ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಣಗಾಪುರ, ಅಂಜನಾದ್ರಿಯಲ್ಲಿ ನಿರ್ಬಂಧ ಮುಂದುವರಿಕೆ

Last Updated 8 ಜೂನ್ 2020, 21:19 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿದ್ದು, ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಂದಿರ ಹಾಗೂ ಘತ್ತರಗಾದ ಭಾಗ್ಯವಂತಿ ದೇವಸ್ಥಾನ ಪ್ರವೇಶ ನಿಷೇಧವನ್ನು ಜೂನ್‌ 22ರವರೆಗೂ ಮುಂದುರಿಸಲಾಗಿದೆ.

ದಕ್ಷಿಣ ಭಾರತದ ಪ್ರಸಿದ್ಧ ದರ್ಗಾಗಳಲ್ಲಿ ಒಂದಾದ ಇಲ್ಲಿನ ಖಾಜಾ ಬಂದಾ ನವಾಜ್‌ ದರ್ಗಾದಲ್ಲಿ ಜೂನ್‌ 11ರ ನಂತರ ಪ್ರಾರ್ಥನೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಲಾಗಿದೆ.

ಕೊಪ್ಪಳ ಗವಿಮಠಕ್ಕೆ ಭಕ್ತರ ಪ್ರವೇಶ ಆರಂಭವಾಗಿದೆ. ಆದರೆ, ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಜೂನ್‌ 30ರ ವರೆಗೆ ಪ್ರವೇಶ ಇಲ್ಲ.

ಬೀದರ್‌ನ ಗುರುನಾನಕ ಝೀರಾ ಗುರುದ್ವಾರದಲ್ಲಿ ಗ್ರಂಥಸಾಹೀಬ ಪಠಣ ಹಾಗೂ ಕೀರ್ತನ ಕಾರ್ಯಕ್ರಮ ಎಂದಿನಂತೆ ನಡೆಯಿತು. ಸೇವಕರು ಮಾತ್ರ ಇದ್ದರು. ಭಕ್ತರು ಇಲ್ಲದ ಕಾರಣ ಲಂಗರ್‌ ಸಹ ಬಾಗಿಲು ಮುಚ್ಚಿತ್ತು. ಐತಿಹಾಸಿಕ ನರಸಿಂಹ ಝರಣಾ ಗುಹಾದೇವಾಲಯ ಆರು ತಿಂಗಳಿನಿಂದ ಬಂದ್‌ ಇದ್ದು, ಇನ್ನೂ ಆರಂಭಗೊಂಡಿಲ್ಲ.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಸ್ಥಳೀಯ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಇದೇ 15ರ ನಂತರ ಎಲ್ಲ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಭಕ್ತರ ಸಂಖ್ಯೆ ವಿರಳ
ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಗಳ ಬಾಗಿಲನ್ನು ದರ್ಶನಕ್ಕೆ ಸೋಮವಾರ ತೆರೆದಿದ್ದು, ಭಕ್ತರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭಕ್ತರು ಕಂಡು ಬಂದರು. ಮಧ್ಯಾಹ್ನ ಎರಡು ಗಂಟೆವರೆಗೆ ಅಂದಾಜು ಐದು ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದರು.

ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯವೂ ತೆರೆದಿತ್ತು. ಭಕ್ತರ ಸಂಖ್ಯೆ ಕಡಿಮೆ ಇತ್ತು.

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇಗುಲದಲ್ಲೂ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮಂಗಳಾರತಿ ತಟ್ಟೆ ಇಡದಂತೆ ಅಧಿಕಾರಿಗಳು ತಡೆದ ಕಾರಣ ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಭಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರದಲ್ಲೂ ಎಂದಿನಂತೆ ಪೂಜೆ ನೆರವೇರಿಸಲಾಯಿತು.

ಸಿದ್ಧಾರೂಢ, ಮಾರಿಕಾಂಬೆಯ ದರ್ಶನ ಪಡೆದ ಭಕ್ತರು
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ದೇವಸ್ಥಾನಗಳನ್ನು ಸೋಮವಾರ ತೆರೆಯಲಾಗಿದ್ದು ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಯಿತು.

ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಬಹುತೇಕ ಕಡೆ ಪೂಜೆ, ಪ್ರಸಾದ, ತೀರ್ಥ ವಿತರಣೆ ಇರಲಿಲ್ಲ. ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಮಠದಲ್ಲಿ ಬೆಳಿಗ್ಗೆ 6.30ರಿಂದ ಸಿದ್ಧಾರೂಢರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಿದ್ಧಾರೂಢರ ಗದ್ದುಗೆ ಇರುವ ಗರ್ಭಗುಡಿಗೆ ಪ್ರವೇಶವಿರಲಿಲ್ಲ. ಹೊರಗಡೆಯಿಂದಲೇ ಸಾವಿರಾರು ಭಕ್ತರು ದರ್ಶನ ಪಡೆದರು.

ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಾಲಯಕ್ಕೆ ಮೊದಲ ದಿನ ಉತ್ತರ ಕನ್ನಡ, ಹಾವೇರಿ, ಉಡುಪಿ ಜಿಲ್ಲೆಗಳ 1,500ಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿನ ಸಂಗಮೇಶ್ವರ ದೇವಸ್ಥಾನ ಹಾಗೂ ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ದರ್ಶನ ಪಡೆದರು.

ಹೊಸಪೇಟೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಉದ್ದಾನ ವೀರಭದ್ರ ದೇವಸ್ಥಾನ, ಗಾಳೆಮ್ಮ ದೇವಸ್ಥಾನ, ನಗರದ ಆಂಜನೇಯ ಸ್ವಾಮಿ ದೇವಸ್ಥಾನ ಬೆಳಿಗ್ಗೆ ಬಾಗಿಲು ತೆರೆಯಿತು. ಮೊದಲ ದಿನವಾಗಿದ್ದರಿಂದ ಬೆರಳೆಣಿಕೆಯಷ್ಟು ಭಕ್ತರು ಮಾತ್ರವೇ ದೇವಸ್ಥಾನಗಳತ್ತ ಮುಖ ಮಾಡಿದ್ದರು.

ಉಚ್ಚಂಗಿದುರ್ಗ, ಉಕ್ಕಡಗಾತ್ರಿಯಲ್ಲಿ ದರ್ಶನ ಪಡೆದ ಭಕ್ತರು
ದಾವಣಗೆರೆ: ಮಧ್ಯ ಕರ್ನಾಟಕ ಭಾಗದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಉಚ್ಚಂಗಿದುರ್ಗ, ಉಕ್ಕಡಗಾತ್ರಿ ಹಾಗೂ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿಯ ದೇವಾಲಯಗಳ ಬಾಗಿಲನ್ನು ಸೋಮವಾರ ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ದರ್ಶನಕ್ಕೆ ಬಂದಿದ್ದರು.

ಸಾರಿಗೆ ಸೌಲಭ್ಯ ಆರಂಭಗೊಳ್ಳದೇ ಇರುವುದರಿಂದ ಉಕ್ಕಡಗಾತ್ರಿ ದೇವಾಲಯಕ್ಕೆ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ದೇವರ ಪಟ್ಟದಗೂಳಿಗೆ ಪೂಜೆ ಸಲ್ಲಿಸುವ ಮೂಲಕ ಹೊರಮಠ ಮತ್ತು ಒಳಮಠಗಳಲ್ಲಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದಿನಕ್ಕೆ ಮೂರು ಸಾವಿರಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಸೋಮವಾರ ಸುಮಾರು 800 ಭಕ್ತರು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT