ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಸೂರ್ಯರ ಮಾಧ್ಯಮಗಳ ಮೇಲಿನ ನಿರ್ಬಂಧ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ತೇಜೋವಧೆ ಆರೋಪ
Last Updated 11 ಏಪ್ರಿಲ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಎಸ್. ತೇಜಸ್ವಿ ಸೂರ್ಯ ಅವರು, ಮಾಧ್ಯಮಗಳ ವಿರುದ್ಧ ದಾವೆ ಸಲ್ಲಿಸಿ ಪಡೆದಿರುವ ಸಿವಿಲ್‌ ಕೋರ್ಟ್‌ನ ನಿರ್ಬಂಧದ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.

ಈ ಕುರಿತಂತೆ ದೆಹಲಿಯ ‘ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ’ಯ ಅಧ್ಯಕ್ಷ ಪ್ರೊ.ತ್ರಿಲೋಚನ ಶಾಸ್ತ್ರಿ ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಹರೀಶ್ ಬಿ.ನರಸಪ್ಪ, ‘ಅಧೀನ ನ್ಯಾಯಾಲಯದ ಆದೇಶ ಮತದಾರರು ಅವರ ಬಗ್ಗೆ ನಿಖರ ಮತ್ತು ಪೂರ್ಣ ಮಾಹಿತಿಗಳನ್ನು ಅರಿಯುವುದರಿಂದ ವಂಚಿತರನ್ನಾಗಿ ಮಾಡಿದೆ. ತೇಜಸ್ವಿ ಅವರು ತಮ್ಮ ವಿರುದ್ಧದ ಯಾವುದೇ ಅಹವಾಲುಗಳಿದ್ದಲ್ಲಿ ಅದನ್ನು ಚುನಾವಣಾ ಆಯೋಗದ ಮುಂದೆಯೇ ಮನವಿ ಸಲ್ಲಿಸಿ ಪರಿಹಾರ ಪಡೆಯಬೇಕು’ ಎಂದು ಪ್ರತಿಪಾದಿಸಿದರು.

ಇದನ್ನು ಅಲ್ಲಗಳೆದ ಪ್ರತಿವಾದಿ ತೇಜಸ್ವಿ ಸೂರ್ಯ ಪರ ಹಾಜರಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಈ ಅರ್ಜಿ ದುರುದ್ದೇಶಪೂರಿತ. ಅರ್ಜಿದಾರರು ಅಸಲು ದಾವೆಯ ಪ್ರತಿವಾದಿಗಳಲ್ಲ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರೂ ಅಲ್ಲ. ಹಾಗಾಗಿ ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸುವ ಯಾವುದೇ ಹಕ್ಕು ಅವರಿಗಿಲ್ಲ’ ಎಂದರು.

‘ಈ ಪ್ರಕರಣದ ಯಾವೊಬ್ಬ ಪ್ರತಿವಾದಿಯೂ ಸಿವಿಲ್‌ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿಲ್ಲ. ಆದರೆ, ದೂರದ ದೆಹಲಿಯ ಈ ಸಂಸ್ಥೆ ಇಲ್ಲಿ ಬಂದು ಇದನ್ನು ಪ್ರಶ್ನಿಸಿರುವುದು ಸರಿಯಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು.

ಪ್ರಕರಣವೇನು?: ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಕುರಿತಂತೆ ತೇಜಸ್ವಿ ಸೂರ್ಯ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವೆ ಸಲ್ಲಿಸುವ ಮೂಲಕ ‘ನನ್ನ ವಿರುದ್ಧ ಮಾಧ್ಯಮಗಳು ಯಾವುದೇ ತಪ್ಪು, ದುರದ್ದೇಶಪೂರಿತ, ಮಾನಹಾನಿಗೊಳಿಸುವ ಮತ್ತು ಘನತೆಗೆ ಕುಂದು ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ನೀಡಬೇಕು’ ಎಂದು ಕೋರಿದ್ದರು.

ಇದನ್ನು ಮಾನ್ಯ ಮಾಡಿದ್ದ ಸಿವಿಲ್‌ ನ್ಯಾಯಾಲಯ ಪತ್ರಿಕೆಗಳು, ಟಿ.ವಿ.ಚಾನೆಲ್‌ಗಳು, ರೇಡಿಯೊ, ಕೇಬಲ್‌, ಸಾಮಾಜಿಕ ಜಾಲತಾಣಗಳು ಅಥವಾ ಅಂತರ್ಜಾಲದಲ್ಲಿ ಯಾವುದೇ ರೀತಿಯ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ನಿರ್ಬಂಧ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT