ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೇ ಹೆಚ್ಚುತ್ತಿದೆ ಅಕ್ಕಿ ದರ

ಮಳೆ–ವಿದ್ಯುತ್‌ ಕೊರತೆಯಿಂದ ಕುಸಿದ ಉತ್ಪಾದನೆ * ಪೂರೈಕೆ ಗಣನೀಯ ಇಳಿಕೆ
Last Updated 9 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು:ಮಳೆ ಅಭಾವ ಹಾಗೂ ವಿದ್ಯುತ್‌ ಕೊರತೆಯ ಕಾರಣ ಭತ್ತದ ಉತ್ಪಾದನೆ ಕುಸಿತಗೊಂಡಿದ್ದು, ನಗರಕ್ಕೆ ಪೂರೈಕೆಯಾಗುತ್ತಿದ್ದ ಅಕ್ಕಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ, ಪ್ರತಿ ಕೆ.ಜಿ. ಅಕ್ಕಿಯ ಬೆಲೆ ₹4ರಿಂದ ₹6ರಷ್ಟು ಹೆಚ್ಚಾಗಿದೆ.

ಸಾಮಾನ್ಯವಾಗಿ ಗಂಗಾವತಿ ಮತ್ತು ಕಂಪ್ಲಿ ಭಾಗದಿಂದ ನಗರಕ್ಕೆ ಹೆಚ್ಚು ಅಕ್ಕಿ ಪೂರೈಕೆಯಾಗುತ್ತದೆ. ‘ಬೆಳೆಗಳಿಗೆ ನೀರಿಲ್ಲ. ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ತತ್ಪರಿಣಾಮ ಭತ್ತದ ಉತ್ಪಾದನೆ ಕುಸಿದಿದೆ. ಮೊದಲ ಬೆಳೆಗೆ (ಬೇಸಿಗೆ ಬೆಳೆ) ಶೇ 40ರಷ್ಟು ನೀರು ಪೂರೈಕೆಯಾಗಿಯೇ ಇಲ್ಲ. ಎರಡನೇ ಬೆಳೆ (ಮಳೆಗಾಲದ ಬೆಳೆ) ಬೆಳೆಯುವ ಶೇ 90ರಷ್ಟು ಪ್ರದೇಶದಲ್ಲಿ ಭತ್ತದ ನಾಟಿ ಮಾಡಿಯೇ ಇಲ್ಲ.ಹೀಗಾಗಿ, ಎರಡನೇ ಬೆಳೆ ಶೇ 70ರಿಂದ 80ರಷ್ಟು ಕಡಿಮೆಯಾಗಲಿದೆ’ ಎನ್ನುತ್ತಾರೆ ಗಂಗಾವತಿಯ ಎಸ್‌ಎಲ್‌ವಿ ಇಂಡಸ್ಟ್ರೀಸ್‌ನ ಮಾಲೀಕ ನಾಗೇಶ್ವರ ರಾವ್‌ ಕಲ್ಯಾಣಂ.

‘ಈಗ ಉತ್ಪಾದನೆ ವೆಚ್ಚವೂ ಹೆಚ್ಚಾಗಿದೆ. ಮೊದಲು, ಒಂದು ಕ್ವಿಂಟಲ್‌ ಅಕ್ಕಿ ಮಾಡಲು ₹200 ವೆಚ್ಚವಾಗುತ್ತಿತ್ತು. ಈಗ ₹400 ಖರ್ಚಾಗುತ್ತದೆ. ಡೀಸೆಲ್‌ ಬೆಲೆಯೂ ಜಾಸ್ತಿ ಆಗಿದೆ. ಅಲ್ಲದೆ, ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ, ನಗರಕ್ಕೆ ಈ ಸಮಯದಲ್ಲಿ ಪೂರೈಕೆ ಆಗುತ್ತಿದ್ದ ಅಕ್ಕಿಯ ಪ್ರಮಾಣದಲ್ಲಿ ಶೇ 30ರಷ್ಟು ಕಡಿಮೆಯಾಗಿದೆ’ ಎಂದು ಅವರು ವಿವರಿಸಿದರು.

‘ತುಂಗಭದ್ರಾ ನದಿ ನೀರಿನಿಂದ ಬೆಳೆದ ಅಕ್ಕಿ ರುಚಿ ಹೆಚ್ಚು. ಆದರೆ, ಕೃಷ್ಣಾ ಹಾಗೂ ಭೀಮಾ ನದಿ ನೀರು ಬಳಸಿ ಬೆಳೆವ ಭತ್ತ ಸ್ವಲ್ಪ ಸಪ್ಪೆ. ತುಂಗಾಭದ್ರಾ ನದಿ ತೀರ ಪ್ರದೇಶದಲ್ಲಿ ಬೆಳೆವ ಭತ್ತಕ್ಕೆ ಆಂಧ್ರಪ್ರದೇಶದಲ್ಲಿ ಬೇಡಿಕೆ ಹೆಚ್ಚು. ಈ ಬಾರಿ, ಆಂಧ್ರಪ್ರದೇಶದಲ್ಲಿಯೂ ಮಳೆಯಾಗದ ಕಾರಣ, ಅಲ್ಲಿಗೆ ಅಕ್ಕಿ ಪೂರೈಕೆ ಮತ್ತಷ್ಟು ಹೆಚ್ಚಾಗಿದೆ’ ಎಂದು ಕಲ್ಯಾಣಂ ಹೇಳಿದರು.

‘ಗಂಗಾವತಿ, ಸಿಂಧನೂರು, ರಾಯಚೂರು ಭಾಗದಲ್ಲಿ ಈ ಬಾರಿ ನೀರಿನ ಕೊರತೆಯಾಗಿ, ಶೇ 20ರಷ್ಟು ಅಕ್ಕಿ ಮಾತ್ರ ನಗರಕ್ಕೆ ಬಂತು. ಆಂಧ್ರದ ನೆಲ್ಲೂರಿನಿಂದಲೂ ನಮಗೆ ಅಕ್ಕಿ ಪೂರೈಕೆಯಾಗುತ್ತಿತ್ತು. ಅಲ್ಲಿ 8 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಅಲ್ಲಿಯೂ ಮಳೆ ಕಡಿಮೆಯಾಗಿರುವುದರಿಂದ ಈ ಬಾರಿ 4 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬೆಳೆಯಲಾಗಿದೆ. ಆದ್ದರಿಂದ ಆಂಧ್ರದಲ್ಲಿ ಪ್ರತಿ ಕೆ.ಜಿ ಅಕ್ಕಿ ದರ ₹ 7ರಷ್ಟು ಜಾಸ್ತಿಯಾಗಿದೆ. ಕಳೆದ ವರ್ಷ ನೆಲ್ಲೂರಿನಿಂದ ಪ್ರತಿ ಕೆ.ಜಿ.ಗೆ ₹20ರಿಂದ ₹28ರಂತೆ ಅಕ್ಕಿ ಪೂರೈಸಿದವರು, ಈ ವರ್ಷ ₹35 ನೀಡುತ್ತೇವೆ ಎಂದರೂ ಕೊಡುತ್ತಿಲ್ಲ’ ಎಂದು ಹೇಳುತ್ತಾರೆ ಮಧ್ಯವರ್ತಿಗಳಾದ ಯೋಗೇಶ್‌ ಮತ್ತು ರಾಜೇಶ್.

‘ನಗರಕ್ಕೆ ದಿನಕ್ಕೆ 20 ಸಾವಿರದಿಂದ 25 ಸಾವಿರ ಕ್ವಿಂಟಲ್‌ಗಳಷ್ಟು ಅಕ್ಕಿ ಬೇಕಾಗುತ್ತದೆ. ಸದ್ಯಕ್ಕೆ ಸಾಕಷ್ಟು ಅಕ್ಕಿ ದಾಸ್ತಾನಿದೆ. ಹಾಗಾಗಿ ಕೊರತೆ ಇರುವುದಿಲ್ಲ. ಆದರೆ, ದರ ಮತ್ತಷ್ಟು ಹೆಚ್ಚಾಗಬಹುದು’ ಎಂದು ವರ್ತಕ ಆರ್. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT