ಬುಧವಾರ, ಏಪ್ರಿಲ್ 8, 2020
19 °C

ಪ್ರಪಂಚದಾದ್ಯಂತ ಬಸವ ತತ್ವ ಪಸರಿಸಲಿ: ಶ್ರೀಶ್ರೀ ಗುರೂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿ, ಮತ, ಪಂಥಗಳು ಮತ್ತು ದ್ವೇಷಾಸೂಯೆಯಿಂದ ನಲುಗುತ್ತಿರುವ ಜಗತ್ತಿನ ಇಂದಿನ ಬೇಗುದಿಯನ್ನು ದೂರ ‌ಮಾಡಲು ಎಲ್ಲರೂ ಒಂದುಗೂಡಿ ಪ್ರಪಂಚದಾದ್ಯಂತ ಬಸವಣ್ಣನವರ ವಚನ ಸಂದೇಶ ಸಾರುವ ಅಗತ್ಯವಿದೆ’ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಆಶಿಸಿದರು.

ಅಸಂಖ್ಯ ಪ್ರಮಥರ ಗಣಮೇಳದ ಧ್ಯೇಯವಾಕ್ಯ, ‘ಜಾಗತಿಕ ಶಾಂತಿ ಮತ್ತು ಪ್ರಗತಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಕೆಲವರು ಸಂಘರ್ಷಗಳನ್ನು ಬಿತ್ತಿ ಅದರ ಫಸಲಿನಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ‌. ಆದರೆ, ಶರಣರು, ಎಲ್ಲ ಸಮುದಾಯ, ನಾಯಕರನ್ನು ಒಂದೆಡೆ ಸೇರಿಸುವ ಮೂಲಕ ಸಮನ್ವಯಕಾರರಾಗಿ ಇಂದು ನಮಗೆ ಶಿವಪಥವನ್ನು ತೋರಿಸಿದ್ದಾರೆ. ನಾವೆಲ್ಲರೂ ಈ ಪಥದಲ್ಲಿ ಮುನ್ನಡೆಯುಬೇಕಾದ ಅಗತ್ಯವಿದೆ’ ಎಂದರು.

ಸುತ್ತೂರು ಶಿವರಾತ್ರೀಶ್ವರ ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ಜಗತ್ತಿನಾದ್ಯಂತ ಇಂದು ದ್ವೇಷಾಸೂಯೆ ತಾಂಡವವಾಡುತ್ತಿದೆ. ರಾಗ, ದ್ವೇಷಗಳನ್ನು ದೂರ ಮಾಡಿ ನಮ್ಮನ್ನು ನಾವು ಬದಲಾವಣೆಗೆ ಒಳಪಡಿಸಿಕೊಳ್ಳಬೇಕು. ಹಾಗಾಗಿ ಇಂತಹ ಕಾರ್ಯಕ್ರಮ ಇಂದು ಹೆಚ್ಚು ಔಚಿತ್ಯಪೂರ್ಣವಾಗಿದೆ’ ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ಶೋಷಿತರ, ನೊಂದವರ ಪರವಾದ ಧರ್ಮ ಎಂದರೆ ಅದು ಲಿಂಗಾಯತ ಧರ್ಮ. ಇಂತಹ ಮೇರು ಮಟ್ಟದ ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವ ಧರ್ಮವನ್ನು ವಿಶ್ವಸಂಸ್ಥೆಯೂ ಮಾನ್ಯ ಮಾಡಿದೆ’ ಎಂದು ವಚನ ಸಾಹಿತ್ಯದ ಹೆಗ್ಗಳಿಕೆಯನ್ನು ಕೊಂಡಾಡಿದರು.

ಮತ್ತೊಬ್ಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಮನುಷ್ಯ ಮತ್ತೊಬ್ಬರ ಏಳಿಗೆ ಬಯಸಲು ಸಾಧ್ಯವಾಗದೇ ಹೋದರೆ ಕೇಡನ್ನು ಮಾತ್ರ ಬಯಸಬಾರದು’ ಎಂದರು.

ಸಂಯುಕ್ತ ಜನತಾದಳದ ಮುಖಂಡ ಮಹಿಮ ಜೆ.ಪಟೇಲ್‌ ಮಾತನಾಡಿ, ‘ಎಲ್ಲೆಡೆ ಸದ್ಭಾವನೆ ಹರಿಯಬೇಕಿದೆ. ಇಂದು ಸುದ್ದಿ ಮಾಧ್ಯಮಗಳಲ್ಲಿ ಬರೀ ಕೆಟ್ಟ ಮತ್ತು ಮನಸ್ಸಿಗೆ ಘಾಸಿಯಾಗುವ ವಿಚಾರಗಳೇ ತುಂಬಿರುತ್ತವೆ. ಆದ್ದರಿಂದ, ನಮ್ಮ ಕೆಟ್ಟ ಆಲೋಚನೆಗಳನ್ನು ದೂರ ಮಾಡಲು ಧ್ಯಾನ ಪ್ರಬಲ ಮಾಧ್ಯಮ’ ಎಂದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ‘ಇದೊಂದು ಅಪರೂಪದ ಸ್ಮರಣೀಯ ಕಾರ್ಯಕ್ರಮ’ ಎಂದು ಶ್ಲಾಘಿಸಿದರು. ಇಸ್ಲಾಂ ಧರ್ಮಗುರು ಇಬ್ರಾಹಿಂ ಸಕಾಫಿ, ನಗರದ ಆರ್ಚ್‌ ಬಿಷಪ್‌ ರೆ.ಎಬಿಪಿ ಪೀಟರ್‌ ಮಜಾಡೊ, ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಅಕ್ಕ ಅನ್ನಪೂರ್ಣ ತಾಯಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು