಳಿದ್ದರು. ಆದರೆ ಆ ಕಂಪನಿಯಲ್ಲಿ ವಿನಯ್ ಶೇ 50ರಷ್ಟು ಷೇರುಗಳನ್ನು ಹೊಂದಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಅಲ್ಲದೆ ಅವರು ವಿಚಾರಣೆಗೆ ಸಹಕರಿಸುತ್ತಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ’ ಎಂದು ಎಸಿಬಿ ಮಾಹಿತಿ ನೀಡಿದೆ.

ಎಎಪಿ ಆಕ್ರೋಶ: ಕೇಜ್ರಿವಾಲ್ ಅವರ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಎಸಿಬಿ ಈ ಕ್ರಮ ತೆಗೆದುಕೊಂಡಿದೆ ಎಂದು ಎಎಪಿ ಆರೋಪಿಸಿದೆ.

‘ಮೂರು ವರ್ಷಗಳಲ್ಲಿ ದೆಹಲಿ ಪೊಲೀಸರು ಮತ್ತು ಎಸಿಬಿಯು ಕೇಂದ್ರ ಸರ್ಕಾರಕ್ಕಾಗಿ ಮಾತ್ರ ಕೆಲಸ ಮಾಡಿವೆ. ಎಎಪಿಯ ನಾಯಕರು ಮತ್ತು ಅವರ ಕುಟುಂಬಕ್ಕೆ ತೊಂದರೆ ಕೊಡುವ ಕೆಲಸವನ್ನಷ್ಟೇ ಇವು ಮಾಡುತ್ತಿವೆ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕಿಡಿಕಾರಿದ್ದಾರೆ.

‘ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ. ಕಾಮಗಾರಿಯಲ್ಲಿ ಬಳಸಿರುವ ಕಚ್ಚಾ ವಸ್ತುಗಳ ಗುಣಮಟ್ಟವನ್ನು ದೃಢಪಡಿಸಿಕೊಳ್ಳುವ ಉದ್ದೇಶದಿಂದ, ಅವುಗಳನ್ನು ಖರೀದಿಸಿದ ರಸೀದಿಗಳನ್ನು ಸಲ್ಲಿಸುವಂತೆ ನಿರ್ಮಾಣ ಸಂಸ್ಥೆಗೆ ಸೂಚಿಸಲಾಗಿತ್ತು. ಅದನ್ನೇ ಅಕ್ರಮ ಎನ್ನಲಾಗುತ್ತಿದೆ’ ಎಂದು ಎಎಪಿಯ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಟ್ವೀಟ್ ಮಾಡಿದ್ದಾರೆ.

*
ಬನ್ಸಾಲ್‌ನ ಅಕ್ರಮಗಳಿಗೆ ಅರವಿಂದ ಕೇಜ್ರಿವಾಲ್ ಪ್ರೋತ್ಸಾಹ ನೀಡಿದ್ದಾರೆ. ಕೇಜ್ರಿವಾಲ್ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
-ಮನೋಜ್ ತಿವಾರಿ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT