ಎಸಿಬಿ ದಾಳಿ: ಮೂಟೆಗಟ್ಟಲೆ ಹಣ, ಮಣಗಟ್ಟಲೆ ಆಭರಣ!

7
ಕೆಐಎಡಿಬಿ ಅಧಿಕಾರಿ ಸ್ವಾಮಿ ಬಳಿ ₹ 4.52 ಕೋಟಿ, ಬಿಡಿಎ ಅಧಿಕಾರಿ ಗೌಡಯ್ಯ ಬಳಿ ₹ 75 ಲಕ್ಷ

ಎಸಿಬಿ ದಾಳಿ: ಮೂಟೆಗಟ್ಟಲೆ ಹಣ, ಮಣಗಟ್ಟಲೆ ಆಭರಣ!

Published:
Updated:

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ಬೆಳಿಗ್ಗೆ ‘ಭರ್ಜರಿ ಬೇಟೆ’ಯಾಡಿದ್ದು, ಅಧಿಕಾರಿಗಳಿಬ್ಬರ ಬಳಿ ₹ 5.52 ಕೋಟಿ ನಗದು, ಚಿನ್ನಾಭರಣ ಸೇರಿದಂತೆ ಅಪಾರ ಮೊತ್ತದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.

ಎಸಿಬಿ ರಚನೆಯಾದ ಬಳಿಕ ನಡೆದ ಅತ್ಯಂತ ದೊಡ್ಡ ‘ಶಿಕಾರಿ’ ಇದಾಗಿದೆ. ಇಡೀ ದಾಳಿ ಸಿನಿಮೀಯ ಶೈಲಿಯಲ್ಲಿ ನಡೆದಿದೆ. ಅಧಿಕಾರಿಗಳ ಕಣ್ತಪ್ಪಿಸಲು 14ನೇ ಅಂತಸ್ತಿನಲ್ಲಿ ಇರುವ ಅಧಿಕಾರಿಯೊಬ್ಬರ ಮನೆಯಿಂದ ಹಣವನ್ನು ಸೂಟ್‌ಕೇಸ್‌ ಹಾಗೂ ಗೋಣಿ ಚೀಲದಲ್ಲಿ ತುಂಬಿ ಕೆಳಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌. ಸ್ವಾಮಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ ಆಫೀಸರ್‌ ಎಸ್‌.ಜಿ. ಗೌಡಯ್ಯ ಆದಾಯ ಮೀರಿ ಅಕ್ರಮವಾಗಿ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ ಎಂದು ಬಂದ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ. ಅಧಿಕಾರಿಗಳ ಮನೆ, ಕಚೇರಿಗಳೂ ಸೇರಿದಂತೆ 8 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ.

ಕೋರ್ಟ್‌ ವಾರಂಟ್‌ ಪಡೆದ ಎಸಿಬಿ ಅಧಿಕಾರಿಗಳ ತಂಡ ಮಲ್ಲೇಶ್ವರದ ‘ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌’ನಲ್ಲಿರುವ ಸ್ವಾಮಿ ಮನೆಗೆ ಧಾವಿಸಿತು. ಆಗಷ್ಟೆ ಮನೆಯವರು ನಿದ್ದೆಯಿಂದ ಎದ್ದಿದ್ದರೂ ಬಾಗಿಲು ತೆರೆಯಲಿಲ್ಲ. ಅಪಾರ್ಟ್‌ಮೆಂಟ್‌ ಸುತ್ತುವರಿದಿದ್ದ ತಂಡ ಸ್ವಾಮಿ ಅವರ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಪೊಲೀಸರು ಬಲವಂತವಾಗಿ ಬಾಗಿಲು ಒಡೆದು ಒಳ ಪ್ರವೇಶಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಅಷ್ಟು ಹೊತ್ತಿಗೆ, 14ನೇ ಮಹಡಿಯಲ್ಲಿರುವ ಸ್ವಾಮಿ ಮನೆಯ ಸ್ನಾನದ ಕೋಣೆ ಕಡೆಯಿಂದ ಹಣ ತುಂಬಿದ ಸೂಟ್‌ಕೇಸ್‌ ದೊಪ್ಪನೆ ಕೆಳಗೆ ಬಿತ್ತು. ಅದರ ಹಿಂದೆಯೇ 15ನೇ ಮಹಡಿಯಲ್ಲಿರುವ ಸ್ವಾಮಿ ಸೋದರಿ ಮನೆಯಿಂದ ಹಣ ತುಂಬಿದ ಚೀಲವನ್ನು ಹಗ್ಗದಲ್ಲಿ ಕಟ್ಟಿ ಕೆಳಗೆ ಬಿಸಾಡಲಾಯಿತು. ಸೂಟ್‌ಕೇಸ್‌ ಸಪ್ಪಳದಿಂದ ಜಾಗೃತರಾದ ಎಸಿಬಿ ಅಧಿಕಾರಿಗಳು ಹಣವನ್ನು ವಶ‍ಪಡಿಸಿಕೊಂಡರು.

ಎಸಿಬಿ ಐಜಿಪಿ ಚಂದ್ರಶೇಖರ್‌ ಹಾಗೂ ಎಸ್ಪಿ ಡಾ.ಸಂಜೀವ್‌ ಪಾಟೀಲ ದಾಳಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 62

  Happy
 • 9

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !