ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೊಳ್ಳುವ ಮನಸ್ಸಿನ ಮಾಲತಿ ಮೇಡಂ

Last Updated 1 ಏಪ್ರಿಲ್ 2019, 20:18 IST
ಅಕ್ಷರ ಗಾತ್ರ

ಸಾಗರ: ‘ರಂಗಭೂಮಿಯಲ್ಲಿ ಸಿದ್ಧಾಂತಕ್ಕಿಂತ ಮಾನವೀಯ ಸಂಬಂಧ ಮುಖ್ಯ. ನಾವು ಎಲ್ಲರನ್ನೂ ಒಳಗೊಂಡೇ ಕೆಲಸ ಮಾಡಬೇಕು’ ಎಂದು ಎಸ್. ಮಾಲತಿ ಅವರು ಹೇಳಿದ್ದ ಮಾತು ಎಂದಿಗೂ ನನ್ನೊಳಗೆ ಪ್ರತಿಧ್ವನಿಸುತ್ತಲೇ ಇರುತ್ತದೆ.

ಹೀಗೆ ಎಲ್ಲರನ್ನೂ ಒಳಗೊಳ್ಳುವ ವ್ಯಕ್ತಿತ್ವದ ಅವರು ಈಗ ನಮ್ಮಿಂದ ದೂರವಾಗಿದ್ದಾರೆ ಎಂದು ಗೊತ್ತಾದಾಗ ಮನಸ್ಸು ಭಾರವಾಗಿದೆ.

ಈಗ್ಗೆ 22 ವರ್ಷಗಳ ಹಿಂದೆ ಮೊದಲ ಬಾರಿಗೆ ನಾನು ಸಾಗರಕ್ಕೆ ಬಂದಾಗ ರಂಗ ಬದುಕಿನ ನಿರಂತರತೆಯ ಭರವಸೆ ಹುಟ್ಟಿಸಿದವರಲ್ಲಿ ಮಾಲತಿ ಮೇಡಂ ಪ್ರಮುಖರು. ಅವರು ಆಗಷ್ಟೆ ಬೆಂಗಳೂರಿನಿಂದ ಸಾಗರಕ್ಕೆ ಬಂದು ಇಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಿದ್ಧರಾಗಿದ್ದರು.

ವೈಯಕ್ತಿಕ ಬದುಕಿನಲ್ಲಿ ಅನುಭವಿಸಿದ ನೋವು, ಸಂಕಟಗಳನ್ನು ರಂಗಭೂಮಿ ಚಟುವಟಿಕೆ, ಬರವಣಿಗೆಗಳ ಮೂಲಕವೇ ಸಂತೈಸಿಕೊಳ್ಳಬೇಕು ಎಂದು ಅವರು ದೃಢ ನಿಶ್ಚಯ ಮಾಡಿದಂತಿತ್ತು. ಹಾಗೆಂದು ಯಾವತ್ತೂ ಅವರು ತಮ್ಮ ದುಃಖ, ದುಗುಡ, ದುಮ್ಮಾನಗಳನ್ನು ಮತ್ತೊಬ್ಬರ ಎದುರು ತೋರಿಸಿ ಅನುಕಂಪ ಪಡೆಯಲು ಪ್ರಯತ್ನಿಸಿದವರೇ ಅಲ್ಲ.

ಎಸ್. ಮಾಲತಿ ಅವರ ನಿರ್ದೇಶನದಲ್ಲಿ ‘ಸಾಯೋ ಆಟ’ ನಾಟಕದಲ್ಲಿ ಪಾತ್ರ ಮಾಡಿದ್ದೆ. ಕೆಳದಿ ಗ್ರಾಮದಲ್ಲಿ ಅದರ ಪ್ರದರ್ಶನವಾಗುವಾಗ ಪ್ರಸಾಧನಕ್ಕೆ ಪುರುಷೋತ್ತಮ ತಲವಾಟ ಬಂದಿದ್ದರು.

ಗ್ರೀನ್ ರೂಂನಲ್ಲಿ ನನ್ನನ್ನು ಪಕ್ಕಕ್ಕೆ ಕರೆದ ಮಾಲತಿ ಅವರು ಪುರುಷೋತ್ತಮ ಅವರ ಹೆಗಲ ಮೇಲೆ ಕೈ ಇಟ್ಟು, ‘ನಾನಿವರನ್ನು ಮದುವೆ ಆಗುತ್ತಿದ್ದೇನೆ. ಹೇಗಿದೆ ಜೋಡಿ’ ಎಂದು ಕೇಳಿದ್ದು ಇವತ್ತಿಗೂ ಕಣ್ಣಮುಂದೆ ಬರುತ್ತಿದೆ. ಈ ಮೂಲಕ ಬದುಕಿನಲ್ಲಿ ಹೊಸ ದಾರಿಯನ್ನು ಕಂಡುಕೊಳ್ಳುವ ಭರವಸೆ ಅವರ ಕಣ್ಣುಗಳಲ್ಲಿ ಚಿಮ್ಮಿತ್ತು.

ರಂಗಭೂಮಿಗೆ ಬದ್ಧತೆ, ಶಿಸ್ತು ಇರಲೇಬೇಕು ಎಂದು ಸದಾ ಅವರು ಹೇಳುತ್ತಿದ್ದರು. ನಾಟಕದ ತಾಲೀಮಿಗೆ ಯಾವುದಾದರೂ ಕಲಾವಿದರು ಬರುವುದು 10 ನಿಮಿಷ ತಡವಾದರೆ ಚಡಪಡಿಸುತ್ತಿದ್ದರು. ತಡವಾಗಿ ಬಂದವರಿಗೆ ಕಣ್ಣಲ್ಲೇ ಗದರಿಸಿ, ಸಿಟ್ಟು ಪ್ರಕಟಿಸುತ್ತಿದ್ದರು. ನಂತರ ಅವರ ಯೋಗಕ್ಷೇಮ ವಿಚಾರಿಸಿ, ಉಪಚರಿಸಿ ನಾಟಕದಲ್ಲಿ ತೊಡಗುವಂತೆ ಮಾಡುತ್ತಿದ್ದರು.

ಹೆಣ್ಣುಮಕ್ಕಳು ಕಾಲೇಜು ಮೆಟ್ಟಿಲು ಹತ್ತುವುದೇ ಕಷ್ಟ ಎನ್ನುವ ಕಾಲದಲ್ಲಿ ಸಾಂಪ್ರದಾಯಿಕ ಚೌಕಟ್ಟನ್ನು ದಾಟಿ ರಂಗಭೂಮಿ, ಸಾಹಿತ್ಯದಲ್ಲಿ ಮಾಡಿದ ಅವರ ಸಾಧನೆ ಇತರರಿಗೆ ಸ್ಫೂರ್ತಿ.

ನೇರ, ನಿಷ್ಠುರ ವ್ಯಕ್ತಿತ್ವದ ಜೊತೆಗೆ ಸ್ನೇಹ, ಕಾಳಜಿ ಹೊಂದಿದ್ದ ಮಾಲತಿ ಮೇಡಂ ನನ್ನೊಳಗೆ ಒಂದು ಭಾವವಾಗಿ ಚಿರಸ್ಥಾಯಿಯಾಗಿದ್ದಾರೆ. ಅವರೊಂದಿಗಿನ ಒಡನಾಟ, ಪ್ರೀತಿಯ ಅಪ್ಪುಗೆ ಇವೆಲ್ಲವೂ ಇನ್ನು ನೆನಪಷ್ಟೆ ಎಂಬುದೇ ಬೇಸರದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT