ಹಳೆ ಟ್ವೀಟ್‌ಗಳು ತೆರೆದಿಟ್ಟ ತೇಜಸ್ವಿ ಸೂರ್ಯರೊಳಗಿನ ಧರ್ಮಾಂಧತೆ, ಲಿಂಗ ತಾರತಮ್ಯ

ಬುಧವಾರ, ಏಪ್ರಿಲ್ 24, 2019
32 °C

ಹಳೆ ಟ್ವೀಟ್‌ಗಳು ತೆರೆದಿಟ್ಟ ತೇಜಸ್ವಿ ಸೂರ್ಯರೊಳಗಿನ ಧರ್ಮಾಂಧತೆ, ಲಿಂಗ ತಾರತಮ್ಯ

Published:
Updated:

ಬೆಂಗಳೂರು: ‘ನನ್ನನ್ನು ಧರ್ಮಾಂಧ ಎಂದು ಕರೆಯಿರಿ’.. ಹೀಗೆಂದು ಕರೆಸಿಕೊಳ್ಳುವುದರಲ್ಲಿ ಬಿಜೆಪಿ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಯಾವುದೇ ಮುಜುಗರವಿರಲಿಲ್ಲ ಎನ್ನುವುದನ್ನು ಅವರ ಹಳೆಯ ಟ್ವೀಟ್‌ಗಳಿಂದ ಬಹಿರಂಗಗೊಂಡಿದೆ.

ತೇಜಸ್ವಿ ಅವರಲ್ಲಿ ಕೇವಲ ಧರ್ಮಾಂಧತೆಯಲ್ಲ, ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆಯೂ ಸಾಕಷ್ಟು ಅಸ್ಥಿರತೆಯ ಧೋರಣೆಗಳಿವೆ. ಹೀಗೆ ಅವರ ಟ್ವೀಟ್‌ಗಳನ್ನು ಸಂಗ್ರಹಿಸಿ ಹಫ್‌ಪೋಸ್ಟ್‌ ವರದಿ ಮಾಡಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತೇಜಸ್ವಿ ಸೂರ್ಯ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿಯೇ ಅತ್ಯಂತ ಕಿರಿಯರು. 

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಜೊತೆಗೆ ಬೆಂಗಳೂರು ದಕ್ಷಿಣದಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.

ನಾಮಪತ್ರ ಸಲ್ಲಿಕೆ ಒಂದು ದಿನ ಇರುವಾಗ ಟಿಕೆಟ್‌ ಪ್ರಕಟಿಸಿದ ಬಿಜೆಪಿ ಎಲ್ಲಾ ವದಂತಿ ಹಾಗೂ ಮಾತುಗಳಿಗೂ ತೆರೆ ಎಳೆದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ತೇಜಸ್ವಿ ಸೂರ್ಯ ಅವರ ಹೆಸರನ್ನು ಅಂತಿಮಗೊಳಿಸಿತು.

28 ವರ್ಷ ವಯಸ್ಸಿನ ತೇಜಸ್ವಿ ಸೂರ್ಯ ಟಿಕೆಟ್‌ ಸಿಕ್ಕ ಖುಷಿಯನ್ನು ಮಧ್ಯರಾತ್ರಿಯೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 

'ಓ ದೇವರೆ ನಾನು ಇದನ್ನು ನಂಬಲು ಆಗುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಮತ್ತು ಬೃಹತ್ ರಾಜಕೀಯ ಪಕ್ಷದ ಅಧ್ಯಕ್ಷರು ನಂಬಿಕೆ, ವಿಶ್ವಾಸಗಳನ್ನು ಈ 28 ವರ್ಷದ ಯುವಕನ ಮೇಲೆ ಇಟ್ಟು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಹೇಳಿದ್ದಾರೆ. ಇದು ಕೇವಲ ಬಿಜೆಪಿಯಲ್ಲಿ ಮಾತ್ರ ನಡೆಯುತ್ತದೆ' ಎಂದು ಬರೆದುಕೊಂಡಿದ್ದರು.

ಜೊತೆಗೆ ‘ವಿನೀತ, ಕೃತಜ್ಞ, ಈ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, ಎಷ್ಟೇ ಧನ್ಯವಾದ ಹೇಳಿದರೂ ಅದು ಸಾಲದು. ನನ್ನ ಕೊನೆ ಉಸಿರಿರುವ ತನಕ ನನ್ನ ತಾಯ್ನಾಡಿನ ಸೇವೆ ಸಲ್ಲಿಸುವ ಪ್ರಮಾಣ ಮಾಡುತ್ತೇನೆ. ಹೀಗೆ ಮಾಡುವುದರ ಮೂಲಕವಷ್ಟೇ ನನ್ನ ಕೃತಜ್ಞತೆಗಳನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಹೀಗೆ ತೇಜಸ್ವಿ ಟ್ವೀಟ್‌ಗಳನ್ನು ಮಾಡುತ್ತಿದ್ದಂತೆ ಅವರ ಬಗ್ಗೆ ತಿಳಿಯುವ ಕುತೂಹಲದಿಂದ ಟ್ವೀಟಿಗರು ಅವರ ಹಿಂದಿನ ಟ್ವೀಟ್‌ಗಳನ್ನು ಜಾಲಾಡಿದಾಗ, ಅವರ ಕಟ್ಟಾ ಹಿಂದುತ್ವವಾದಿ ಮುಖ ಬಹಿರಂಗಗೊಂಡಿದೆ. ಇದಕ್ಕೆ ‘ಧರ್ಮಾಂಧ’ ಎಂದು ಕರೆಸಿಕೊಳ್ಳುವುದಕ್ಕೆ ಯಾವುದೇ ಮುಜುಗರವಿರಲಿಲ್ಲ’ ಎಂದು ಅವರು ಮಾಡಿದ ಟ್ವೀಟ್‌ಯೇ ಸಾಕ್ಷಿ. 

ಶಾಸಕ ಬಿ.ಎನ್‌.ವಿಜಯಕುಮಾರ್‌ ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಂತರ ಬಿಜೆಪಿ ಏಕೆ ‘ಹಿಂದೂಗಳನ್ನು ಒಗ್ಗೂಡಿ’ಸುವ ಪಕ್ಷವಾಗಿರಬೇಕು ಎನ್ನುವುದನ್ನು ಸೂರ್ಯ ಅವರು 2018ರ ನಂತರದ ಮಾಡಿದ ಈ ಸರಣಿ ಟ್ವೀಟ್‌ಗಳು ವಿವರಿಸುತ್ತವೆ.

ಕೆಲ ದಿನಗಳ ಹಿಂದಷ್ಟೇ ಅವರು ಟ್ವೀಟ್‌ ಮಾಡಿದ ತಮ್ಮದೇ ಭಾಷಣದ ತುಣಿಕಿನಲ್ಲಿ, ‘ಯಾರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿಲ್ಲವೊ ಅವರು ಭಾರತದ ವಿರುದ್ಧವಾಗಿದ್ದಾರೆ ಎಂದೇ ಅರ್ಥ’ ಎಂಬ ಮಾತುಗಳಿದ್ದವು.

2014ರಲ್ಲಿ ಅವರು ಮಾಡಿದ ಟ್ವೀಟ್‌ ಬಗ್ಗೆ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿತ್ತು. ನಂತರ ಆ ಟ್ವೀಟ್‌ ಅನ್ನು ಅವರು ಅಳಿಸಿಹಾಕಿದ್ದಾರೆ. ಆ ಟ್ವೀಟ್‌ನಲ್ಲಿ ತೇಜಸ್ವಿ, ‘ಮಹಿಳಾ ಮೀಸಲಾತಿ ವಿಷಯವೊಂದನ್ನು ಹೊರತು ಪಡಿಸಿ ಮೋದಿ ಅವರ ಎಲ್ಲಾ ಕಾರ್ಯಸೂಚಿಗಳನ್ನು ನಾನು ಒಪ್ಪುತ್ತೇನೆ’ ಎಂದು ಹೇಳಿದ್ದರು.

ಈ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದ್ದ ದಿ ನ್ಯೂಸ್‌ ಮಿನಿಟ್‌, ‘ಆ ರೀತಿ ಯಾವಾಗ ಹೇಳಿದ್ದೆ ಎಂದು ನನಗೆ ನೆನಪಿಲ್ಲ. ದಿನ ಪೂರ್ತಿ ಚುನಾವಣೆಯ ಕೆಲಸಗಳಲ್ಲಿ ನಿರತನಾಗಿದ್ದೇನೆ. ಹಳೆಯ ಟ್ವೀಟ್‌ ಬಗ್ಗೆ ಜನರು ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ, ಆ ಬಗ್ಗೆ ಪ್ರಶ್ನಿಸುವವರಿಗೆ ತಕ್ಕ ಉತ್ತರ ನೀಡುವ ಜಾಣ್ಮೆ ನನಗಿದೆ’ ಎಂದು ಉತ್ತರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 2

  Sad
 • 1

  Frustrated
 • 45

  Angry

Comments:

0 comments

Write the first review for this !